ರಾಯಚೂರು ಜಿಲ್ಲೆಯಲ್ಲಿರುವ ವಾಣಿಜ್ಯೋದ್ಯಮಿಗಳ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿಯಿದೆ. ರಸ್ತೆ, ಚರಂಡಿ, ಬೀದಿ ದೀಪ, ಉದ್ಯಮಕ್ಕೆ ಸಮರ್ಪಕ ನೀರು ಸರಬರಾಜು, ಹೆಚ್ಚುವರಿ ವಿದ್ಯುತ್ ಹಾಗೂ ತೆರಿಗೆ ವಿನಾಯತಿ ಸೇರಿದಂತೆ ಕೈಗಾರಿಕೆಯ ಅನೇಕ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತೇವೆ. ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಬಲವರ್ಧನೆಗೆ ಸರ್ಕಾರ ಬದ್ಧವಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎ.ನ್ಎಸ್ ಬೋಸರಾಜು ತಿಳಿಸಿದರು.
ರಾಯಚೂರಿನಲ್ಲಿ ವಾಣಿಜ್ಯೋದ್ಯಮಿಗಳೊಂದಿಗೆ ನಡೆದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ರಾಯಚೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಸರಕು ಸಾಗಾಣಿಕೆಗೆ ಅನುಕೂಲ ಮಾಡಿಕೊಡಲು ನಗರದ ಕಲ್ಮಲಾ ಬೈಪಾಸ್ ಮೂಲಕ ಹಾದುಹೋಗುವ ಮಂತ್ರಾಲಯ ಹೆದ್ದಾರಿಯನ್ನು ಅಗಲೀಕರಣ ಮಾಡಲು ಅನುಮೋದನೆ ನೀಡುವಂತೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಉದ್ಯಮಿ ಸಾವಿತ್ರಿ ಪುರುಷೋತ್ತಮ ಮತನಾಡಿ, “ರಾಯಚೂರು ಜಿಲ್ಲೆಗೆ ಹೊಂದಿಕೊಂಡಂತೆ ಕೃಷ್ಣಾ ಮತ್ತು ತುಂಗಭದ್ರ ಎರಡು ನದಿಗಳಿವೆ. ಆದರೆ, ನಮಗೆ ಸರಿಯಾದ ನೀರು ದೊರೆಯುತ್ತಿಲ್ಲ. ನಾವು ವೈಟಿಪಿಎಸ್ ಮತ್ತು ಆರ್‌ಟಿಪಿಎಸ್ ನಿಂದ ರಾಜ್ಯಕೆ 40% ವಿದ್ಯುತ್ ನೀಡುತ್ತಿದ್ದೇವೆ. ಆದರೆ, ನಮಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ” ಎಂದು ದೂರಿದರು.
ಕರ್ನಾಟಕ ರೈತ ಸಂಘ ಹಸಿರು ಸೇನೆ ಅದ್ಯಕ್ಷರಾದ ಚಾಮರಸ ಮಾಲೀಪಾಟೀಲ್ ಮಾತನಾಡಿ, “ಎಪಿಎಂಸಿ ಕಾಯ್ದೆಯ ಕೆಲ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರ ಗಂಭಿರವಾಗಿ ಚರ್ಚಿಸಿ, ಕ್ರಮ ಕೈಗೊಳ್ಳಬೇಕು. ರೈತರ ಒತ್ತಾಯದ ಮೇರೆಗೆ ಎಲ್ಲರಿಗೂ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು” ಎಂದರು.
“ರೈತರು ಹತ್ತಿ, ಮೆಣಸಿನಕಾಯಿ, ತೊಗರಿ, ಭತ್ತ ಹಾಗೂ ಇತ್ತಿತರೆ ಬೆಳೆಗಳನ್ನು ಬೆಳೆದರೆ ಮಾತ್ರವೇ ಕೈಗಾರಿಕೆ ಉದ್ಯಮಗಳು ಉಳಿಯಲು ಸಾಧ್ಯ. ಹಾಗಾಗಿ, ರೈತರ ಸಂರಕ್ಷಣೆಗೆ ಸರ್ಕಾರದ ಜೊತೆ ಕೈಗಾರಿಕೋದ್ಯಮಿಗಳು ಕೆಲಸ ಮಾಡಬೇಕು” ಎಂದು ತಿಳಿಸಿದರು.
ಲಕ್ಷ್ಮೀ ರಡ್ಡಿ ಮಾತನಾಡಿ, “ಗಂಜ್ ವೃತ್ತದಿಂದ ಶಕ್ತಿನಗರದವರೆಗೆ ಭಾರಿ ಗಾತ್ರದ ವಾಹನಗಳು ಸಂಚರಿಸುತ್ತವೆ. ಹೀಗಾಗಿ, ರಸ್ತೆಗೆ ಡಿವೈಡರ್ ನಿರ್ಮಾಣ ಮಾಡಬೇಕು. ಇಂಡಸ್ಟ್ರೀಯಲ್ ಬಡವಾಣೆಗಳಲ್ಲಿ ಪ್ರತಿದಿನ ಅನೇಕ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗುತ್ತಿವೆ. ಇದನ್ನು ತಡೆಗಟ್ಟಲು ಬಡವಾಣೆಯಲ್ಲಿ ಪ್ರತ್ಯೇಕ ಪೋಲೀಸ್ ಠಾಣೆ ನಿರ್ಮಿಸಬೇಕು. ರಾಯಚೂರಿನಲ್ಲಿ ಮೇಗಾ ಟೆಕ್ಸಟೈಲ್ ಪಾರ್ಕ್ ನಿರ್ಮಾಣಕ್ಕೆ 1,000 ಎಕರೆ ಜಾಗ ಮಾಂಜೂರು ಮಾಡಬೇಕು. ವಿವಿಧ ಇಂಡಸ್ರ‍್ಟೀಗಳಿಗೆ ನೀರಿನ ತೊಂದರೆಯಾಗುತ್ತಿದೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕಾಗಿದೆ” ಎಂದು ಒತ್ಥಾಯಿಸಿದರು.
ಸಭೆಯಲ್ಲಿ ವಾಣಿಜ್ಯೋದ್ಯಮಿ ವಿಷ್ಣುಕಾಂತ ಬುತುಡಾ, ರಾಮಚಂದ್ರ ಪ್ರಭು, ಶ್ರೀನಿವಾಸ್ ರಡ್ಡಿ, ಕಾಂಗ್ರೆಸ್ ನ ಹಿರಿಯರಾದ ಕೆ ಶಾಂತಪ್ಪ, ಜಯಣ್ಣ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಬಸವರಾಜ್ ರಡ್ಡಿ, ಆಂಜನೇಯ್ಯ, ಸೇರಿದಂತೆ ಹಲವರು ಇದ್ದರು.