ಒಂದು ಕಡೆ ಭಾರತ 'ವಿಶ್ವಗುರು' ಆಗಲು ಕನಸು ಕಾಣುತ್ತಿದ್ದರೆ, ಇನ್ನೊಂದು ಕಡೆ ಪಣಪಿಲದಂತಹ ಗ್ರಾಮಗಳು ಇನ್ನೂ ಬೆಳಕನ್ನೂ ಕಾಣದೆ ಕತ್ತಲೆಯಲ್ಲೇ ಕಾಲ ಕಳೆಯುತ್ತಿವೆ
ಭಾರತ ಆರ್ಥಿಕತೆಯಲ್ಲಿ ವಿಶ್ವದ ನಾಲ್ಕನೇ ದೊಡ್ಡ ರಾಷ್ಟ್ರ ಎಂಬ ಹೆಸರಿನಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ. ಒಂದೆಡೆ ಗಗನಚುಂಬಿ ಕಟ್ಟಡಗಳು, ಅತ್ಯಾಧುನಿಕ ನಗರಗಳು ತಲೆ ಎತ್ತುತ್ತಿದ್ದರೆ, ಇನ್ನೊಂದೆಡೆ ಅರಣ್ಯ ಮಧ್ಯದಲ್ಲಿ ಜೀವನ ನಡೆಸುತ್ತಿರುವ ಅದೆಷ್ಟೋ ಕುಟುಂಬಗಳು ಮಾನವ ಹಕ್ಕುಗಳಿಗಾಗಿ, ಮೂಲ ಸೌಕರ್ಯಗಳಿಗಾಗಿ ಇಂದಿಗೂ ಹೋರಾಟ ನಡೆಸುತ್ತಲೇ ಇವೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಪಣಪಿಲ ಗ್ರಾಮದ ಒಂಟೆದ ಕಜೆ ಮನೆ ಪ್ರದೇಶದಲ್ಲಿರುವ ಮೂಲ ಸೌಕರ್ಯ ಪಡೆಯುವಲ್ಲಿ ಹಿಂದೆಬಿದ್ದ ಕುಟುಂಬಗಳು ಕಳೆದ 50 ವರ್ಷಗಳಿಂದ ಕನಿಷ್ಠ ಓಡಾಡಲು ಸರಿಯಾದ ರಸ್ತೆ ಮಾರ್ಗವಿಲ್ಲದೆ ಪರದಾಡುತ್ತಿವೆ.

ಈ ಕುರಿತು ಈ ದಿನ.ಕಾಮ್ ಜತೆ ಅಲ್ಲಿನ ನಿವಾಸಿ ಯಕ್ಷಿತಾ ಮಾತನಾಡಿ, “ನಾವು ಈ ಜಾಗದಲ್ಲಿ ಕಳೆದ 50 ವರ್ಷಗಳಿಂದ ವಾಸವಿದ್ದೇವೆ. ಇಲ್ಲಿವರೆಗೂ ನಮಗೆ ಮೂಲ ಸೌಕರ್ಯಗಳು ಸಿಕ್ಕಿಲ್ಲ. ದಿನನಿತ್ಯದ ಸಾಮಗ್ರಿಗಳಿಗೆ ಅಳಿಯೂರು ಪೇಟೆಯನ್ನು ಅವಲಂಬಿಸಿರುತ್ತೇವೆ. ಮನೆಯಿಂದ ಪೇಟೆಗೆ ಸುಮಾರು 7 ಕಿ.ಮೀ ದೂರುವಿದ್ದು, ಅಲ್ಲಿಗೆ ತಲುಪಲು ಯಾವುದೇ ರಸ್ತೆ, ಬಸ್ ಸೌಕರ್ಯವಿಲ್ಲ. ನಿತ್ಯ ಕಾಡು ದಾರಿಯಲ್ಲಿ ಸಾಗಬೇಕು. ಕೆಲವೊಂದು ಬಾರಿ ಪೇಟೆಗೆ ಹೋಗುವ ವೇಳೆ ಕಾಡುಪ್ರಾಣಿಗಳ ದಾಳಿ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇತ್ತ ಮಳೆಗಾಲ ಪ್ರಾರಂಭವಾದರೆ ಸಾಕು, ಇಂಬಳಗಳ ಹಾವಳಿ ಹೆಚ್ಚಾಗಿರುತ್ತದೆ. ಗುಡ್ಡ, ಬೆಟ್ಟಗಳ ಮಧ್ಯದ ದಾರಿಯಲ್ಲಿ ಸಾಗಿ ಪೇಟೆಗೆ ತಲುಪಿ ಮರಳಿ ಬದುಕಿ ಮತ್ತೆ ಮನೆ ಸೇರುತ್ತೇವೆ ಅನ್ನುವ ನಂಬಿಕೆ ಕೂಡಾ ತೀರಾ ಕಡಿಮೆ” ಎಂದರು ಆತಂಕದಿಂದಲೇ.
“ಇಂದಿನ ವಿದ್ಯುತ್ ಸಂಪರ್ಕಿತ ಯುಗದಲ್ಲೂ ನಮ್ಮ ಮನೆಗೆ ಈವರೆಗೂ ವಿದ್ಯುತ್ ತಲುಪಿಲ್ಲ. ಸಂಜೆಯಾಗುತ್ತಿದ್ದಂತೆ ಮನೆ ಅಂಧಕಾರದಲ್ಲಿ ಮುಳುಗುತ್ತದೆ. ಮಕ್ಕಳಿಗೆ ಓದಲು ಸಾಧ್ಯವಿಲ್ಲ. ಮೊಬೈಲ್ ಚಾರ್ಜ್ ಮಾಡುವುದು, ಲೈಟ್ ಬಳಸುವುದು ಇವೆಲ್ಲಾ ಇಲ್ಲದಂತೆಯೇ ಜೀವನ ಸಾಗಿಸಬೇಕಾಗಿದೆ. ಜತೆಗೆ ಪಕ್ಕದಲ್ಲೇ ಚಿಮುಕು ನೀರು ಹರಿದು ಹೋಗುತ್ತಿದ್ದರೂ ಕುಡಿಯುವ ನೀರಿಗಾಗಿ ನಾವು ಅಲೆದಾಡುವುದು ಇನ್ನೂ ತಪ್ಪಿಲ್ಲ”

“ಇತ್ತ ರಸ್ತೆ ಸಂಪರ್ಕ ಸರಿಯಾಗಿ ಇಲ್ಲದೇ ಇರುವುದರಿಂದ ಹೆರಿಗೆ ಸಂದರ್ಭದಲ್ಲಿ ಅಗತ್ಯ ತುರ್ತು ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಇಳಿವಯಸ್ಸಿನವರಿಗೆ ತುಂಬಾನೇ ತೊಂದರೆಯಾಗುತ್ತಿದೆ” ಎಂದು ಅವರು ಅಳಲು ತೋಡಿಕೊಂಡರು.
“ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಟಾಚಾರಕ್ಕೆ ಸ್ಥಳಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ನಾವು ಪರಿಹಾರ ನೀಡುತ್ತೇವೆ ಎಂದು ರಾಜಕಾರಣಿಗಳ ರೀತಿ ಅಧಿಕಾರಿಗಳು ಕೂಡ ಆಶ್ವಾಸನೆ ನೀಡಿ ಹೋದವರು ಮತ್ತೆ ಈ ಕಡೆಗೆ ತಲೆ ಕೂಡ ಹಾಕುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ರವಿ ಮಾತನಾಡಿ, “ನಾವು ಮನೆಯಲ್ಲಿರುವ ಮಕ್ಕಳು, ಹತ್ತಿರದ ಶಾಲೆಗೆ ಕಾಲ್ನಡಿಗೆಯಲ್ಲಿ ಹೋಗುತ್ತೇವೆ. ಕಾಡುಪ್ರದೇಶ ದಾಟಿ ಶಾಲೆಗೆ ಹೋಗುವುದು ಪ್ರತಿ ದಿನದ ಸಂಕಷ್ಟ. ಕಾಡಿನ ಮಧ್ಯದ ದಾರಿ ಆದ್ದರಿಂದ ಶಾಲೆ-ಕಾಲೇಜಿಗೆ ಹೋಗುವುದು ತುಂಬಾ ಕಷ್ಟ. ಮಳೆಗಾಲದಲ್ಲಿ ಕಾಲು ದಾರಿಗೆ ಮರಗಳು ಬಿದ್ದ ಪರಿಣಾಮ ಹಲವು ಬಾರಿ ಅರ್ಧದಿಂದ ಮನೆಗೆ ಹಿಂತಿರುಗಿದ್ದೇನೆ. ಇದೇ ಪರಿಸ್ಥಿತಿ ಮುಂದೆಯು ನಿರ್ಮಾಣವಾದರೆ ಕಾಲೇಜು ಬಿಡುತ್ತೇನೆ. ಇದಲ್ಲದೆ ಬೇರೆ ದಾರಿ ಇಲ್ಲ” ಎಂದು ಈದಿನಕ್ಕೆ ಪ್ರತಿಕ್ರಿಯಿಸಿದರು.
ಸ್ಥಳೀಯ ಯಶ್ವಂತ್ ಮಾತನಾಡಿ, “ಸರ್ಕಾರದವರು ಎಲ್ಲರಿಗೂ ಮೂಲಭೂತ ಸೌಕರ್ಯವನ್ನು ನೀಡಿದ್ದೇವೆ, ಯಾರು ಕೂಡ ಮೂಲ ಸೌಕರ್ಯದಿಂದ ವಂಚಿತರಾಗಿಲ್ಲ ಎಂದು ಹೇಳುತ್ತಾರೆ. ನಮ್ಮಂತಹ ಹಲವು ಕುಟುಂಬಗಳು ಮೂಲ ಸೌಕರ್ಯವಿಲ್ಲದೆ ಪರದಾಟ ನಡೆಸುತ್ತಿವೆ. ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಒಮ್ಮೆ ನಿಮ್ಮ ಅಧಿಕಾರಿಗಳನ್ನು ಕೇಳಿ ನೋಡಿ! ಅದೆಷ್ಟೋ ಕುಟುಂಬಗಳಿಗೆ ಇಂದಿಗೂ ಮೂಲ ಸೌಕರ್ಯವಿಲ್ಲ ಅನ್ನುವುದು ನಿಮಗೆ ಗೊತ್ತಾಗುತ್ತದೆ. ರಾಜ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅನೇಕ ಕುಟುಂಬಗಳಿಗೆ ಮೂಲ ಸೌಕರ್ಯಗಳು ಮರೀಚಿಕೆಯಾಗಿದೆ” ಎಂದರು.

ಪಣಪಿಲ ಗ್ರಾಮದಲ್ಲಿರುವ ಈ ಸಮಸ್ಯೆ ಭಾರತದ ಆರ್ಥಿಕ ಬೆಳವಣಿಗೆ ಮತ್ತು ವಾಸ್ತವದ ನಡುವಿನ ವಿರೋಧಾಭಾಸವನ್ನು ಸ್ಪಷ್ಟಪಡಿಸುತ್ತದೆ. ಇಂದಿನ ಗ್ಲೋಬಲ್ ಇಂಡಿಯಾದ ಬೆಳಕು-ನೆರಳುಗಳ ನಡುವೆ, ಕೆಲವು ಕುಟುಂಬಗಳು ಇನ್ನೂ ತಮಗೆ ಸಿಗಬೇಕಾದ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವುದು ವಿಷಾದಕರ. ವಿದ್ಯುತ್, ಕುಡಿಯುವ ನೀರು, ರಸ್ತೆ ಸಂಪರ್ಕ, ಆರೋಗ್ಯ ಹಾಗೂ ಶಿಕ್ಷಣ ಸೌಕರ್ಯಗಳ ಕೊರತೆಯು ಅಭಿವೃದ್ಧಿಯ ಮಾನವೀಯ ಆಯಾಮವನ್ನೇ ಪ್ರಶ್ನಿಸುವಂತಾಗಿದೆ.
ಇದನ್ನೂ ಓದಿ: ಮಂಗಳೂರು | ಭಾರೀ ಮಳೆ ಮುನ್ಸೂಚನೆ; ಆರೆಂಜ್ ಅಲರ್ಟ್
ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ರಾಜಕೀಯ ಆಶ್ವಾಸನೆಗಳ ನಡುವೆಯೇ ಬದುಕು ಸಾಗಿಸುತ್ತಿದ್ದಾರೆ ಅಲ್ಲಿಯವರು. ಒಂದು ಕಡೆ ಭಾರತ ‘ವಿಶ್ವಗುರು’ ಆಗಲು ಕನಸು ಕಾಣುತ್ತಿದ್ದರೆ, ಇನ್ನೊಂದು ಕಡೆ ಪಣಪಿಲದಂತಹ ಗ್ರಾಮಗಳು ಇನ್ನೂ ಬೆಳಕನ್ನೂ ಕಾಣದೆ ಕತ್ತಲೆಯಲ್ಲೇ ಕಾಲ ಕಳೆಯುತ್ತಿವೆ ಎಂಬುದು ಸ್ಪಷ್ಟ. ಈ ಹಿನ್ನಲೆಯಲ್ಲಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ತಕ್ಷಣ ಜಾಗೃತರಾಗಬೇಕು. ಬೆಳವಣಿಗೆಯ ಹೆಸರಿನಲ್ಲಿ ಹೊರಸೌಂದರ್ಯಕ್ಕೆ ಮಾತ್ರ ಗಮನಕೊಡದೆ, ಗ್ರಾಮೀಣ ಭಾರತವೂ ಸಮಾನವಾಗಿ ಅಭಿವೃದ್ದಿಯ ಹಕ್ಕುದಾರರೇ ಎಂಬ ಸತ್ಯಕ್ಕೆ ಮಾನ್ಯತೆ ನೀಡಬೇಕು. ಈಗಲಾದರೂ ಅಂತಹ ಕುಟುಂಬಗಳನ್ನು ಗುರುತಿಸಿ ಸಮಾಜದ ಮುನ್ನೆಲೆಗೆ ತರಲಿ ಎನ್ನುವುದೇ ಈ ದಿನದ ಆಶಯ.