ಮಂಡ್ಯ ಎಂದರೆ ಇಂಡಿಯಾ ಎಂಬ ಮಾತಿದೆ. ಭಾರತವು ಕೃಷಿ ಪ್ರಧಾನ ದೇಶ ಹಾಗೆಯೇ ಮಂಡ್ಯವೂ ಕೃಷಿ ಪ್ರಧಾನ ಜಿಲ್ಲೆ. ಅತಿ ಕಡಿಮೆ ನಗರೀಕರಣ ಇರುವ ಜಿಲ್ಲೆ ಮಂಡ್ಯ. ಅಬ್ದುಲ್ ಕಲಾಂ ಅವರ ಪುರದ ಆಶಯ ಮಂಡ್ಯದಲ್ಲಿ ಈಡೇರಿಸಲು ಸಾಧ್ಯವೇ ಎಂಬುದನ್ನು ಹೆಚ್ಚು ಚರ್ಚೆ ಮಾಡಬೇಕಿದೆ ಎಂದು ಜಾಗೃತ ಕರ್ನಾಟಕದ ಸದಸ್ಯ ಪೃಥ್ವಿರಾಜ್ ಹೇಳಿದರು.
ಕೃಷಿ ಹಾಗೂ ಗ್ರಾಮೀಣ ಭಾಗಗಳು ಎಲ್ಲಾ ರೀತಿಯಲ್ಲಿಯೂ ನಗಣ್ಯವಾಗುತ್ತಿರುವಾಗ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ವಿಚಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಮಂಡ್ಯ ಜಿಲ್ಲೆಯಲ್ಲಿ ಶೇಕಡ 51 ರಷ್ಟು ಬರಡು ಭೂಮಿ ಇದೆ. 49ರಷ್ಟು ಮಾತ್ರ ಕೃಷಿಗೆ ಅನುಕೂಲವಾಗಿದೆ. ಮಂಡ್ಯ ಎಂದಾಗ ಮೂಲಭೂತವಾಗಿ ನೆನಪಿಗೆ ಬರುವುದು ಕೃಷಿ ಮತ್ತು ಇಲ್ಲಿನ ಗ್ರಾಮೀಣ ಪ್ರದೇಶಗಳು. ಈ ವಿಷಯಗಳಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚೆಯ ಅವಶ್ಯಕತೆ ಇದೆ ಎಂಬುದನ್ನು ಮುಖ್ಯವಾಗಿಟ್ಟುಕೊಂಡು ಈ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 1000 ಗಂಡಿಗೆ 875 ಹೆಣ್ಣು ಲಿಂಗಾನುಪಾತ ಇದೆ. ಮಂಡ್ಯದಲ್ಲಿ ಹೆಚ್ಚು ಯುವಕರು ಬೆಂಗಳೂರಿನಂತಹ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಕೃಷಿ ಮೌಲ್ಯ ವರ್ಧನೆ ಮಾಡಿ, ಉದ್ಯೋಗ ಸೃಷ್ಟಿ ಮಾಡುವುದು ಹೇಗೆ ಹಾಗೂ ಮಧ್ಯವರ್ತಿಗಳ ಹಾವಳಿ, ಸಾಲದ ಹೊರೆಯ ಸಮಸ್ಯೆ ಪರಿಹರಿಸುವುದು ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಜೊತೆಗೆ ವೈಜ್ಞಾನಿಕ ಪದ್ಧತಿ, ಮಿಶ್ರ ಬೇಸಾಯ, ಬೆಳೆ ಪರಿವರ್ತನೆ ತರುವುದು ಹೇಗೆ ಎಂಬ ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಈ ನಿಟ್ಟಿನಲ್ಲಿ ಹೇಗೆ ಕಾರ್ಯಪ್ರವೃತ್ತರಾಗಬೇಕು ಎಂಬುದನ್ನು ಚರ್ಚಿಸಬೇಕಾದ ಅಗತ್ಯವಿದೆ” ಎಂದರು.

ಜಾಗೃತ ಕರ್ನಾಟಕದ ಸಂಚಾಲಕ ಬಿ ಸಿ ಬಸವರಾಜು ಮಾತನಾಡಿ, “ಜಾಗೃತ ಕರ್ನಾಟಕ ಪ್ರಾರಂಭವಾಗಿದ್ದು, ಪ್ರಾದೇಶಿಕ ಪಕ್ಷವಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಯೋಗಿಕಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಹಾಗೂ ರಾಜಕೀಯವಾಗಿ ಅಧಿಕಾರಕ್ಕೆ ಬರಬೇಕು ಎಂದು. ಪಕ್ಷವಾಗಿ ಹೊರಬರುವುದು ಕಷ್ಟಸಾಧ್ಯ ಎಂಬುದನ್ನು ಮನಗಂಡ ಬಳಿಕ, ತೆರಿಗೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ನಡೆದ ಘಟನೆಗಳನ್ನು ಅರ್ಥೈಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹಾಗೂ ಜನರಿಗೆ ಸರ್ಕಾರದಿಂದ ಕೊಡಬೇಕಾದ ಮೂಲಭೂತ ಸೌಕರ್ಯಗಳನ್ನು ಕೊಡಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇವೆ” ಎಂದರು.
“ಜಾಗೃತ ಕರ್ನಾಟಕ ರಾಜಕೀಯ ಸಂಘಟನೆಯಾಗಿ ರಾಜಕಾರಣವನ್ನು ಬದಲಿಸುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ಧರ್ಮಾಧಾರಿತ ರಾಜಕಾರಣ ಮಾಡುವ ಕೆಲಸ ಮಾಡುತ್ತಿರುತ್ತಿದೆ. ಅದು ಮುಂದುವರಿಯುತ್ತಿರುವಾಗ ರಾಜಕಾರಣ ಪರಿವರ್ತನೆ ಒಂದು ರೀತಿಯಲ್ಲಿ ಕಷ್ಟಸಾಧ್ಯವೇ ಅನಿಸುತ್ತಿದೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕು, ಬಿಜೆಪಿ ಮತ್ತು ಆರ್. ಎಸ್. ಎಸ್ ಅನ್ನು ಮುಖ್ಯವಾಹಿನಿ ರಾಜಕಾರಣದಿಂದ ದೂರ ಸರಿಸಿ ನಗಣ್ಯ ಮಾಡಿ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯ | ಕೃಷಿಯೇ ನಮ್ಮ ಭವಿಷ್ಯ: ಕವಿತಾ ಕುರುಗಂಟಿ ಅಭಿಮತ
“ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕಾರಣವನ್ನು ಹಾಗೂ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ ಸಂಘಟನೆಯಾಗಿ ಶಕ್ತಿಯುತ ಸಂಘಟನೆಯಾಗಿ ಜಾಗೃತ ಕರ್ನಾಟಕ ಕೆಲಸ ಮಾಡಬೇಕು. ಈ ಉದ್ದೇಶವನ್ನು ಸಾಕಾರಗೊಳಿಸಲು ಜನ ಸಾಮಾನ್ಯರ ಅವಶ್ಯತೆ ಇದ್ದು, ಸಂಘಟನೆಯ ಜೊತೆ ಭಾಗಿಯಾಗಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಕೆರೆ ಜಗದೀಶ್ ಮಾತನಾಡಿ, “ಕೃಷಿ ಹಾಗೂ ಗ್ರಾಮೀಣ ಭಾಗಗಳು ಎಲ್ಲಾ ರೀತಿಯಲ್ಲಿಯೂ ನಗಣ್ಯವಾಗುತ್ತಿರುವಾಗ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ವಿಚಾರದ ಬಗ್ಗೆ ಗೋಷ್ಠಿ ಆಯೋಜಿಸಲು ಮಂಡ್ಯದಲ್ಲಿ ತುಂಡು ಭೂಮಿ ಹೊಂದಿರುವ ಅತಿ ಹೆಚ್ಚು ರೈತರು ಇರುವುದು ಹಾಗೂ ಒಂದು ಪ್ರದೇಶದಿಂದ ಇನ್ನೊಂದು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದೇ ಮುಖ್ಯ ಕಾರಣ. ಸರ್ಕಾರದ ಪಾಲಿಸಿಗಳು ಬದಲಾಗಬೇಕು, ಪ್ರತಿ ಗ್ರಾಮದಲ್ಲಿಯೂ ಸ್ಟಾರ್ಟ್ ಅಪ್ ಗಳು ಪ್ರಾರಂಭವಾಗಬೇಕು, ರೈತರೇ ಸ್ವಾವಲಂಭಿ ಉದ್ಯಮಿಗಳಾಬೇಕು. ತಂತ್ರಜ್ಞಾನ ಸುಲಭವಾಗಿ ರೈತರಿಗೆ ಸಿಗುವಂತಾಗಬೇಕು. ಕೃಷಿ ಉತ್ಪನ್ನಗಳಿಂದ ಸ್ಟಾರ್ಟ್ ಅಫ್ ಗಳ ಮೂಲಕ ಉಪ ಉತ್ಪನ್ನಗಳನ್ನು ಮಾಡುವಂತಾಗಬೇಕು. ಇದಕ್ಕೆ ಪೂರಕವಾಗಿ ಸರಕಾರದ ಮಟ್ಟದಲ್ಲಿ ಸಾಲ ಸೌಲಭ್ಯ, ನಿರಂತರ ವಿದ್ಯುತ್ ಸಂಪರ್ಕ, ಸಾರಿಗೆ ಸೌಲಭ್ಯ, ವಿಶೇಷ ತರಬೇತಿ, ಉನ್ನತ ಶಿಕ್ಷಣ ನಮ್ಮ ಜಿಲ್ಲೆಯಲ್ಲಿಯೇ ದೊರೆಯುವಂತೆ ಸರ್ಕಾರದ ಪಾಲಿಸಿಗಳು ಬದಲಾಗಬೇಕು. ಈ ನಿಟ್ಟಿನಲ್ಲಿ ಪಾಲಿಸಿ ಮೇಕಿಂಗ್ ವಿಚಾರದಲ್ಲಿ ಗಮನ ಹರಿಸಿ ಕೆಲಸ ಮಾಡಬೇಕು” ಎಂದರು.