ಸರ್ಕಾರದ ಮೀಸಲಾತಿ ನಿಯಮವನ್ನು ಉಲ್ಲಂಘಿಸಿ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳಿಂದ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಪೋಸ್ಟ್ ರಹಿತವಾಗಿ ಹಲವರನ್ನು ಸೇರ್ಪಡೆ ಮಾಡಿಕೊಂಡಿರುವುದರ ವಿರುದ್ಧ 15 ದಿನಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬೆಂಗಳೂರು ವಿವಿಯ 67 ದಲಿತ ಪ್ರಾಧ್ಯಾಪಕರುಗಳು ಕುಲಪತಿ ಡಾ.ಜಯಕರ ಎಸ್ ಎಂ ಅವರಿಗೆ ಪತ್ರ ಬರೆದಿದ್ದಾರೆ.
ಡಾ.ಎಂ ಶಶಿಧರ್, ಪ್ರೊ. ಮುರಳೀಧರ ಬಿ ಎಲ್, ಪ್ರೊ. ಆರ್ ಲಕ್ಷ್ಮೀನಾರಾಯಣ, ಡಾ. ಲಕ್ಷ್ಮೀಶ ಟಿ ಆರ್, ಪ್ರೊ. ಡಿ ಸಿ ಮೋಹನ, ಡಾ. ಟಿ ಜಿ ಉಮೇಶ, ಡಾ. ವಾಣೀಶ್ರೀ ಕೊಪ್ಪದ, ಡಾ. ಮಂಜುನಾಥ ಎಚ್, ಡಾ. ಸುರೇಶ್ ಆರ್, ಡಾ. ಎಸ್ ನಾಗರತ್ನಮ್ಮ, ಡಾ. ವೀಣಾದೇವಿ, ಡಾ. ಆರ್ ಗೀತಾ, ಡಾ. ಎಸ್ ವೈ ಸುರೇಂದ್ರ ಕುಮಾರ್, ಡಾ. ರಾಘವೇಂದ್ರ ಎಚ್ ಕೆ, ಡಾ. ಡಿ ಕೆ ಪ್ರಭಾಕರ್, ಡಾ. ರೇಣುಕಾ ಸಿ ಜಿ, ಡಾ. ಶಿವಣ್ಣ ಎಸ್, ಪ್ರೊ. ಪಿ ಸಿ ನಾಗೇಶ್, ಪ್ರೊ. ಕೃಷ್ಣಸ್ವಾಮಿ, ಡಾ. ಕೆ ರಾಮಕೃಷ್ಣಯ್ಯ, ಡಾ. ಜಿ ಕೃಷ್ಣಮೂರ್ತಿ ಸೇರಿದಂತೆ 67 ಪ್ರಾಧ್ಯಾಪಕರು ಪತ್ರದಲ್ಲಿ ಸಹಿ ಹಾಕಿದ್ದಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಶಿಕ್ಷಕರ ಪರಿಷತ್ತು ಬೇರೆ ವಿಶ್ವವಿದ್ಯಾಲಯಗಳಿಂದ ಶಿಕ್ಷಕರನ್ನು ವರ್ಗಾವಣೆ ಮಾಡಿಕೊಂಡಿರುವುದರಿಂದ ಇಲ್ಲಿ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಪೋಸ್ಟ್ ರಹಿತವಾಗಿ ಶಿಕ್ಷಕರನ್ನು ವರ್ಗಾಯಿಸಿಕೊಂಡರೆ ಬೆಂವಿವಿಗೆ ಮುಂದಿನ ದಿನಗಳಲ್ಲಿ ನೇಮಕಾತಿಗೆ ತೊಂದರೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ವರ್ಗಾವಣೆಯಾದ ಶಿಕ್ಷಕರಲ್ಲಿ ಯಾರೊಬ್ಬರೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿಲ್ಲ. ಈವರೆಗೂ ವರ್ಗಾವಣೆಗೊಂಡ ಶಿಕ್ಷಕರನ್ನು ಯಾವ ರೋಸ್ಟರ್ ಬಿಂದುಗೆ ಸೇರಿಸಲಾಗಿದೆ ಎಂಬುದನ್ನು ವಿವಿ ನಿರ್ಧರಿಸಿರುವುದಿಲ್ಲ. ಇದು ಸರಕಾರದ ಮೀಸಲಾತಿ ನೀತಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲದೇ ಬೆಂವಿವಿಯಲ್ಲಿ ಖಾಲಿಯಿರುವ 22 ಶಿಕ್ಷಕರ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ವಿವಿ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಬಿಬಿಎಂಪಿಯ ಅರಣ್ಯಾಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಕ್ರಿಮಿನಲ್ ಮೊಕದ್ದಮೆ ಹೂಡಿ: ಆಪ್ ಆಗ್ರಹ
“ಬಹುಸಂಖ್ಯಾತ ದಲಿತರಿರುವ ವಿವಿಯಲ್ಲಿ ದಲಿತರ ಮಾನ್ಯತೆಯನ್ನು ಕುಗ್ಗಿಸಲು, ಸರ್ಕಾರದ ರೋಸ್ಟರ್ ಪದ್ಧತಿಯನ್ನು ಧಿಕ್ಕರಿಸಿ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ವಿವಿಯ ಈ ಕ್ರಮವನ್ನು ಖಂಡಿಸುತ್ತೇವೆ. ಆದುದರಿಂದ ತಾವು ಈ ಕೂಡಲೇ ಉಳಿದ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ಕ್ರಮ ಕೈಗೊಂಡು, ವಿವಿಗೆ ವರ್ಗಾವಣೆಗೊಂಡ ಶಿಕ್ಷಕರ ಸೇವಾ ಹಿರಿತನ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ರೋಸ್ಟರ್ ಅನುಪಾತವನ್ನು ನಿರ್ಧರಿಸಿ ಕೂಡಲೇ ಆದೇಶ ಹೊರಡಿಸಬೇಕು. ತಪ್ಪಿದ್ದಲ್ಲಿ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗುವುದು” ಎಂದು ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದಾರೆ.