“ಬುದ್ಧನ ಪ್ರಜ್ಞೆ ಕರುಣೆ ಬೆಳೆಸಿಬೇಕು. ನನ್ನನು ದ್ವೇಷಿಸುವವರನ್ನು ನಾವು ಪ್ರೀತಿಸಬೇಕು ಎನ್ನುವುದೇ ಬುದ್ಧ ಪ್ರಜ್ಞೆ, ಕರುಣೆ. ಅದು ಅತಿ ದೊಡ್ಡ ಶಕ್ತಿ. ಪ್ರೊ. ಕೃಷ್ಣಪ್ಪನವರಿಗೆ ಹೆಣ್ಣು ಮಕ್ಕಳಿಗೆ, ಅವರ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಸು ಇತ್ತು. ಇದನ್ನು ಅವರ ಬಗ್ಗೆ ದಲಿತೇತರಿಂದ ಕೇಳಿ ತಿಳಿದಿದ್ದೇನೆ. ಅವರು ಕೃಷ್ಣಪ್ಪನವರ ಬಗ್ಗೆ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ” ಎಂದು ಲೇಖಕಿ ಮತ್ತು ಬರಹಗಾರ್ತಿ ದು ಸರಸ್ವತಿ ನೆನಪಿಸಿದರು.
ಚಿತ್ರದುರ್ಗದ ಆದಿ ಕರ್ನಾಟಕ ವಸತಿ ನಿಲಯದ ಆವರಣದಲ್ಲಿ ಸಮಾಜದ ಸಂಘರ್ಷ ಸಮಿತಿ-ಚಿತ್ರದುರ್ಗ ಮತ್ತು ಪರಿಶಿಷ್ಟ ಜಾತಿ, ಪಂಗಡದ ನೌಕರರ ಒಕ್ಕೂಟ-ತುಮಕೂರು ಹಮ್ಮಿಕೊಂಡಿದ್ದ “ಧೃವೀಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನ”ವಾಗಿ ಪ್ರೊ. ಬಿ ಕೃಷ್ಣಪ್ಪ ನವರ ಜನ್ಮದಿನವನ್ನು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ತನ್ನ ಮಿತಿ ಅರಿತವರು ಹೆಚ್ಚು ಶಕ್ತಿ ಶಾಲಿ ಎಂದು ಗಾಂಧಿ ಹೇಳಿದ್ದಾರೆ. ಅದರಂತೆ ನಮ್ಮ ಮಿತಿ ಮತ್ತು ಶಕ್ತಿ ಎರಡನ್ನೂ ನಾವು ತಿಳಿಯಬೇಕು. ಹೆಣ್ಣು ಮಕ್ಕಳನ್ನು ಒಳಗೊಳ್ಳದ ಯಾವುದೂ ಸಂಪೂರ್ಣವಾಗಲ್ಲ. ಕೆಳಜಾತಿಗಳಲ್ಲೂ ಹೆಣ್ಣು ಮಕ್ಕಳು ತುಳಿತಕ್ಕೆ ಒಳಗಾಗಿದ್ದು, ಅವರಿಗೆ ಹೆಚ್ಚಿನ ಒಳಮೀಸಲಾತಿ ಪ್ರಯೋಜನ ಸಿಗಬೇಕು” ಎಂದು ಪ್ರತಿಪಾದಿಸಿದರು.

“ಪೌರಕಾರ್ಮಿಕರು, ಲೈಂಗಿಕ ಕಾರ್ಯಕರ್ತೆಯರು, ಮಲಬಾಚುವ ಸಹೋದರರಿಗೆ ನೀವು ಒಳಮೀಸಲಾತಿಯಲ್ಲಿ ಏನು ಕೊಡುತ್ತೀರಾ? ಇಂದು ಸರ್ಕಾರ ಮಲ ಬಾಚುವವರಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸುತ್ತದೆ. ಆದರೆ ಕಳೆದ ವರ್ಷಗಳಲ್ಲಿ ನೂರಾರು ಜನ ಸ್ಕಾವೆಂಜರ್ ಸತ್ತಿದ್ದಾರೆ. ಇದನ್ನು ಗಮನಿಸಿ ಅವರಿಗೆ ಪ್ರಯೋಜನಗಳು ದಕ್ಕಬೇಕು”ಎಂದು ಅಭಿಪ್ರಾಯಪಟ್ಟರು.

“ಅಂಬೇಡ್ಕರ್ ಹೇಳುವಂತೆ ಎಲ್ಲರಿಗೂ ಸಮಾನ ಶಿಕ್ಷಣ ಕೊಟ್ಟಿದ್ದರೆ ಇಂದು ಒಳಮೀಸಲಾತಿ ಬೇಕಾಗುತ್ತಿರಲಿಲ್ಲ.
ಇಡೀ ಸಂಸತ್ತಿನಲ್ಲಿ ಶೋಷಿತರ ಪರ ನಿಂತವರು ಅಂಬೇಡ್ಕರ್ ಮಾತ್ರ. ಪುರೋಹಿತ ಶಾಹಿ ಇಂದು ನಮ್ಮಲ್ಲಿ ಇಲ್ಲವೇ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ನಮ್ಮಲ್ಲಿ ಪುರೋಹಿತ ಶಾಹಿ ಇದ್ದು, ಇದನ್ನು ನಮ್ಮ ರಕ್ತ, ಚರ್ಮದಿಂದ ಆಚೆಗೆ ತರಬೇಕು. ಇದಕ್ಕೆ ಸಂವಿಧಾನ ಪ್ರಜಾಪ್ರಭುತ್ವ ಪರಿಹಾರವಾಗಬಲ್ಲುದು” ಎಂದು ಅಭಿಪ್ರಾಯಪಟ್ಟರು.

“ಅಂಬೇಡ್ಕರ್ ಅವರ ಪ್ರಕಾರ ಯಾವುದು ಪ್ರಜಾಪ್ರಭುತ್ವ ಎಂದರೆ “ಹಸಿದವರ ಎದುರು ಹೊಟ್ಟೆ ತುಂಬಿದವರು ಇರುವುದು ಪ್ರಜಾಪ್ರಭುತ್ವ ಅಲ್ಲ. ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸಮಾನತೆ ಕೊಡುವುದು ಪ್ರಜಾಪ್ರಭುತ್ವ ಎಂದು ಭಾವಿಸಿದ್ದರು. ಅವರು ಹೇಳುವಂತೆ ಸಂವಿಧಾನವೆಂದರೆ ಮೆಜಾರಿಟಿ ವರ್ಸಸ್ ಮೈನಾರಿಟಿ ಅಲ್ಲ. ಸಂವಿಧಾನದ ನೈತಿಕತೆ ಇರಬೇಕು ಎಂದರೆ ಮನೆಯಲ್ಲಿ ಜಾತಿಯತೆ ಬಿಡಬೇಕು. ರಕ್ತಪಾತವಿಲ್ಲದೆ ಸಮಾನತೆ, ಸಂವಿಧಾನದ ನೈತಿಕತೆಯಾದ ಜಾತಿ, ಅಸಮಾನತೆ ಆಚರಣೆ ಮಾಡುವುದಿಲ್ಲ ಎನ್ನುವ ನೈತಿಕತೆ ಬರಬೇಕು ಎಂದು ಆಶಿಸಿದ್ದರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ ? ಚಿತ್ರದುರ್ಗ | “ಧೃವೀಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನ”ವಾಗಿ ಪ್ರೊ. ಬಿ ಕೃಷ್ಣಪ್ಪನವರ ಜನ್ಮದಿನ; ಆದಿ ಕರ್ನಾಟಕ ವಸತಿನಿಲಯದಲ್ಲಿ ಕಾರ್ಯಕ್ರಮ
“ದೇಶವೆಂದರೆ ಪ್ರಾದೇಶಿಕ ಭಾಗ, ಸೀಮಾರೇಖೆ, ಗಡಿಯಲ್ಲ, ದೇಶದ ಸ್ವತಂತ್ರ ಸಮಾನತೆಗೆ ಬಂಧುತ್ವದ ಭಾವ ಇರಬೇಕು. ಅದು ದೇಶ ಕಟ್ಟುತ್ತದೆ ಎಂದು ಪ್ರತಿಪಾದಿಸಿದ್ದರು. ಆದರೆ ಇಂದು ಸಮಾಜದಲ್ಲಿ ಮನುಷ್ಯರ, ಸಮುದಾಯಗಳ ಮದ್ಯೆ ಪರದೆ, ಗೋಡೆಗಳು ಹೆಚ್ಚಾಗುತ್ತಿವೆ” ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಸಂಘರ್ಷ ಸಮಿತಿಯ ಅಧ್ಯಕ್ಷ ಕೆ ಕುಮಾರ್, ಒಳಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್. ಮಾರಪ್ಪ,
ಲಲಿತಕಲಾ ಅಕಾಡಮಿ ಮಾಜಿ ಅಧ್ಯಕ್ಷ ಚಂದ್ರಶೇಖರ್,
ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಪ್ರೊ.ಸಿಕೆ ಮಹೇಶ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ದುರುಗೇಶಪ್ಪ, ಪರಿಶಿಷ್ಟ ಜಾತಿ, ಪಂಗಡದ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್, ನಂದಗೋಪಾಲ್, ಚಿಕ್ಕಣ್ಣ, ಶಂಕರ್, ನಿ. ಪ್ರಾಂಶುಪಾಲ ಬಸವರಾಜ್, ಎಂ ಡಿ ರವಿ, ರಾಮಣ್ಣ ಬಾಲೇನಹಳ್ಳಿ, ಶ್ರೀನಿವಾಸಮೂರ್ತ, ರಾಮು ಗೋಸಾಯಿ, ಸಿದ್ದೇಶ್, ವಕೀಲರಾದ ರಮೇಶ್, ಪ್ರದೀಪ್, ವಿಶ್ವಾನಂದ, ಆನಂದ್, ರಾಮಲಿಂಗಪ್ಪ, ಗುರುಮೂರ್ತಿ, ತಿಪ್ಪೇರುದ್ರಸ್ವಾಮಿ, ನರಸಿಂಹಮೂರ್ತಿ, ನಾಗಪ್ಪ, ಸೋಮಶೇಖರ್, ಮಂಜುನಾಥ್, ನಿಂಗರಾಜು, ಕುಮಾರ್, ವೇದಾಂತ, ಮಮತಾ, ಸೇರಿದಂತೆ ಚಿತ್ರದುರ್ಗದ ಸಾಮಾಜಿಕ ಸಂಘರ್ಷ ಸಮಿತಿಯ ಮುಖಂಡರು, ಸದಸ್ಯರು ಹಾಗೂ ತುಮಕೂರು ಪರಿಶಿಷ್ಟ ಜಾತಿ ಪಂಗಡದ ನೌಕರರ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಮುದಾಯದ ಬಂಧುಗಳು ಭಾಗವಹಿಸಿದ್ದರು.