ತುಮಕೂರು ಜಿಲ್ಲೆಯ ಮಲ್ಲೇನಹಳ್ಳಿ ಸಮೀಪದ ಗೊಲ್ಲರಹಟ್ಟಿಯಲ್ಲಿ ಮೌಢ್ಯಚಾರಣೆ ಕಾರಣದಿಂದ ಬಾಣಂತಿ ಮತ್ತು ನವಜಾತ ಶಿಶುವನ್ನು ಮನೆಯಿಂದ ಹೊರಗಿಟ್ಟು ಮಗು ಮೃತಪಟ್ಟ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ಸಂಬಂಧ ಸಂತ್ರಸ್ತೆಯ ಪತಿ ಹಾಗೂ ಆಕೆಯ ತಂದೆಯ ವಿರುದ್ದ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯಿದೆ – 2017 ಹಾಗೂ ಐಪಿಸಿ ಅಧಿನಿಯಮ 304, 34ರಡಿ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂಬಾಗನ್ನ ಹಟ್ಟಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
ಈ ಸಂಬಂಧ ಪ್ರಕರಣ ದಾಖಲಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸಾ ಅವರ ಸೂಚನೆ ಬಳಿಕ ಪ್ರಕರಣ ಸಂಬಂಧ ಪ್ರಥಮ ವರ್ತಮಾನ ವರದಿ ದಾಖಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸಾ ಅವರು ತುಮಕೂರು ಜಿಲ್ಲೆಯ ತಂಬಾಗನ್ನ ಹಟ್ಟಿಗೆ ಭೇಟಿ ನೀಡಿದ್ದು, ಕಾನೂನು ಅರಿವು ಮೂಲಕ ನಾಗರೀಕರಣ ಅಭಿಯಾನವನ್ನು ಹಮ್ಮಿಕೊಂಡು, ಪೋಕ್ಸೊ ಕಾಯ್ದೆ ಹಾಗೂ ಕರ್ನಾಟಕ ಅಮಾನವೀಯ ಕೆಟ್ಟ ಪದ್ಧತಿ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ -2017 ಮೊದಲಾದ ಕಾನೂನುಗಳ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಊರಾಚೆ ಗುಡಿಸಲಲ್ಲಿ ಮಗು ಸಾವು ಪ್ರಕರಣ; ಮೂವರ ವಿರುದ್ಧ ಪ್ರಕರಣ ದಾಖಲು
ತಂಬಾಗನ್ನ ಹಟ್ಟಿಯ ಮನೆಗಳಿಗೆ ಭೇಟಿ ನೀಡಿದ ನ್ಯಾಯಾಧೀಶರು ಬಾಣಂತಿ ಹಾಗೂ ಹಸುಗೂಸು ಮನೆಯ ಪ್ರತ್ಯೇಕ ಕೊಠಡಿಯಲ್ಲಿರುವುದನ್ನು ಕಂಡು ಮಾತನಾಡಿಸಿ ಹರ್ಷ ವ್ಯಕ್ತಪಡಿಸಿ, ಇದೇ ರೀತಿ ಜನರಲ್ಲಿ ಮಾನವೀಯತೆ ಹಾಗೂ ಮೌಢ್ಯಚಾರಣೆ ವಿರುದ್ಧ ಅರಿವು ಮೂಡಬೇಕು ಎಂದರು
ಈ ಸಂದರ್ಭದಲ್ಲಿ ಗೊಲ್ಲರ ಸಮುದಾಯದ ರಾಜ್ಯ ಅದ್ಯಕ್ಷರು, ಜಿಲ್ಲಾ ಅಧ್ಯಕ್ಷ, ಸಮುದಾಯದ ಚಲನಚಿತ್ರ ಸಂಗೀತಗಾರ ಮೋಹನ್, ತಹಶೀಲ್ದಾರ್, ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯತ್ ಸದಸ್ಯರು ಹಾಗೂ ಊರಿನ ಮುಖಂಡರು ಸೇರಿದಂತೆ ಇತರರು ಇದ್ದರು.