ಸಿಂಧನೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ಮೊದಲು ಗಂಡು ಮಗು ಜನಿಸಿದೆ. ನಂತರ ಹೆಣ್ಣು ಮಗು ಹುಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಬದಲಾಯಿಸಿದ್ದಾರೆ ಎಂದು ತಾಯಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಸಿಂಧನೂರು ನಗರದ ಗಾಂಧಿನಗರ ನಿವಾಸಿ ರೇವತಿಗೆ ಹೆರಿಗೆಯಾದಾಗ ಗಂಡು ಮಗುವೆಂದು ನೀಡಿ ಹಾಲುಣಿಸಿ ನಂತರ ಬದಲಾಯಿಸಿ ನಿಮಗೆ ಹೆಣ್ಣು ಮಗು ಹುಟ್ಟಿದೆ ನಮ್ಮಿಂದ ತಪ್ಪಾಗಿದೆ ಎಂದು ಸಿಬ್ಬಂದಿ ಹೇಳಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ತಾಯಿ ರೇವತಿ ಮಾತನಾಡಿ, ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಯಿಂದ ಮಕ್ಕಳ ಬದಲಾವಣೆ ನಡೆಯುತ್ತಿದೆ. ನಮಗೆ ಹುಟ್ಟಿದ್ದು ಗಂಡು ಮಗು. ಮಗುವಿಗೆ ಹಾಲುಣಿಸಿದ ನಂತರ ನಿಮಗೆ ಹೆಣ್ಣು ಮಗು ಜನನವಾಗಿದೆ ಎಂದು ನಮ್ಮಿಂದ ತಪ್ಪಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದ್ದಾರೆ. ಬೇಕಿದ್ದರೆ ಡಿಎನ್ಎ ಪರೀಕ್ಷೆ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮೊಹರಂ ಅಲಾಯಿ ಕುಣಿಯಲ್ಲಿ ಬಿದ್ದು ವ್ಯಕ್ತಿ ಗಂಭೀರ ಗಾಯ ; ಆಸ್ಪತ್ರೆಗೆ ದಾಖಲು
ಘಟನೆಯ ಬಗ್ಗೆ ಹುಲ್ಲಪ್ಪ ಅವರು ಸಿಂಧನೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿ, ನಮಗೆ ಮದ್ಯಾಹ್ನ 12:00 ಕ್ಕೆ ಗಂಡು ಮಗು ಜನಿಸಿರುತ್ತದೆ ಎಂದು ನಮಗೆ ಮಗುವನ್ನು ಹಸ್ತಾಂತರಿಸಿರುತ್ತಾರೆ. ಮಗುವು ಜನಿಸಿರುವುದನ್ನು ಆಶಾಕಾರ್ಯಕರ್ತೆಯವರು, ಮಗುವಿನ ಅಜ್ಜಿ, ಮಗುವಿನ ತಂದೆಯವರು ಸಹ ನೋಡಿರುತ್ತಾರೆ. ಅದಾದ ನಂತರ ಮಗುವನ್ನು ಐಸಿಯುಗೆ ಕರೆದುಕೊಂಡು ಹೋದ ನಂತರ ನಮಗೆ ಹೆಣ್ಣು ಮಗುವನ್ನು ಹಸ್ತಾಂತರಿಸಿರುತ್ತಾರೆ. ನಾವು ಅವರಿಗೆ ಅದಲು ಬದಲು ಬಗ್ಗೆ ಕೇಳಿದಾಗ ಅವಾಗ ತರಾತುರಿಯಲ್ಲಿ ಬೇರೆ ಮಗುವನ್ನು ನಿಮಗೆ ಕೊಟ್ಟಿದ್ದೆವು ಎಂದು ಹೇಳುತ್ತಿದ್ದಾರೆ.
ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಮಗುವಿನ ಡಿಎನ್ಎ ಟೆಸ್ಟ್ ಮಾಡಿಸಿ ನಂತರ ನಮಗೆ ಮಗುವನ್ನು ನಮಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
