ಸುನಿಲ್ ಗಾವಸ್ಕರ್, ಕಪಿಲ್ ದೇವ್, ಇಮ್ರಾನ್ ಖಾನ್, ಇಂಜಮಾಮ್ ಉಲ್ ಹಕ್, ಸೌರವ್ ಗಂಗೂಲಿ, ಮಹೇಲ ಜಯವರ್ಧನೆ, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಏಷ್ಯಾದ ಯಾವುದೇ ನಾಯಕನಿಗೆ ಸಾಧ್ಯವಾಗದ ಅಭೂತಪೂರ್ವ ಗೆಲುವೊಂದನ್ನು ಟೀಮ್ ಇಂಡಿಯಾದ ಯುವ ನಾಯಕ ಶುಭ್ಮನ್ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. ಬರೋಬ್ಬರಿ 336 ರನ್ ಗಳ ಅಮೋಘ ಗೆಲುವಿನೊಂದಿಗೆ ದಾಖಲೆ ನಿರ್ಮಿಸಿದ್ದಾರೆ.
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕ ಶುಭ್ ಮನ್ ಗಿಲ್. ಕಳೆದ 58 ವರ್ಷಗಳಿಂದ ಏಷ್ಯಾ ತಂಡಗಳ ಪಾಲಿಗೆ ಮರೀಚಿಕೆಯಾಗಿದ್ದ ಗೆಲುವನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ ನಾಯಕ ಶುಭ್ಮನ್ ಗಿಲ್ 269 ರನ್ ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 587 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಸಿರಾಜ್ ಮಾರಕ ದಾಳಿ ಸಂಘಟಿಸಿ 6 ವಿಕೆಟ್ ಕಬಳಿಸಿದರು. ಪರಿಣಾಮ ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ 407 ರನ್‌ಗಳಿಗೆ ಅಂತ್ಯಗೊಂಡಿತು.
ಇದನ್ನು ಓದಿದ್ದೀರಾ? ಎರಡನೇ ಟೆಸ್ಟ್ | ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ; ಮಿಂಚಿದ ಆಕಾಶ್ ದೀಪ್
180 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಗಿಲ್ 161 ರನ್ ಬಾರಿಸಿದರು. ಈ ಮೂಲಕ ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 427 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.
ಮೊದಲ ಇನಿಂಗ್ಸ್‌ನಲ್ಲಿನ 180 ರನ್ ಗಳ ಹಿನ್ನಡೆಯೊಂದಿಗೆ 608 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ ಪಾಲಿಗೆ ಆಕಾಶ್ ದೀಪ್ ಮಾರಕವಾಗಿ ಪರಿಣಮಿಸಿದರು. 6 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ದೀಪ್ ಇಂಗ್ಲೆಂಡ್ ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ 271 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾ ಬರೋಬ್ಬರಿ 336 ರನ್‌ಗಳ ಐತಿಹಾಸಿಕ ಗೆಲುವು ದಾಖಲಿಸಿತು.
ಈ ಐತಿಹಾಸಿಕ ಜಯದೊಂದಿಗೆ ಎಡ್ಜ್ಬಾಸ್ಟನ್ ಮೈದಾನದಲ್ಲಿ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದ ಏಷ್ಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಯನ್ನು ಶುಬ್‌ಮನ್ ಗಿಲ್ ತಮ್ಮದಾಗಿಸಿಕೊಂಡರು.
