ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಪೂರ್ವ ದ್ವಾರದ ಬಳಿ ಡ್ರೋನ್ ಹಾರಾಟ ನಡೆಸಲು ಯತ್ನಿಸಿದ ಇಬ್ಬರು ಯುವಕರ ವಿರುದ್ಧ ವಿಧಾನಸೌಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಶನಿವಾರ ಬೆಳಿಗ್ಗೆ 6:45ರ ಸುಮಾರಿಗೆ ಈ ಘಟನೆ ನಡೆದಿದೆ. ಇವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುವ ಅರುಣ್ ಮತ್ತು ವಿನೋದ್ ಎಂಬ ಯುವಕರ ವಿರುದ್ಧ ಅತಿಕ್ರಮ ಪ್ರವೇಶ ಮತ್ತು ನಿರ್ಲಕ್ಷ್ಯ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಇಬ್ಬರಿಗೂ ಠಾಣಾ ಜಾಮೀನು ನೀಡಿ ಕಳುಹಿಸಲಾಗಿದೆ.
“ಖಾಸಗಿ ಕಂಪನಿಯೊಂದರ 15 ವರ್ಷಗಳ ಸಂಭ್ರಮಾಚರಣೆ ಹಿನ್ನೆಲೆ, ಅರುಣ್ ಮತ್ತು ವಿನೋದ್ ಇಬ್ಬರು ಯುವಕರು ವಿಧಾನಸೌಧದ ವಿಡಿಯೋ ಚಿತ್ರೀಕರಣಕ್ಕೆ ಬಂದಿದ್ದರು. ವಿಧಾನಸೌಧದಲ್ಲಿ ಡ್ರೋನ್ ಹಾರಿಸುವುದು ನಿರ್ಬಂಧಿಸಿರುವ ವಿಚಾರ ತಿಳಿಯದೆ ಯುವಕರು ಡ್ರೋನ್ ಮುಖಾಂತರ ಚಿತ್ರಿಕರಣಕ್ಕೆ ಮುಂದಾಗಿದ್ದರು” ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.