ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾಗುವಂತೆ ಮಾಡಿದವನನ್ನು ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬಾತ ಬಂಧಿತ ಆರೋಪಿ.
ಜುಲೈ 15ರಂದು 12 ವರ್ಷ 10 ತಿಂಗಳು ಪ್ರಾಯದ ಬಾಲಕಿ ತನ್ನ ತಾಯಿಯೊಂದಿಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಬಂದು ಒಂದು ದೂರು ನೀಡಿದ್ದಳು. ಹಾಗೆ ಬಂದಾಗ ಆಕೆ ಆರು ತಿಂಗಳ ಗರ್ಭಿಣಿಯಾಗಿದ್ದಳು. ಮಹಿಳಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಆರೋಪಿಯನ್ನು ಬಂಧಿಸಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತೆ ಬಾಲಕಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆ ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಆಗಾಗ ಸಿಗುತ್ತಿದ್ದ ಉಳ್ಳಾಲ ಪೇಟೆಯ ಮಹಮ್ಮದ್ ಶಾಫಿ ಯಾನೆ ಶಾಫಿ ಎಂಬಾತ ಆಕೆಯ ಪರಿಚಯ ಮಾಡಿಕೊಂಡಿದ್ದ. ಬಳಿಕ ಆಗಾಗ ಮಾತನಾಡಲು ಶುರು ಮಾಡಿದ್ದ. ಜೊತೆಗೆ ಆಕೆಯ ಮನೆ ವಿಷಯ ತಿಳಿದುಕೊಂಡಿದ್ದ.
“ಇದೇ ಜನವರಿ ತಿಂಗಳಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ತಿಳಿದುಕೊಂಡ ಶಾಫಿ ಆವತ್ತು ಆಕೆಯ ಮನೆಗೆ ಬಂದಿದ್ದಾನೆ. ಪರಿಚಯದ ನೆಲೆಯಲ್ಲಿ ಮಾತು ಆರಂಭಿಸಿದ ಆತ ಬಾಲಕಿಯ ಬಾಯಿಗೆ ಕೈ ಹಿಡಿದು ಪಕ್ಕದ ರೂಮಿಗೆ ಎಳೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ. ಬಳಿಕ ಆಕೆಯ ಮನವೊಲಿಸಿ, ಕೆಲವೊಮ್ಮೆ ಬ್ಲ್ಯಾಕ್‌ಮೇಲ್ ಮಾಡಿ ಇತರೆ ದಿನಗಳಲ್ಲೂ ಅವಳು ಒಬ್ಬಳೇ ಇದ್ದಾಗ ಆಕೆಯ ಮನೆಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ನಡುವೆ ಈಗ ಆಕೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಆಕೆಯ ಹೊಟ್ಟೆ ದೊಡ್ಡದಾಗುತ್ತಿರುವುದು, ತಿಂಗಳ ಋತುಸ್ರಾವ ನಡೆಯದೆ ಇರುವುದನ್ನು ಗಮನಿಸಿ ಮನೆಯವರು ವಿಚಾರಿಸಿದಾಗ ಈ ವಿಷಯ ಬಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಉಡುಪಿ ಪ್ರಕರಣ: ತನಿಖಾಧಿಕಾರಿ ಬದಲಾವಣೆ
ಅಪ್ರಾಪ್ತೆ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಂತೆ ಕೇಸು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ.
ಆರೋಪಿಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಮತ್ತು ಉಳ್ಳಾಲ ಪೊಲೀಸ್ ಠಾಣಾ ಪೊಲೀಸರು ಸೇರಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಈ ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ ಅವರು ನಡೆಸುತ್ತಿದ್ದಾರೆ. ಮುಂದೆ ಬಾಲಕಿಯ ಆರೈಕೆ ಮತ್ತಿತರ ವಿಚಾರಗಳ ಬಗ್ಗೆ ಅವಲೋಕನ ನಡೆಯಬೇಕಾಗಿದೆ.