ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆಗಳು ಸಮಾಜದ ಕಾವಲಾಗಿವೆ. ಅವು ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕು ಎಂದು ಕಲಬುರಗಿಯ ಕಾಲೇಜು ಉಪನ್ಯಾಸಕ ಡಾ. ಶಿವಾಜಿ ಮೇತ್ರೆ ಹೇಳಿದರು.
ಬೀದರ್ ಜಿಲ್ಲೆಯ ಹುಲಸೂರಿನ ಗಡಿಗೌಡಗಾಂವದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ‘ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಆರಂಭದಲ್ಲಿ ವರದಿಗಾರಿಕೆ ಹವ್ಯಾಸವಾಗಿದ್ದು, ಅನಂತರ ವೃತ್ತಿಯಾಗಿ ಮಾರ್ಪಟ್ಟಿತು. ಉದ್ಯಮವಾಗಿ ಬೆಳೆದ ಮಾಧ್ಯಮ, ಲಾಭಕ್ಕೆ ಮಹತ್ವ ನೀಡಿತು” ಎಂದರು.
“ಪತ್ರಿಕೆಗಳು ಪಕ್ಷಾತೀತ ಹಾಗೂ ಧರ್ಮಾತೀತವಾಗಿ ಜನರ ದನಿಯಾಗಿ ಕೆಲಸ ಮಾಡಬೇಕು. ಸುತ್ತಲಿನ ಸಮಸ್ಯೆಗಳನ್ನು ಸಮುದಾಯಕ್ಕೆ, ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಪತ್ರಿಕೆಗಳ ಕೆಲಸ ಏನೆಂದು ಹಳ್ಳಿಗಳಿಗೆ ತಿಳಿಸಿಕೊಡುವ ಕೆಲಸ ಇಂದಿನ ಪತ್ರಿಕಾ ದಿನಾಚರಣೆ ಮೂಲಕ ನಡೆಯುತ್ತಿದೆ. ಇದು ಮಹಾತ್ಮ ಗಾಂಧೀಜಿಯವರ ಕನಸು ನನಸಾಗುವ ಸಣ್ಣ ಪ್ರಯತ್ನವಾಗಿದೆ” ಎಂದರು.
ಬಸವಕಲ್ಯಾಣದ ಉಪನ್ಯಾಸಕ ಡಾ. ಭೀಮಾಶಂಕರ ಬಿರಾದಾರ ‘ಕನ್ನಡ ಸಾಹಿತ್ಯ ಮತ್ತು ಪತ್ರಿಕೆಗಳು’ ಕುರಿತು ಮಾತನಾಡಿ, “ಚಾರಿತ್ರಿಕ, ಸಾಂಸ್ಕೃತಿಕ ಸಂಶೋಧನೆಗೆ ಆಕರಗಳಾಗಿ, ವರ್ತಮಾನದ ಲೋಕ ವಿಮರ್ಶೆಗೆ ಹೊಸ ದಾರಿಗಳಾಗಿ ಪತ್ರಿಕೆಗಳು ನಿತ್ಯ ಹೊಸ ಒಳನೋಟಗಳನ್ನು ಒದಗಿಸುತ್ತವೆ. ಸಾಮಾಜಿಕ ಸಾಂಸ್ಕೃತಿಕ ಎಚ್ಚರವೇ ಮಾಧ್ಯಮದ ಬಹುದೊಡ್ಡ ಹೊಣೆಗಾರಿಕೆಯಾಗಿದೆ. ಜನಸಂಸ್ಕೃತಿ ಪೋಷಿಸುವಲ್ಲಿ, ಪ್ರಜಾಪ್ರಭುತ್ವ, ಮಾನವೀಯತೆಯ ಜೀವಂತಿಕೆಯಲ್ಲಿ, ನಾಡು ನುಡಿಯ ಕಟ್ಟುವಿಕೆಯಲ್ಲಿ , ರೈತ-ಮಹಿಳಾ- ದಲಿತ ಸೇರಿ ಹಲವು ಚಳುವಳಿಗಳು ರೂಪಿಸುವಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು” ಎಂದರು.
“ಭಾರತೀಯ ಹಾಗೂ ಕನ್ನಡದ ಬಹುತೇಕ ಬರಹಗಾರರ ಅಭಿವ್ಯಕ್ತಿಗೆ ದಿನಪತ್ರಿಕೆ ಮತ್ತು ಸಾಹಿತ್ಯಕ ಪತ್ರಿಕೆಗಳು ವೇದಿಕೆಗಳಾಗಿದ್ದವು. ಸಾಕ್ಷಿ, ಜಯಕರ್ನಾಟಕ, ಪ್ರಬುದ್ಧ ಕರ್ನಾಟಕ, ಋಜುವಾತು, ದೇಶಕಾಲ, ಕನ್ನಡ ಟೈಮ್ಸ್, ಸಂಗಾತ ಮೊದಲಾದ ಪತ್ರಿಕೆಗಳು ಕನ್ನಡ ಸಾಹಿತ್ಯಕ ಲೋಕ ಕಟ್ಟಿವೆ. ಹಲವು ಪತ್ರಿಕೆಗಳು ಕನ್ನಡಕ್ಕೊಂದು ಸಾಂಸ್ಕೃತಿಕ ನಕಾಶೆ ರೂಪಿಸಿವೆ” ಎಂದು ಹೇಳಿದರು.
ಹುಲಸೂರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಮಾತನಾಡಿ, “ಸಾಮಾಜಿಕ ಬದಲಾವಣೆಗೆ ಪತ್ರಿಕೆಗಳು ದಾರಿಯಾಗಿವೆ. ಸಾಮಾಜಿಕ ಬದ್ಧತೆ, ಪ್ರಾಮಾಣಿಕತೆ ಮತ್ತು ಕಾಳಜಿಯಿಂದ ಸಮಾಜದ ಪರಿವರ್ತನೆ ಸಾಧ್ಯ” ಎಂದರು.
ಕಸಾಪ ಉಪಾಧ್ಯಕ್ಷ ಬಸವಕುಮಾರ ಕವಟೆ ಮಾತನಾಡಿ, “ಪತ್ರಕರ್ತ ಕೇವಲ ಮಾಹಿತಿ ನೀಡುವವನಲ್ಲ. ಹಾಗೆಯೇ ಮಾಧ್ಯಮ ಕೇವಲ ಉದ್ಯಮವಲ್ಲ. ಅದೊಂದು ಸೇವೆಯಾಗಿದೆ. ಅವರನ್ನು ಗುರುತಿಸುವ ಕೆಲಸವಾಗಬೇಕು” ಎಂದರು.
ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ಮಾತನಾಡಿ, “ಇಂಗ್ಲಿಷ್ ವ್ಯಾಮೋಹ ಬಿಟ್ಟು ಕನ್ನಡ ಮಾಧ್ಯಮದಲ್ಲಿ ಓದಬೇಕು. ಪ್ರತಿ ಮೂರನೇ ಶನಿವಾರ ಗಡಿ ಭಾಗದ ಶಾಲೆಗಳಲ್ಲಿ ತಾಲೂಕು ಕಸಾಪ ವತಿಯಿಂದ ಕನ್ನಡ ಸಮಾರಂಭ ಹಮ್ಮಿಕೊಳ್ಳಲಾಗುವುದು” ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಗುರುಪ್ರಸಾದ್ ಮೆಂಟೆ, ಶಿವರಾಜ್ ಖಪಲೆ, ಮಹೇಶ್ ಹುಲಸೂರಕರ್, ವೀರಶೆಟ್ಟಿ ಕರಕಲ್ಲೆ, ದತ್ತು ಮೋರೆ, ಸುಧಾಕರ, ಕಸಾಪ ನಗರ ಅಧ್ಯಕ್ಷ ಸಂಗಮೇಶ ಭೋಪಳೆ, ಬಂಡೆಪ್ಪ ಪಾಟೀಲ, ಶಿವಕುಮಾರ ಪಾಟೀಲ, ಸತೀಶ್ ಹಿರೇಮಠ, ವಿಜಯಕುಮಾರ ತಾಂಬೋಳೆ, ಬಾಬು ಕೋರೆ, ಅಶೋಕ ತೇಲಂಗ, ಕಂಟೆಪ್ಪ ಮೇತ್ರೆ, ನಾಗಪ್ಪ ಮೇತ್ರೆ, ದೇವಿದಾಸ ಸೂರ್ಯವಂಶಿ, ಓಂಕಾರ ಪಾಟೀಲ ಮೊದಲಾದವರಿದ್ದರು.