ರೊಮಾರಿಯೋ ಶೆಫರ್ಡ್, ಗುಡಾಕೇಶ್ ಮೋಟಿ ಅವರ ಅಮೋಘ ಬೌಲಿಂಗ್ ಹಾಗೂ ನಾಯಕ ಶಾಯ್ ಹೋಪ್ ಮತ್ತು ಕೇಸಿ ಕಾರ್ಟಿ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ 6 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.
ಬಾರ್ಬಡೋಸ್‌ನ ಬ್ರಿಜ್‌ಟೌನ್‌ನಲ್ಲಿ ನಡೆದ ಎರಡನೆ ಏಕದಿನ ಪಂದ್ಯದಲ್ಲಿ ಭಾರತ ನೀಡಿದ 181 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 36.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಗಳಿಸಿ ಸರಣಿಯನ್ನು ಸಮಬಲ ಮಾಡಿಕೊಂಡಿದೆ.
181 ರನ್‌ಗಳ ಸುಲಭ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಆರಂಭಿಕರಾದ ಕೈಲ್ ಮೇಯರ್ಸ್ (36) ಮತ್ತು ಬ್ರಾಂಡನ್ ಕಿಂಗ್ (15) ವೇಗದ ಆರಂಭ ನೀಡಿದರು. ಕೇವಲ 8.2 ಓವರ್‌ಗಳಲ್ಲಿ 53 ರನ್‌ಗಳ ಜೊತೆಯಾಟವಾಡಿದರು. ಇವರಿಬ್ಬರ ಜೋಡಿಯನ್ನು ವೇಗಿ ಶಾರ್ದೂಲ್ ಠಾಕೂರ್ 9ನೇ ಓವರ್‌ನಲ್ಲಿ ಮುರಿದರು. ಬಳಿಕ 13 ನೇ ಓವರ್‌ನಲ್ಲಿ ಅಲಿಕ್ ಅಥಾನಾಜ್(6) ಅವರನ್ನು ಪೆವಿಲಿಯನ್‌ಗೆ ಕಳಿಸುವ ಮೂಲಕ ಶಾರ್ದೂಲ್ ಮೂರು ವಿಕೆಟ್ ಕಬಳಿಸಿದರು. ಆ ನಂತರ ಬಂದ ಶಿಮ್ರೋನ್ ಹೆಟ್ಮೆಯರ್(9) ಹೆಚ್ಚು ಹೊತ್ತು ನಿಲ್ಲದೆ ಕುಲದೀಪ್ ಯಾದವ್ಗೆ ಔಟಾದರು.
ನಾಲ್ಕು ವಿಕೆಟ್ ಕಳೆದುಕೊಂಡ ವಿಂಡೀಸ್‌ಗೆ ನಾಯಕ ಶಾಯ್ ಹೋಪ್ ಹಾಗೂ ಯುವ ಬ್ಯಾಟ್ಸ್‌ಮನ್ ಕೇಸಿ ಕಾರ್ಟಿ ಅವರ 91 ರನ್‌ಗಳ ಜೊತೆಯಾಟದಿಂದ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಶಾಯ್ ಹೋಪ್(80 ಎಸೆತ, ಎರಡು ಬೌಂಡರಿ,ಎರಡು ಸಿಕ್ಸರ್) ಅಜೇಯ 63 ರನ್ ಬಾರಿಸಿದರೆ, ಯುವ ಬ್ಯಾಟ್ಸ್‌ಮನ್ ಕೇಸಿ ಕಾರ್ಟಿ ಕೂಡ ಅಜೇಯ 48(65 ಚೆಂಡು, 4 ಬೌಂಡರಿ) ರನ್‌ಗಳ ಕೊಡುಗೆ ನೀಡಿದರು.
ಹಾರ್ದಿಕ್ ಪಾಂಡ್ಯ ಸಾರಥ್ಯ
ಇದಕ್ಕೂ ಮೊದಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ವಿಶ್ರಾಂತಿಯೊಂದಿಗೆ ತಂಡದ ಸಾರಥ್ಯ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಟಾಸ್ ಸೋತು ಬ್ಯಾಟಿಂಗ್ ಜವಾಬ್ದಾರಿ ವಹಿಸಿಕೊಂಡರು.
ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚು ಹುಲಿಗಳು; ಕರ್ನಾಟಕಕ್ಕೆ ಎರಡನೇ ಸ್ಥಾನ
ಟೀಂ ಇಂಡಿಯಾ ಪರ ಆರಂಭಿಕರಾಗಿ ಬಂದ ಇಶಾನ್ ಕಿಶನ್ (55) ಅಮೋಘ ಅರ್ಧಶತಕ ಬಾರಿಸಿ, ಗಿಲ್ ಅವರೊಂದಿಗೆ 90 ರನ್‌ಗಳ ಜೊತೆಯಾಟವಾಡಿದರು. ಶುಭಮನ್ ಗಿಲ್ (34) ಕೂಡ ಉತ್ತಮ ಆರಂಭ ಪಡೆದುಕೊಂಡರಾದರೂ ದೊಡ್ಡ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಗಿಲ್ ಔಟಾದ ನಂತರ ಇಬ್ಬರ ಜೊತೆಯಾಟ ಮುರಿದುಕೊಂಡಿತು. ಇಲ್ಲಿಂದ ಭಾರತ ತಂಡದ ಪೆವಿಲಿಯನ್ ಪರೇಡ್ ಶುರುವಾಯಿತು.
ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ಗೆ ಬ್ಯಾಟಿಂಗ್ ಬಡ್ತಿ ಸಿಕ್ಕಿತ್ತು. ಆದರೆ ಇಬ್ಬರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ಸಂಜು ಸ್ಯಾಮ್ಸನ್ 9 ರನ್ ಗಳಿಸಿ ಔಟಾದರು. ಅಕ್ಷರ್ ಪಟೇಲ್ (1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ನಾಯಕ ಹಾರ್ದಿಕ್ ಪಾಂಡ್ಯ ಕೂಡ 7 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 24 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು.
ರವೀಂದ್ರ ಜಡೇಜಾ(10) ಮತ್ತು ಶಾರ್ದೂಲ್ ಠಾಕೂರ್(16) ಕೂಡ ಹೆಚ್ಚಿನ ಹೊತ್ತು ನಿಲ್ಲಲಿಲ್ಲ. ಟೀಂ ಇಂಡಿಯಾವನ್ನು ಕಾಡಿದ ವೆಸ್ಟ್ ಇಂಡೀಸ್ ಬೌಲರ್ಗಳಾದ ಗುಡ್ಕೇಶ್ ಮೋತಿ (36/3) ಮತ್ತು ವೇಗದ ಬೌಲರ್ ರೊಮಾರಿಯೊ ಶೆಫರ್ಡ್ (37/3) ವಿಕೆಟ್ ಪಡೆದರೆ,ಅಲ್ಜಾರಿ ಜೊಸೆಫ್ (35/2) ವಿಕೆಟ್ ಪಡೆದು ಭಾರತ ತಂಡವನ್ನು 181 ರನ್‌ಗಳಿಗೆ ಆಲೌಟ್ ಮಾಡಿದರು.