ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತಮ್ಮನ್ನು ತೆರವು ಗೊಳಿಸಿರುವ ಬಗ್ಗೆ ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿ.ಟಿ ರವಿ, “ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಜವಾಬ್ದಾರಿ ನೀಡಿ ಅವಕಾಶ ಮಾಡಿಕೊಟ್ಟ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದಿದ್ದಾರೆ.
“ಜವಾಬ್ದಾರಿ ನನಗೆ ಬಹಳಷ್ಟು ಅನುಭವ ಮತ್ತು ಬದುಕಿಗೆ ಹೊಸ ಆಯಾಮಗಳನ್ನು ನೀಡಿದೆ. ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗಿನ ನನ್ನ ಪಯಣದಲ್ಲಿ ನಿರಂತರವಾಗಿ ಕಾರ್ಯಕರ್ತನ ಭಾವದಲ್ಲಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಅದೇ ಭಾವದಿಂದ ಕೆಲಸ, ಪಕ್ಷ ನೀಡಿದ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ನಡೆಸುತ್ತೇನೆ. ಭಾರತ್ ಮಾತಾ ಕಿ ಜೈ” ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕೈಬಿಡಲಾಗಿತ್ತು
ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿ ತನ್ನ ಸಂಘಟನಾ ರಚನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕೇಂದ್ರ ತಂಡಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಿದ್ದರು.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾಜಿ ಶಾಸಕ ಸಿ.ಟಿ ರವಿ ಅವರನ್ನು ಹುದ್ದೆಯಿಂದ ಕೆಳಕ್ಕಿಳಿಸಲಾಗಿತ್ತು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ ಎಲ್ ಸಂತೋಷ್ ಅವರನ್ನು ಮುಂದುವರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಒಬ್ಬನ ಚಾರಿತ್ರ್ಯ ಹರಣ ಮಾಡಲು ಪತ್ರಿಕೆಯೊಂದು ಸಾಕು: ಅಗರ ಜ್ಞಾನೇಂದ್ರ
ಬಿಜೆಪಿಯ ಕೇಂದ್ರ ಪದಾಧಿಕಾರಿಗಳ ತಂಡದಲ್ಲಿ ಸಮಗ್ರ ಬದಲಾವಣೆ ಮಾಡಲಾಗಿದ್ದು, 38 ನಾಯಕರನ್ನು ನಾನಾ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಸಿ.ಟಿ ರವಿ ಅವರ ಸ್ಥಾನಕ್ಕೆ ಮಧ್ಯಪ್ರದೇಶ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರನ್ನು ನೇಮಕ ಮಾಡಲಾಗಿತ್ತು.
13 ಉಪಾಧ್ಯಕ್ಷರು ಮತ್ತು 9 ಮಂದಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ ನಡೆದಿದೆ. ವಸುಂಧರಾ ರಾಜೇ ಮತ್ತು ರಮಣ್ ಸಿಂಗ್ ಸೇರಿ ಒಟ್ಟು 38 ಪದಾಧಿಕಾರಿಗಳನ್ನು ನಾನಾ ಸ್ಥಾನಗಳಿಗೆ ನೇಮಿಸಲಾಗಿತ್ತು.