ಹಾದಿ ಬೀದಿಗಳಲ್ಲಿ ಮಾತನಾಡುವವರು ಲೇಔಟ್‌ನ ಅಭಿವೃದ್ಧಿ ಕಾಮಗಾರಿ ನೋಡಿ ಮಾತನಾಡಲಿ. ಕುಡಾ ಲೇಔಟ್‌ನಲ್ಲಿ ನಲವತ್ತು ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳನ್ನು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದ ಮೇಲೆ ನಾನು ಮಾಡಿದ್ದೇನೆ ಎಂದು ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್ ತಿಳಿಸಿದರು.
ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದ ಮಾಧ್ಯಮದವರೊಂದಿಗೆ ಬಡಾವಣೆ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಅವರು, “ಹಾದಿ ಬೀದಿಗಳಲ್ಲಿ ಮಾತನಾಡುವವರು ಎಚ್ಚರಿಕೆಯಿಂದ ಮಾತನಾಡಬೇಕು. ಪ್ರಾಧಿಕಾರದ ಲೇಔಟ್ ಆದ ದೇವರಾಜ ಅರಸು ಬಡಾವಣೆಯಲ್ಲಿ ಆಗಿರುವ ಮತ್ತು ಆಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದಾಗಿ ನೋಡಿ ಮಾತನಾಡಲಿ” ಎಂದು ತಿರುಗೇಟು ನೀಡಿದರು.
“ನಾನು ಅಧಿಕಾರ ವಹಿಸಿಕೊಂಡು 10 ತಿಂಗಳಾಗಿದ್ದು, ಈ ಅವಧಿಯಲ್ಲಿ ಪ್ರಸ್ತುತ 13 ಕೋಟಿ ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಬಡಾವಣೆಯ ಎಲ್ಲ ರಸ್ತೆಗಳ ಅಭಿವೃದ್ಧಿ ಹಾಗೂ ನೀರಿನ ವ್ಯವಸ್ಥೆ ಮತ್ತು ಯುಜಿಡಿ, ಲಿಕೇಜ್ ರಿಪೇರಿ, ದಾರಿ ದೀಪಗಳ ಅಳವಡಿಕೆ ಮಾಡುತ್ತಿದ್ದು, ಶೇ.80ರಷ್ಟು ಕೆಲಸ ಪೂರ್ಣಗೊಳಿಸಲಾಗಿದೆ” ಎಂದು ವಿವರಿಸಿದರು.
“ಇದೇ ಅಲ್ಲದೆ ಕೋಡಿಕಣ್ಣೂರು ಕೆರೆ ಅಭಿವೃದ್ಧಿಗೆ 4 ಕೋಟಿ ಮೀಸಲು ಇಟ್ಟಿದ್ದು, ಡಿಪಿಆರ್ ಆಗಿದ್ದು, ಮುಂದಿನ ತಿಂಗಳು ಟೆಂಡರ್ ಕರೆದು ಕೆಲಸ ಪ್ರಾರಂಭಿಸಲಾಗುವುದು. ಬಡಾವಣೆಯಲ್ಲಿ 339 ಸೈಟುಗಳು ಮಾರಾಟವಾಗದೆ ಉಳಿದಿದ್ದು, ಅವುಗಳನ್ನು ಹಂತ ಹಂತವಾಗಿ ಮಾರಾಟ ಮಾಡಿದ ನಂತರ ಅಮಾನಿ ಕರೆ ಅಚ್ಚುಕಟ್ಟಿನಲ್ಲಿ 100 ಎಕರೆ ರೈತರ ಜಮೀನಿನಲ್ಲಿ ಶೇ 50:50ರ ಅನುಪಾತದಲ್ಲಿ ನೂತನ ಬಡಾವಣೆ ನಿರ್ಮಾಣಕ್ಕೆ ಮಾತುಕತೆ ಮಾಡಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಚಿಂತಾಮಣಿ | ಅಧಿಕಾರಿಗಳ ಕಣ್ತಪ್ಪಿಸಿ ಮುನಗನಹಳ್ಳಿ ಕೆರೆಯ ಮಣ್ಣು ಅಕ್ರಮ ಸಾಗಣೆ: ಕ್ರಮಕ್ಕೆ ಒತ್ತಾಯ
“ಪ್ರಾಧಿಕಾರದ ಕೆಲಸಗಳನ್ನು ನಿರ್ವಹಿಸಲು 14 ಮಂದಿ ಸಿಬ್ಬಂದಿಯ ಅವಶ್ಯಕತೆ ಇದ್ದು, ಪ್ರಸ್ತುತ ಕೇವಲ ಇಬ್ಬರು ಸಿಬ್ಬಂದಿಗಳಿದ್ದಾರೆ. ಸಿಬ್ಬಂದಿಯ ಕೊರತೆಯಿಂದ ಅಕ್ರಮ ಬಡಾವಣೆಗಳ ಬಗ್ಗೆ ಕ್ರಮ ಜರುಗಿಸಲು ಆಗುತ್ತಿಲ್ಲ. ಪ್ರಸ್ತುತ ಕೋಲಾರ ನಗರ 5 ಕಿ.ಮೀಗಳಿಗೆ ಸೀಮಿತವಾಗಿದ್ದು, ಅದನ್ನು 12 ಕಿ.ಮೀಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಕೋಲಾರ ನಗರ ಅಭಿವೃದ್ಧಿಯು ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿ ಮುಂಜೂರಾತಿ ದೊರೆಯಲಿದೆ” ಎಂದು ವಿವರಿಸಿದರು