ಕುಡಿಯಲು ಹಣ ಕೊಡದ ಪತ್ನಿಯ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗೆ ಕಲಬುರಗಿ ನಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಜೇವರ್ಗಿ ತಾಲ್ಲೂಕಿನ ಕುರನಳ್ಳಿ ಗ್ರಾಮದ ಮಹಾಂತಪ್ಪ ನಿಂಗಪ್ಪ ದೊಡ್ಡಮನಿ ಶಿಕ್ಷೆಗೆ ಒಳಗಾದವರು. ಕುರನಳ್ಳಿ ಗ್ರಾಮದ ಮಲ್ಕಪ್ಪ ಕಟ್ಟಿಮನಿ ಎಂಬುವವರ ಮಗಳು ಸಂಗೀತಾ ಎಂಬುವವರನ್ನು 10 ವರ್ಷಗಳ ಹಿಂದೆ ಮಹಾಂತಪ್ಪ ಮದುವೆಯಾಗಿದ್ದ, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಪರಾಧಿ ಮಹಾಂತಪ್ಪ ಮದ್ಯ ವ್ಯಸನಿಯಾಗಿದ್ದ ಕೆಲಸ ಮಾಡದೇ ಸದಾ ಮದ್ಯಕ್ಕೆ ಹಣ ಕೊಡುವಂತೆ ಹೆಂಡತಿಗೆ ಪೀಡಿಸುತ್ತಿದ್ದನು.
2023ರ ಡಿಸೆಂಬರ್ 26ರಂದು ಸಂಜೆ ಮದ್ಯ ಕುಡಿಯಲು ಹಣ ನೀಡುವಂತೆ ಕೇಳಿದ್ದಾನೆ. ಆಕೆ ಹಣ ಕೊಡದಿದ್ದಾಗ ಸಿಟ್ಟಿಗೆದ್ದು ಕೊಡಲಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ತೀವ್ರ ಗಾಯಗೊಂಡಿದ್ದ ಸಂಗೀತಾ ಕೊನೆಯುಸಿರೆಳೆದರು. ಜಗಳ ಬಿಡಿಸಲು ಬಂದ ಮಗನಿಗೂ ಮಹಾಂತಪ್ಪ ಕಾಲಿನಿಂದ ಒದ್ದು ಓಡಿಸಿದ್ದ. ಸಂಗೀತಾ ತಂದೆ ಮಲ್ಕಪ್ಪ ಅವರು ನೀಡಿದ ದೂರಿನ ಮೇರೆಗೆ ನೆಲೋಗಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನಿಖಾಧಿಕಾರಿಗಳಾದ ಪಿಎಸ್‌ಐ ಜ್ಯೋತಿ ಹಾಗೂ ಸಿಪಿಐ ರಾಜೇಸಾಬ್ ನದಾಫ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದರು.
ಸರ್ಕಾರಿ ಅಭಿಯೋಜಕ ಹಯ್ಯಾಳಪ್ಪ ಎನ್. ಬಳಬಟ್ಟಿ ವಾದ ಮಂಡಿಸಿದ್ದರು.
ಇದನ್ನೂ ಓದಿ : ಅನುಭವ ಮಂಟಪ ಶೇ 63ರಷ್ಟು ಪೂರ್ಣ : 2026ರ ಮೇ ತಿಂಗಳಲ್ಲಿ ಉದ್ಘಾಟನೆ : ಸಚಿವ ಈಶ್ವರ ಖಂಡ್ರೆ