ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ, ಮುಂದಿನ ವಿಚಾರಣೆವರೆಗೂ ಅರ್ಜಿದಾರರ ಜನೌಷಧಿ ಕೇಂದ್ರ ಸ್ಥಗಿತ ಬೇಡ ಎಂದು ಮಧ್ಯಂತರ ಆದೇಶ ಹೊರಡಿಸಿದೆ.
ಸರ್ಕಾರಿ ಆಸ್ಪತ್ರೆ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿತ್ತು. ಇದಕ್ಕೆ ವೀರೋಧ ವ್ಯಕ್ತವಾಗಿತ್ತು. ಸರ್ಕಾರದ ಈ ಕ್ರಮ ಪ್ರಶ್ನಿಸಿ 16 ಜನರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು (ಜುಲೈ 08) ಈ ಅರ್ಜಿಗಳನ್ನು ವಿಚಾರಣೆ ಹೈಕೋರ್ಟ್ ವಿಚಾರಣೆ ನಡೆಸಿತು.
ಪ್ರಕರಣ ಹಿನ್ನೆಲೆ
ರಾಜ್ಯ ಸರ್ಕಾರಿ ಆಸ್ಪತ್ರೆಯಲ್ಲಿನ ವೈದ್ಯರು ಹೊರಗಡೆಯಿಂದ ಔಷಧಿಗಳನ್ನು ತರುವಂತೆ ರೋಗಿಗಳಿಗೆ ಸಲಹಾ ಚೀಟಿಗಳನ್ನು ನೀಡುವುದನ್ನು ಸರ್ಕಾರ ನಿಷೇಧಿಸಿದೆ. ಈ ಮೂಲಕ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ತರಹದ ಔಷಧಿಗಳನ್ನು ಹೊರಗೆ ಖರೀದಿಸುವಂತೆ ಶಿಫಾರಸ್ಸು ಮಾಡದಂತೆ ನೋಡಿಕೊಳ್ಳುವುದು ಸರ್ಕಾರದ ನೀತಿಯಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿನಲ್ಲಿನ ಜನ ಔಷಧಿ ಕೇಂದ್ರಗಳನ್ನು ತೆರೆಯುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ. ಈ ಕಾರಣದಿಂದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿನ ಜನ ಔಷಧಿ ಕೇಂದ್ರಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಂದರೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧ ಕೇಂದ್ರಗಳನ್ನು ಮಾತ್ರ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶ ಹೊರಡಿಸಲಾಗಿದೆ. ಆದೇಶ ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳ ಕೈಸೇರಿದ್ದು, ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪಿಎಂ ಜನ ಔಷಧ ಕೇಂದ್ರಗಳು ಬಾಗಿಲು ಮುಚ್ಚಿವೆ.
ಇದಕ್ಕೆ ಬಿಜೆಪಿ ಸೇರಿದಂತೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಡವರಿಗೆ ಕಡಿಮೆ ದರದಲ್ಲಿ ನೀಡುವ ಜನೌಷಧಿ ಕೇಂದ್ರಗಳನ್ನು ಮುಚ್ಚುವುದು ಸರಿಯಲ್ಲ. ರಾಜ್ಯ ಸರ್ಕಾರ ಆದೇಶವನ್ನು ವಾಪಸ್ ಪಡೆಯಬೇಕೆಂದು ವಿಪಕ್ಷಗಳು ಆಗ್ರಹಿಸಿದ್ದವು.
