ಎಸ್ಸಿ, ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಹಾಗೂ ಕೊರಮ ಸಮುದಾಯದ ಮಹಿಳಾ ಮುಖಂಡರಾದ ಪ್ರಭಾವತಿ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಕುಳುವ ಮಹಾಸಂಘ (ಕೊರಮ-ಕೊರಚ ಸಮುದಾಯ ಒಕ್ಕೂಟ)ದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ನಡೆಯಿತು.
ಕರ್ನಾಟಕ ರಾಜ್ಯದಲ್ಲಿ 101 ಪರಿಶಿಷ್ಟ ಜಾತಿಗಳಲ್ಲಿ 51 ಅಲೆಮಾರಿ ಜಾತಿಗಳಿದ್ದು, ಅವುಗಳಲ್ಲಿ ಕೊರಮ ಹಾಗೂ ಕೊರಚ ಸಮುದಾಯವು ಸೇರಿದೆ. ಒಳ ಮಿಸಲಾತಿ ಹೋರಾಟದ ರೂವಾರಿ ಮತ್ತು ತನ್ನ ರಾಜಕೀಯ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿರುವ ಮಾಜಿ ಸಚಿವ ಹೆಚ್. ಆಂಜನೇಯ ಅವರು ರಾಜಕೀಯ ದುರುದ್ದೇಶಕ್ಕಾಗಿ ಅಲೆಮಾರಿಗಳ ಗುಂಪಿನ ಒಗ್ಗಟ್ಟು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ದಿನಾಂಕ-05-07-2025 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕೊರಮ ಹಾಗೂ ಕೊರಚ ಸಮುದಾಯವನ್ನು ಬಿಟ್ಟು ಪರಿಶಿಷ್ಟ ಜಾತಿಯ ಕೇವಲ 49 ಅಲೆಮಾರಿ ಜಾತಿಗಳ ಮುಖಂಡರನ್ನು ಕರೆದು ರಾಜ್ಯ ಮಟ್ಟದ ಸಮಾವೇಶ ನಡೆಸಲು ಪೂರ್ವಭಾವಿ ಸಭೆ ನಡೆಸುತ್ತಿದ್ದರು.
ಈ ಸಭೆಯಲ್ಲಿ ಗಲಾಟೆ ತೆಗೆದ ಬಿಜೆಪಿ ಪಕ್ಷದ ಅಲೆಮಾರಿ ಜನಾಂಗದ ಲೋಹಿತಾಕ್ಷ, ವೀರೇಶ, ಶಿವ, ಲೋಕೇಶ, ಶಾಂತಕುಮಾರ, ಬಸವರಾಜ, ಸುಭಾಶ್ ಚವ್ಹಾಣ ಮತ್ತು ಕೆಲವು ದಲ್ಲಾಳಿಗಳು ನಿಗಮದ ಅದ್ಯಕ್ಷೆಯನ್ನು ಏಕಾಏಕಿ ಇಲ್ಲಿಗೆ ಏಕೆ ಬಂದೆ ಎಂದು ಏಕವಚನದಲ್ಲಿ ಗದರಿಸಿ, ಅಶ್ಲೀಲ ಪದ ಬಳಕೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಎಳಿದಾಡಿ, ಹಲ್ಲೆ ಮಾಡಿದ್ದಾರೆ. ಅದೇ ಸಮಯದಲ್ಲಿ ರಕ್ಷಣೆಗೆ ಧಾವಿಸಿದ ಅಲೆಮಾರಿ ಕೊರಮ ಜನಾಂಗದ ಜಿಲ್ಲಾದ್ಯಕ್ಷೆ ಪ್ರಭಾವತಿಯವರಿಗೂ ರಕ್ತ ಬರುವಂತೆ ಮೈ ಕೈ ಪರಚಿ ಗೂಂಡಾ ವರ್ತನೆ ತೋರಿತ್ತಾರೆ.
ಈ ಸಂಬಂಧ ಬಿಜೆಪಿ ಪಕ್ಷದ ವಕ್ತಾರ ಸೇರಿ 7 ಜನರ ವಿರುದ್ಧ ಹೈಗ್ರೌಡ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಮತ್ತು ಕಣ್ಣೆದುರಿಗೇ ನಡೆಯುತ್ತಿದ್ದ ನೀಚ ಕೃತ್ಯದ ಬಗ್ಗೆ ತುಟಿ ಬಿಚ್ಚದೆ ಮೌನವಹಿಸಿ ಇಷ್ಟೆಲ್ಲಾ ಅವಾಂತರಕ್ಕೆ ಪ್ರೋತ್ಸಾಹಿಸಿ ಅವಿವೇಕದ ನಡೆ ಅನುಸರಿಸಿದ ಹೆಚ್. ಆಂಜನೇಯ ವಿರುದ್ಧ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ರಾಜ್ಯಾದ್ಯಾಂತ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು : ಹಮಾಲಿ ಕಾರ್ಮಿಕರ ಬದುಕು ಅತಂತ್ರ; ಜುಲೈ.10 ರಂದು ಪ್ರತಿಭಟನೆ
ಮೈಸೂರು ಜಿಲ್ಲಾ ಕುಳುವ ಮಹಾಸಂಘದ ಜಿಲ್ಲಾಧ್ಯಕ್ಷೆ ವೇದಾವತಿ, ಉಪಾಧ್ಯಕ್ಷ ಮಹೇಂದ್ರ, ಪುರುಷೋತ್ತಮ್, ರಾಜಣ್ಣ, ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಸೋಮಣ್ಣ, ಸಂಘಟನಾ ಕಾರ್ಯದರ್ಶಿಗಳಾದ ಹಾರೋಹಳ್ಳಿ ರಾಮಕೃಷ್ಣ, ಬನ್ನೂರ್ ದೊರೆಸ್ವಾಮಿ, ತಾಲೂಕು ಮುಖಂಡರಾದ ಶ್ರೀನಿವಾಸ್, ಗೋವಿಂದ, ವಿಶ್ವನಾಥ್, ಸತೀಶ್ ಬಸಲಾಪುರ, ದೇವರಾಜ್, ವೆಂಕಟಸ್ವಾಮಿ, ರಾಮು ದಟ್ಟೇಹಳ್ಳ, ಜಿ. ಶ್ರೀನಿವಾಸ್ ಸೇರಿದಂತೆ ಇನ್ನಿತರರು ಪ್ರತಿಭಟನೆಯಲ್ಲಿ ಇದ್ದರು.