ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ವಿದೇಶದಲ್ಲಿ ನೆಲೆಸಲು ಈಗಲೇ ಯೋಜಿಸುತ್ತಿದ್ದಾರೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಟೀಕಿಸಿದರು.
ಕೆಲವು ದಿನಗಳ ಹಿಂದೆ ಮೋದಿ ಮಾಡಿದ್ದ ‘ಕ್ವಿಟ್ ಇಂಡಿಯಾ’ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಪ್ರಧಾನಿಯವರು ಭಾರತ ತೊರೆಯಲು ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಇದೇ ಕಾರಣಕ್ಕಾಗಿಯೇ ಅವರು ಪದೇ ಪದೇ ವಿದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ತಾವು ಯಾವ ದೇಶದಲ್ಲಿ ಸುಖವಾಗಿರಬಹುದು, ತಮ್ಮ ಇಷ್ಟದ ಪಿಜ್ಜಾ, ಮೊಮೋಸ್ ಹಾಗೂ ಚೌ ಮೇನ್ ಅನ್ನು ಎಲ್ಲಿ ಆನಂದವಾಗಿ ಸವಿಯಬಹುದು ಎಂಬುದಕ್ಕೆ ಸೂಕ್ತವಾದ ಸ್ಥಳ ಹುಡುಕುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಪ್ರಸಾದ್ ಯಾದವ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮ್ಮ ಹಿರಿಯ ಪುತ್ರ ಅವರೊಂದಿಗೆ ಬಿಹಾರದ ಸಚಿವ ತೇಜ್ ಪ್ರತಾಪ್ ಯಾದವ್ ಆಯೋಜಿಸಿದ್ದ ಸಮಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಮುಂಬೈ | ಐಐಟಿ ಸಂಸ್ಥೆಯ ಕ್ಯಾಂಟೀನ್ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ’ ಎಂಬ ಪೋಸ್ಟರ್
ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ “ಇಂಡಿಯಾ” ಒಕ್ಕೂಟದ ಮುಂದಿನ ಸಭೆಯಲ್ಲಿ ಪಾಲ್ಗೊಳ್ಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಲಾಲು ಪ್ರಸಾದ್ ತಿಳಿಸಿದ್ದಾರೆ.
ನರೇಂದ್ರ ಮೋದಿಯವರು ಸಂವಿಧಾನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಪಕ್ಷ ಒಗ್ಗಟ್ಟನ್ನು ಉಳಿಸಿಕೊಂಡು ಬಿಜೆಪಿಯನ್ನು ಸೋಲಿಸಬೇಕು. ಪ್ರಧಾನಿಯ ಪ್ರಯತ್ನವನ್ನು ವಿಫಲಗೊಳಿಬೇಕು ಎಂದು ಹೇಳಿದ ಲಾಲು ಪ್ರಸಾದ್ ಯಾದವ್, ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದರು.
ವಿಪಕ್ಷಗಳು ಸೇರಿ ರಚಿಸಿಕೊಂಡಿರುವ ಒಕ್ಕೂಟವು ಭ್ರಷ್ಟಾಚಾರ, ಸ್ವಜನಪಕ್ಷಪಾತದ ಮೂಲಕ ರಾಜಕೀಯ ಮಾಡುತ್ತಿದೆ ಎಂದಿದ್ದ ಪ್ರಧಾನಿ ಮೋದಿ, ‘ಇಂಡಿಯಾ’ ಒಕ್ಕೂಟವನ್ನು ಈಸ್ಟ್ ಇಂಡಿಯಾ ಕಂಪನಿ ಹಾಗೂ ಕೆಲವು ನಿಷೇಧಿತ ಸಂಸ್ಥೆಗಳಿಗೆ ಹೋಲಿಸಿ ಟೀಕೆ ಮಾಡಿದ್ದರು.