ವಿಧಾನಸಭಾ ಚುನಾವಣೆಯ ವಸ್ತಿಲಿನಿಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುತ್ತಿದೆ. ಆಯೋಗದ ಈ ಪ್ರಕ್ರಿಯೆಯು ರಾಜ್ಯದ ಹಲವಾರು ಮತದಾರರನ್ನು ಮತದಾನದ ಹಕ್ಕಿನಿಂದ ಹೊರಹಾಕುತ್ತದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಎಸ್‌ಐಆರ್ ಪ್ರಕ್ರಿಯೆ ವಿರುದ್ಧ ಬುಧವಾರ ಕಾಂಗ್ರೆಸ್ ನೇತೃತ್ವದಲ್ಲಿ ಬಿಹಾರದ ಪಾಟ್ನಾದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿವೆ. ಮಾತ್ರವಲ್ಲದೆ, ಬಿಹಾರ ಬಂದ್ ನಡೆಸಿವೆ.
ಕಾಂಗ್ರೆಸ್ ಮುಖಂಡ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ-ಲೆನಿನಿಸ್ಟ್) (CPI-ML) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, CPI ಪ್ರಧಾನ ಕಾರ್ಯದರ್ಶಿ D. ರಾಜಾ ನೇತೃತ್ವದಲ್ಲಿ ಮಹಾಘಟಬಂಧನ್ ಪ್ರತಿಭಟನೆ ನಡೆಸಿದ್ದು, ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
‘ವೋಟ್ ಬಂದಿ ಕೆ ಖಿಲಾಫ್, ಬಿಹಾರ್ ಕಾ ದಹದ್ (ಮತದ ಹಕ್ಕು ಕಿತ್ತುಕೊಳ್ಳುವುದರ ವಿರುದ್ಧ ಬಿಹಾರದ ಘರ್ಜನೆ)’ ಎಂದು ಘೋಷಣೆಯನ್ನು ಎತ್ತುತ್ತಾ ಪಾಟ್ನಾದ ಗೋಲಂಬಾರ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ವಿಪಕ್ಷಗಳ ಕಾರ್ಯಕರ್ತರು ಟೈರ್‌ಗಳನ್ನು ಸುಡುವ ಮೂಲಕ ಆಯೋಗ ಮತ್ತು ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಹಲವೆಡೆ ರೈಲು ಮತ್ತು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಭಾರತದ ಸಂವಿಧಾನದ ಪ್ರತಿಯನ್ನು ಹಿಡಿದು ಮಾತನಾಡಿದ ರಾಹುಲ್ ಗಾಂಧಿ, “ನಾವು ಬಿಹಾರಕ್ಕೆ ಬಂದಿದ್ದೇವೆ, ಹಲವಾರು ಜನರು ಸಂವಿಧಾನಕ್ಕಾಗಿ ಹೋರಾಟ ನಡೆಸಿ, ಹುತಾತ್ಮರಾದ ರಾಜ್ಯವಿದು. ನಮ್ಮ ಸಂವಿಧಾನವು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ನೀಡಿದೆ. ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆಸಿದಂತೆ, ಮತಗಳನ್ನು ಕದ್ದಂತೆ, ಬಿಹಾರದಲ್ಲಿಯೂ ಅಕ್ರಮ ನಡೆಸಲು, ಮತಗಳನ್ನು ಕದಿಯುವ ಪ್ರಯತ್ನಗಳು ನಡೆಯುತ್ತಿವೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಏನಾಯಿತು, ಆ ಚುನಾವಣಾ ಮಾದರಿ ಏನಾಗಿತ್ತು ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಇದನ್ನು ತಿಳಿದಿರುವ ಅವರು, ಬಿಹಾರದಲ್ಲಿ ಹೊಸ ಮಾದರಿಯನ್ನು ತಂದಿದ್ದಾರೆ. ಮತದಾರರ ಹಕ್ಕನ್ನು ಕಸಿದುಕೊಳ್ಳಲು ಹವಣಿಸುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ದೂರಿದರು.
“ಈಗಿನ ಬಿಹಾರದ ಮಾದರಿಯು ಬಡವರ ಮತಗಳನ್ನು ಕಸಿದುಕೊಳ್ಳುವ ಮಾರ್ಗವಾಗಿದೆ. ಆದರೆ, ಇದು ಬಿಹಾರ ಎಂಬುದು ಅವರಿಗೆ ತಿಳಿದಿಲ್ಲ. ಬಿಹಾರದ ಜನರು ಇದನ್ನು ತಮ್ಮ ಮತಗಳನ್ನು ಕಸಿದುಕೊಳ್ಳಲು ಬಿಡುವುದಿಲ್ಲ” ಎಂದರು.
“ಚುನಾವಣಾ ಆಯೋಗವು ಬಿಜೆಪಿ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗವು ತಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಎಂಬುದನ್ನು ಮರೆತಿದೆ. ಆಯೋಗವನ್ನು ಮುನ್ನಡೆಸುತ್ತಿರುವವರು ಭಾರತದ ಚುನಾವಣಾ ಆಯುಕ್ತರಾಗಿದ್ದಾರೆ. ಅವರ ಕೆಲಸ ಸಂವಿಧಾನವನ್ನು ರಕ್ಷಿಸುವುದು. ಆದರೆ, ಅವರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು, ಆದರೆ, ದೇಶದ ಕಾನೂನು ಅವರಿಗೂ ಅನ್ವಯಿಸುತ್ತದೆ. ಮರೆಯಬೇಡಿ… ನೀವು ಎಷ್ಟೇ ದೊಡ್ಡವರಾಗಿದ್ದರೂ ಅಥವಾ ನೀವು ಎಲ್ಲೇ ಕುಳಿತಿದ್ದರೂ, ಕಾನೂನು ನಿಮ್ಮನ್ನು ಬಿಡುವುದಿಲ್ಲ” ಎಂದು ಬಿಜೆಪಿ ಮತ್ತು ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಪೌರತ್ವ ಸಾಬೀತಿಗೆ ಜನರ ಪರದಾಟ; ಮತದಾನದ ಹಕ್ಕನ್ನೇ ಕಳೆದುಕೊಳ್ಳುವರೇ 50% ಜನರು?
ಏತನ್ಮಧ್ಯೆ, ಬಂದ್‌ಗೆ ಬೆಂಬಲ ನೀಡಿದ್ದ ಬಿಹಾರದ ಪೂರ್ಣಿಯ ಕ್ಷೇತ್ರದ ಸ್ವತಂತ್ರ ಸಂಸದ ಪಪ್ಪು ಯಾದವ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಚಿವಾಲೆ ಹಾಲ್ಟ್ ರೈಲ್ವೆ ನಿಲ್ದಾಣದಲ್ಲಿ ರೈಲನ್ನು ತಡೆದು ಪ್ರತಿಭಟನೆ ನಡೆಸಿದರು. “ನೀವು ನಮ್ಮ ಪೌರತ್ವವನ್ನು ಏಕೆ ಕೇಳುತ್ತೀರಿ? ಪೌರತ್ವ ಕೇಳಲು ನೀವು ಯಾರು? ನಾನು ಇಲ್ಲಿಯವರೆಗೆ ಹೇಗೆ ಮತ ಚಲಾಯಿಸುತ್ತಿದ್ದೇನೆ? ಆಧಾರ್ ಕಾರ್ಡ್‌ನ ಮೌಲ್ಯವೇನು? ನಾವು ಚುನಾವಣಾ ಆಯೋಗವನ್ನು ಬಿಡುವುದಿಲ್ಲ. ಅವರು ದೇಶದ ಬಡ ಜನರ ಜೀವನವನ್ನು ನಾಶ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯುನೈಟೆಡ್) ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ, “ ಇಂಡಿಯಾ ಒಕ್ಕೂಟವು ‘ನಿಜವಾದ ಸಮಸ್ಯೆ’ಗಳು ಇಲ್ಲದೇ ಇದ್ದರೂ, ಸಾಮಾನ್ಯ ಜನರಿಗೆ ತೊಂದರೆ ನೀಡಲು ಗೂಂಡಾಗಿರಿ ನಡೆಸುತ್ತಿದೆ. ಅವರಿಗೆ ಎನ್‌ಡಿಎ ಸರ್ಕಾರ ಅಥವಾ ನಿತೀಶ್ ಕುಮಾರ್ ಆಡಳಿತದ ವಿರುದ್ಧ ಟೀಕಿಸಲು ಯಾವುದೇ ಉತ್ತಮ ಅಂಶಗಳಿಲ್ಲ. ದೇಶ ಮತ್ತು ಬಿಹಾರ ಎರಡೂ ಕಡೆ ಉತ್ತಮ ಅಭಿವೃದ್ಧಿಯಾಗಿದೆ. ಹೀಗಾಗಿ, ಅವರು ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡಿದ್ದಾರೆ. ಬಿಹಾರ ಬಂದ್‌ನ ಸೋಗಿನಲ್ಲಿ ಅವರು ಗೂಂಡಾಗಿರಿ ನಡೆಸುತ್ತಿದ್ದಾರೆ. ಅವರನ್ನು ಸಾರ್ವಜನಿಕರು ಬೆಂಬಲಿಸುವುದಿಲ್ಲ” ಎಂದು ಹೇಳಿದೆ.
ಬಿಹಾರ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ, “ವಿಪಕ್ಷದವರು ಇಲ್ಲಿಗೆ ಪಿಕ್ನಿಕ್ ಮಾಡಲು ಬಂದಿದ್ದಾರೆ. ಅವರಿಗೆ ಬಿಹಾರದ ಸಮಸ್ಯೆಗಳ ಅರಿವಿಲ್ಲ. ಬಿಹಾರದ ಅಭಿವೃದ್ಧಿಯಲ್ಲಿ ಅವರಿಂದ ಯಾವುದೇ ಕೊಡುಗೆ ಇಲ್ಲ. ರಾಹುಲ್ ಗಾಂಧಿ ಅವರ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಾಗ, ಅವರು ಇಡೀ ದೇಶವನ್ನೇ ಗೆದ್ದಿದ್ದೇವೆಂಬಂತೆ ಭಾವಿಸಿದ್ದರು. ಇದು ಪ್ರಜಾಪ್ರಭುತ್ವ, ರಾಜಪ್ರಭುತ್ವವಲ್ಲ. ಅವರ ರಾಜಪ್ರಭುತ್ವ ಕೊನೆಗೊಂಡಿದೆ. ಈಗ ಅದು ಜನರ ಪ್ರಜಾಪ್ರಭುತ್ವ, ಜನರು ನಿರ್ಧರಿಸುತ್ತಾರೆ” ಎಂದು ಹೇಳಿದ್ದಾರೆ.
ಚುನಾವಣಾ ಆಯೋಗವು ನಡೆಸುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಿಹಾರದ ಜನರಲ್ಲಿ, 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕು. ಇದು, ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ದಾರಿಮಾಡಿಕೊಡುತ್ತದೆ ಎಂದು ಆಯೋಗ ಹೇಳಿಕೊಂಡಿದೆ.
ಆದಾಗ್ಯೂ, ಬಿಹಾರದಂತಹ ಕಡಿಮೆ ಸಾಕ್ಷರತಾ ದರ, ಅರ್ಧಕ್ಕೆ ಶಾಲಾ ಶಿಕ್ಷಣವನ್ನು ಮೊಟಕುಗೊಳಿಸುವ, ಭೂರಹಿತರು ಹಾಗೂ ಬಡವರು ಇರುವ ರಾಜ್ಯದಲ್ಲಿ ಜನರು ತಮ್ಮ ಪೌರತ್ವ ಸಾಬೀತಿಗೆ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಹೊಂದಿಲ್ಲ. ಇದರಿಂದಾಗಿ, ಸುಮಾರು 50% ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ ಎಂದು ವರದಿಗಳು ಹೇಳುತ್ತಿವೆ.