- ‘ಪ್ರತಿಪಕ್ಷದ ನಾಯಕನಿಲ್ಲದೇ ಅಧಿವೇಶನ ನಡೆದಿರುವುದು ದುರುಂತ’
- ಅಕಸ್ಮಾತ್ ಸಿಟಿ ರವಿ ಬಿಜೆಪಿ ಅಧ್ಯಕ್ಷರಾದರೆ ಅದು ದುರ್ದೈವದ ಸಂಗತಿ
ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಈವರೆಗೂ ವಿಧಾನಸಭಾ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಪ್ರತಿಪಕ್ಷದ ನಾಯಕನಿಲ್ಲದೇ ಅಧಿವೇಶನ ನಡೆದಿರುವುದು ದುರಂತದ ಸಂಗತಿ ಎಂದು ಶಾಸಕ ಲಕ್ಷ್ಮಣ ಸವದಿ ಕುಟುಕಿದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆದಿರುವುದು ಇತಿಹಾಸದಲ್ಲಿ ಮೊದಲು. ಇಂತಹ ಕೆಟ್ಟ ಇತಿಹಾಸವನ್ನು ಬಿಜೆಪಿಯವರು ಸೃಷ್ಟಿಸುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
“ಹೊಸದಾಗಿ ಸರ್ಕಾರ ರಚನೆಯಾಗಿದೆ. ಎಲ್ಲ ಶಾಸಕರು ತಮ್ಮ ಬೇಡಿಕೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸುವುದು ಸಾಮಾನ್ಯ. ರಾಜ್ಯ ಕಾಂಗ್ರೆಸ್ ನಾಯಕರ ಸಭೆಯನ್ನು ರಾಹುಲ್ ಗಾಂಧಿ ಕರೆದಿದ್ದರು. ಪ್ರತಿಪಕ್ಷಗಳ ಸಭೆಯ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಮುಂದಕ್ಕೆ ಹೋಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಗಸ್ಟ್ 2ರಂದು ಸಭೆ ಕರೆದಿದ್ದಾರೆ. ಆ ಸಭೆಗೆ ಹೋಗುತ್ತೇವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಂಚಕರು, ನಂಬಿಕೆದ್ರೋಹಿಗಳು ಕೇವಲ ಒಂದು ಸಮುದಾಯಕ್ಕೆ ಸೇರಿದವರೇ?
ಲೋಕಸಭೆ ಚುನಾವಣೆಯಲ್ಲಿ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಅವರಿಗೆ ಹೊಸ ಟಾಸ್ಕ್ ನೀಡಲಾಗಿದೆಯಂತೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, “ಅದು ಟಾಸ್ಕ್ ಅಲ್ಲ. ಒಂದು ಪಕ್ಷದಲ್ಲಿದ್ದಾಗ ಕೊಡುವ ಜವಾಬ್ದಾರಿ. ಓಡಾಡಿ ಕೆಲಸ ಮಾಡಬೇಕು” ಎಂದರು.
ಸಿ ಟಿ ರವಿ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, “ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಯಾರು ಆಗುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ಅಕಸ್ಮಾತ್ ಸಿಟಿ ರವಿ ಅಧ್ಯಕ್ಷರಾದರೆ ಅದು ದುರ್ದೈವದ ಸಂಗತಿ. ಅಧ್ಯಕ್ಷರಾಗಿ ರವಿ ಆ ಪಕ್ಷದಲ್ಲಿ ಬೆಳೆಯುತ್ತಾನೆ ಎಂದರೆ ಶುಭಕೋರುವೆ” ಎಂದು ಹೇಳಿದರು.