ಮಣಿಪುರ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರಲು ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಿನಂತಿಸಿ ದಾವಣಗೆರೆ ಮುಸ್ಲಿಂ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಿದರು.
ಮುಸ್ಲಿಂ ಒಕ್ಕೂಟದ ಸಂಚಾಲಕ ವಕೀಲ ನಜೀರ್ ಅಹ್ಮದ್ ಮಾತನಾಡಿ, “ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಖಂಡನೀಯ. ಮಣಿಪುರದಲ್ಲಿ ಕಳೆದ ಕೆಲ ತಿಂಗಳಿನಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಮಹಿಳೆಯರು ಅತ್ಯಾಚಾರಕ್ಕೊಳಗಾಗಿ ಮಕ್ಕಳು ಅನಾಥರಾಗುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಮಹಿಳೆಯರ ಬಗ್ಗೆ ಮಾತನಾಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳು ಅಲ್ಲಿನ ಮಹಿಳೆಯರ ರಕ್ಷಣೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಣಿಪುರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡರವರು ʼಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾನೂನು ಸುವ್ಯವಸ್ಥೆ ಕಾಪಾಡದಿದ್ದರೆ ನ್ಯಾಯಾಂಗ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ಸಾಲು ಹೇಳಿಕೆ ನೀಡಿ, ಮತ್ತೆ ಮೌನ ವಹಿಸಿದ್ದಾರೆ” ಎಂದರು.
“ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇನ್ನೂ ಮಹಿಳೆಯರಿಗೆ ರಕ್ಷಣೆಯೇ ಸಿಕ್ಕಿಲ್ಲ ಎಂಬುದು ತಲೆ ತಗ್ಗಿಸುವ ಸಂಗತಿಯಾಗಿದೆ. ಬಿಲ್ಕಿಸ್ ಬಾನು ಪ್ರಕರಣ, ಹತ್ರಾಸ್ ದಲಿತ ಹೆಣ್ಣು ಮಗಳ ಮೇಲೆ ಅತ್ಯಾಚಾರ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯವನ್ನಾಗಲೀ ಖಂಡಿಸದೆ ನಮ್ಮ ದೇಶದ ಪ್ರಧಾನಮಂತ್ರಿ ಏಕೆ ಮೌನ ವಹಿಸಿದ್ದರು” ಎಂದು ಪ್ರಶ್ನಿಸಿದರು.
ಮುಖಂಡ ಟಿ.ಅಸ್ಗರ್ ಮಾತನಾಡಿ, “ಸಾಮೂಹಿಕ ಅತ್ಯಾಚಾರಕ್ಕೆ ಮಣಿಪುರದ ಪೊಲೀಸರು ಪರೋಕ್ಷ ಬೆಂಬಲ ನೀಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಇಂಟರ್‌ನೆಟ್ ಕಡಿತಗೊಳಿಸಿ ಅತ್ಯಾಚಾರ, ಹತ್ಯೆಗಳು, ಮಹಿಳೆಯರ ಬೆತ್ತಲೆ ಮೆರವಣಿಗೆಗಳಿಗೆ ಅಲ್ಲಿನ ರಾಜ್ಯ ಸರ್ಕಾರ ಕುಮ್ಮಕ್ಕು ನೀಡುವ ಮೂಲಕ ಅಲ್ಲಿ ಹಿಂಸಾಚಾರ ನಡೆಸಲು ಪರೋಕ್ಷ ಬೆಂಬಲ ನೀಡುತ್ತಿದೆ” ಎಂದು ಆರೋಪಿಸಿದರು.
“ಮಣಿಪುರ ಹಿಂಸಾಚಾರದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ದೇಶದ ರಕ್ಷಣೆ ಮಾಡಿದ ಸೈನಿಕನ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಒಬ್ಬ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಕೊಲೆ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕರ್ತವ್ಯ ಲೋಪ ಆರೋಪ; ಪಿಡಿಒ ಅಮಾನತು
“ಬುಡಕಟ್ಟು ಜನಾಂಗದ ಮಹಿಳೆ ದೇಶದ ಉನ್ನತ ಮಟ್ಟದ ಸ್ಥಾನ ಪಡೆದು ರಾಷ್ಟಪತಿಯಾಗಿರುವ ಸಂದರ್ಭದಲ್ಲಿ ಮಣಿಪುರ ರಾಜ್ಯದಲ್ಲಿ ಬುಡಕಟ್ಟು ಜನಾಂಗದ ಎರಡು ಹೆಣ್ಣು ಮಕ್ಕಳನ್ನು ನಗ್ನವಾಗಿ ಮೆರವಣಿಗೆ ನಡೆಸಿರುವ ಕೃತ್ಯದ ವಿಡಿಯೋ ಗಮನಿಸಿದರೆ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದೇ ಹೇಳಬಹುದು” ಎಂದರು.
“ಮಣಿಪುರ ರಾಜ್ಯದಲ್ಲಿ ಮತ್ತೆ ಮೀತೀ, ಕುಕಿ ಮತ್ತು ನಾಗ ಸಮುದಾಯಗಳಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಸೌಹಾರ್ದತೆ ಮೂಡಿಸುವ ಮೂಲಕ ಶಾಂತಿ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಮುಖಂಡರುಗಳಾದ ಮಹಮ್ಮದ್ ಶೋಯೇಬ್, ನೂರ್ ಅಹ್ಮದ್, ಅತ್ತರ ಮುನ್ನ, ಸಾಜಿದ್ ಅಹ್ಮದ್, ಫಕ್ರುದ್ದೀನ್, ಇಲು, ಮಸೂದ್ ಅಹ್ಮದ್, ಮುಜಾಮಿಲ್ ಪಾಷ, ಮಹಮದ್ ಫಾರೂಕ್ ಸೇರಿದಂತೆ ಬಹುತೇಕರು ಇದ್ದರು.