ಯುವತಿಯೊಬ್ಬರ ಮತದಾರ ಗುರುತಿನ ಚೀಟಿಯಲ್ಲಿ (ವೋಟರ್ ಐಡಿ) ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರವನ್ನು ಚುನಾವಣಾ ಆಯೋಗವು ಮುದ್ರಿಸಿರುವ ಘಟನೆ ಬೆಳಕಿಗೆ ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ಕ್ರಮದ ವಿರುದ್ಧ ರಾಜ್ಯದ ಜನರ ಆಕ್ರೋಶಗೊಂಡಿರುವ ಸಮಯದಲ್ಲೇ ಆಯೋಗದ ಯಡವಟ್ಟು ಬೆಳಕಿಗೆ ಬಂದಿದೆ. ಮತದಾರರು ಆಯೋಗವನ್ನು ತರಾಟೆಗೆ ತೆಗೆದುಕೊಂಡಿದೆ.
ಬಿಹಾರದ ಮಾಧೇಪುರದಲ್ಲಿ 29 ವರ್ಷದ ಯುವತಿಯೊಬ್ಬರ ಗುರುತಿನ ಚೀಟಿಯಲ್ಲಿ ಯುವತಿಯ ಫೋಟೋ ಬದಲಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರವನ್ನು ಮುದ್ರಿಸಲಾಗಿದೆ. ಇದು ವ್ಯವಸ್ಥೆಯ ನಿರ್ಲಕ್ಷ್ಯ ಮತ್ತು ಚುನಾವಣಾ ಆಯೋಗದ ವೈಫಲ್ಯ ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಗೆ ಆಗ್ರಹಿಸಿದ್ದಾರೆ.
ಮಾಧೇಪುರದ ಅಭಿಲಾಷ ಕುಮಾರಿ ಎಂಬವರಿಗೆ ಮತದಾರ ಗುರುತಿನ ಚೀಟಿಯು ಅಂಚೆ ಮೂಲಕ ಬಂದಿತ್ತು. ಅದನ್ನು ತೆಗೆದು ನೋಡಿದಾಗ, ಅದರಲ್ಲಿ, ತಮ್ಮ ಚಿತ್ರದ ಬದಲಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಿತ್ರ ಕಂಡುಬಂದಿದೆ. ಅದನ್ನು ನೋಡಿ, ಯುವತಿ ವಿಚಲಿತರಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಪೌರತ್ವ ಸಾಬೀತಿಗೆ ಜನರ ಪರದಾಟ; ಮತದಾನದ ಹಕ್ಕನ್ನೇ ಕಳೆದುಕೊಳ್ಳುವರೇ 50% ಜನರು?
ಬಳಿಕ, ಅಭಿಲಾಷ ಅವರು ಚುನಾವಣಾ ಆಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಅಲ್ಲದೆ, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಹೊಣೆಗಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಚುನಾವಣಾ ಅಧಿಕಾರಿ ಜೀತೇಂದ್ರ ಕುಮಾರ್, “ಬಿಹಾರದ ಮತದಾರರ ಚೀಟಿಗಳು ಕರ್ನಾಟಕದಲ್ಲಿ ತಯಾರಾಗಿವೆ. ಗುರುತಿನ ಚೀಟಿಗಳ ತಯಾರಿ ವೇಳೆ ತಪ್ಪುಗಳಾಗಿದ್ದರೆ, ಅವುಗಳನ್ನು ಸರಿಪಡಿಸುತ್ತೇವೆ. ಮತದಾರರ ಚೀಟಿಯಲ್ಲಿ ಯಾವುದೇ ತಪ್ಪುಗಳ ಕಂಡಬಂದರೂ, ತಿದ್ದುಪಡಿಗಾಗಿ ಆಯೋಗಕ್ಕೆ ಆನ್‌ಲೈನ್ ಮತ್ತು ಆಫ್‌ನಲ್ಲಿ ಅರ್ಜಿ ಸಲ್ಲಿಸಬಹುದು. ತಪ್ಪುಗಳನ್ನು ತಿದ್ದಲಾಗುತ್ತದೆ” ಎಂದು ಹೇಳಿದ್ದಾರೆ.