ಬಿಸಿಯೂಟ ತಯಾರಕರ ಬಾಕಿ ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಸಿಯೂಟ ತಯಾರಕರ ಫೆಡರೇಶನ್ ಸಮಿತಿ ಕಾರ್ಯಕರ್ತರು ದಾವಣಗೆರೆ ತಾಲೂಕು ಮಧ್ಯಾಹ್ನ ಉಪಾಹಾರ ಯೋಜನೆ ಸಹಾಯಕ ನಿರ್ದೇಶಕರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ದಾವಣಗೆರೆ ತಾಲೂಕಿನ ಎಲ್ಲ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ಜುಲೈ 31 ಬಂದರೂ ಜುಲೈ ತಿಂಗಳ ವೇತನ ಪಾವತಿಯಾಗಿಲ್ಲ. ವೇತನವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಹಾಗಾಗಿ ಜೂನ್ ಮತ್ತು ಜುಲೈ ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು ಮಾತನಾಡಿ, “ಜುಲೈ ತಿಂಗಳು ಮುಗಿದರೂ ಜೂನ್ ತಿಂಗಳ ವೇತನ ಬಿಡುಗಡೆಯಾಗಿಲ್ಲ. ಬೆಲೆ ಏರಿಕೆ, ಹಣದುಬ್ಬರ, ಶಿಕ್ಷಣದ ಖರ್ಚು ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳು ಹೆಚ್ಚಾಗಿರುವ ಈ ಕಾಲದಲ್ಲಿ ಬಿಸಿಯೂಟದ ವೇತನ ನಂಬಿ ಬದುಕುತ್ತಿರುವ ಬಿಸಿಯೂಟ ತಯಾರಿಕರಿಗೆ ವೇತನವಿಲ್ಲದೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಆದ ಕಾರಣ ಕೂಡಲೇ ಸರ್ಕಾರ ಜೂನ್ ಮತ್ತು ಜುಲೈ ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿಲಕ್ಷ್ಮಿ ಮಾತನಾಡಿ, “ಎರಡು ತಿಂಗಳ ವೇತನಗಳಿಲ್ಲದೆ ನಮಗೆ ಜೀವನ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳ ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಮಕ್ಕಳ ಶೈಕ್ಷಣಿಕ ಖರ್ಚು ಸೇರಿದಂತೆ ಇತರೆ ಸಮಸ್ಯೆಗಳೂ ಹೆಚ್ಚಾಗಿವೆ. ಹಾಗಾಗಿ ಕೂಡಲೇ ವೇತನ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ್ದು, ಮನವಿ ಪರಿಗಣಿಸಿ ಸಂಬಂಧಪಟ್ಟ ಮೇಲಧಿಕಾರಿಗಳ ಜೊತೆ ಶೀಘ್ರದಲ್ಲಿ ಮಾತನಾಡಿ ಒಂದು ವಾರದ ಒಳಗಾಗಿ ಬಾಕಿ ಇರುವ ಮತ್ತು ಜುಲೈ ತಿಂಗಳ ವೇತನವನ್ನೂ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.