ಬಸವಾದಿ ಶರಣರ ಸಮಕಾಲೀನ ಶರಣ ಹಡಪದ ಅಪ್ಪಣ್ಣ ಅವರ ಬದುಕು-ಬರಹ ವಚನಗಳಲ್ಲಿ ಅಡಕವಾಗಿದ್ದು, ಅವರ ವಿಚಾರಧಾರೆ ಇಂದಿನ ಸಮಾಜಕ್ಕೆ ಅತಿ ಅವಶ್ಯಕವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮದಿರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼವಚನಕಾರ ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಆಪ್ತರಾಗಿದ್ದರು, ಕಾಯಕ ತತ್ವದಲ್ಲಿಅತ್ಯಂತ ನಿಷ್ಠೆ ತೋರಿದರು. ಅವರ ವಚನಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆʼ ಎಂದರು.
ಹಿರಿಯ ಸಾಹಿತಿ ಶಂಭುಲಿಂಗ ವಿ.ಕಾಮಣ್ಣನವರ ಅವರು ವಿಶೇಷ ಉಪನ್ಯಾಸ ನೀಡಿ, ʼವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಬಿನಾಳ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಚನ್ನವೀರಪ್ಪ, ತಾಯಿ ದೇವಮ್ಮ ಆಗಿದ್ದರು. ಅಪ್ಪಣ್ಣನವರು ಕ್ಷೌರ ಮಾಡುವ ಕಾಯಕ ಮಾಡುತ್ತಿದ್ದರು. ಕಾಯಕ ನಿಷ್ಠರಾಗಿದ್ದ ಅವರು ಲಿಂಗಮ್ಮಳೊಂದಿಗೆ ವಿವಾಹವಾದರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಬದುಕಿನ ಕೊನೆಯವರೆಗೂ ಸಮಸಮಾಜಕ್ಕಾಗಿ ಅನೇಕ ವಚನಗಳನ್ನು ರಚಿಸಿದ್ದಾರೆʼ ಎಂದರು.
ಇದನ್ನೂ ಓದಿ : ಬೀದರ್ | ಸರ್ಕಾರದ 2 ವರ್ಷಗಳ ಸಾಧನೆಯ ಪ್ರದರ್ಶನಕ್ಕೆ ಚಾಲನೆ: ಗಮನ ಸೆಳೆಯುವ ಸಿಎಂ ಸಿದ್ದರಾಮಯ್ಯ ಸೆಲ್ಫಿ ಪಾಯಿಂಟ್ !
ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜ ಸಂಘದ ದತ್ತಾತ್ರಿ ಬಾಂದೇಕರ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೊಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಹಡಪದ ಸಮಾಜದ ಯುವ ಘಟಕದ ಅಧ್ಯಕ್ಷ ಸಂಗಮೇಶ, ರವೀಂದ್ರ ಡಿಗ್ಗಿ ಸೇರಿದಂತೆ ಸಮಾಜದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.