ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ದೇವನಹಳ್ಳಿ ಭೂ ಸ್ವಾಧೀನ ಬೆಂಬಲಿಸಿ ರೈತರು ಸುದ್ದಿಗೋಷ್ಠಿ ನಡೆಸಿದ್ದನ್ನು ದೇವನಹಳ್ಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಖಂಡಿಸಿದೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ದೇವನಹಳ್ಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ, “ಇಂದು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ ಮುಖಂಡರು ಬಹುಪಾಲು ಕಾಂಗ್ರೆಸ್ ಸರ್ಕಾರಕ್ಕೆ ಸೇರಿದವರಾಗಿದ್ದಾರೆ. ಅವರೆಲ್ಲ ಭೂವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಪ್ರಭಾವಿಗಳೂ ಕೂಡ ಆಗಿರುತ್ತಾರೆ” ಎಂದು ಆರೋಪಿಸಿದೆ.
“ವಾಸ್ತವದಲ್ಲಿ ‘ದೇವನಹಳ್ಳಿ ಚನ್ನರಾಯಪಟ್ಟಣ ರೈತ ಸಮಿತಿ’ ಹೆಸರಿನ ಯಾವುದೇ ಸಮಿತಿ ಇದುವರೆಗೂ ಚಾಲ್ತಿಯಲ್ಲಿ ಇಲ್ಲ. ಈಗಾಗಲೇ ಇಲ್ಲಿನ ಕೆಲ ರೈತರ ಜಮೀನುಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವ ಮೂಲಕ ಹಣ ಮಾಡಲು ಇವರೆಲ್ಲ ಹೊರಟಿದ್ದಾರೆ” ಎಂದು ದೂರಿದೆ.
“ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸುಮಾರು 1,200 ದಿನಗಳಿಂದ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ಭೂಸ್ವಾಧೀನವನ್ನು ವಿರೋಧಿಸಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ವಿಚಾರಗಳಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿರುವುದು ಗಮನಕ್ಕೆ ಬಂದಿದೆ. ಬುಹುಪಾಲು ರೈತರು ಭೂಮಿ ಕೊಡಲು ಸಿದ್ದರಿದ್ದೇವೆ ಎಂದು ಹೇಳಿಕೊಂಡಿರುತ್ತಾರೆ. ಇದು ಸುಳ್ಳು” ಎಂದು ಸಮಿತಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ದೇವನಹಳ್ಳಿ ಭೂ ಸ್ವಾಧೀನ | ಎಕರೆಗೆ ₹3 ಕೋಟಿ ಕೊಟ್ಟರೆ ಜಮೀನು ಕೊಡಲು ಸಿದ್ಧ: ಭೂಸ್ವಾಧೀನ ಬೆಂಬಲ ಸಮಿತಿ
“ಜನಪರ ಸಂಘಟನೆಗಳ ಬೆಂಬಲದೊಂದಿಗೆ ‘ದೇವನಹಳ್ಳಿ ಚಲೋ’ ಯಶಸ್ಸಿನ ನಂತರ ದಿನಾಂಕ 04-07-2025ರಂದು ರೈತ ನಿಯೋಗದೊಂದಿಗೆ ನಡೆಸಿದ ಸಭೆಯಲ್ಲಿ ರೈತಪರವಾದ ನಿರ್ಣಯವನ್ನು ತಗೆದುಕೊಳ್ಳಲು 10 ದಿನಗಳ ಗಡುವು ಕೇಳಿರುವ ಹಿನ್ನೆಲೆಯಲ್ಲಿ ಮತ್ತು ಇಡೀ ದೇವನಹಳ್ಳಿ ರೈತರ ಗೆಲುವನ್ನು ಕಾಯುತ್ತಿರುವ ಸಂದರ್ಭದಲ್ಲಿ ಅವರೆಲ್ಲರನ್ನೂ ದಾರಿತಪ್ಪಿಸಲು ಮತ್ತು ಗೊಂದಲ ಮೂಡಿಸಲು ಮಾಡಿರಬಹುದಾದ ಕುತಂತ್ರವಾಗಿದೆ” ಎಂದು ದೇವನಹಳ್ಳಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಆರೋಪಿಸಿದೆ.
“ಇದರ ಹಿಂದೆ ಬಂಡವಾಳ ಶಾಹಿಗಳ ಹಿತಾಸಕ್ತಿ ಕಾಯಲು ಉಸ್ತುವಾರಿ ಮಂತ್ರಿಗಳು ಮತ್ತು ಕೈಗಾರಿಕಾ ಸಚಿವರ ಕುಮ್ಮಕ್ಕು ಕೂಡ ಇರುವುದನ್ನು ಅಲ್ಲಗಳೆಯುವಂತಿಲ್ಲ. ವಾಸ್ತವದಲ್ಲಿ 75% ಗಿಂತ ಹೆಚ್ಚು ರೈತರು ಪ್ರಾಣ ಬಿಟ್ಟರೂ ಭೂಮಿ ಕೊಡುವುದಿಲ್ಲ ಎಂಬ ನಿಲುವಿನೊಂದಿಗೆ ಈಗಾಗಲೇ ಕೆಐಎಡಿಬಿಗೆ ದಾಖಲೆಗಳ ಸಮೇತ ಆಕ್ಷೇಪಣೆ ಸಲ್ಲಿಸಿದ್ದಾರೆ. ಇಂದಿಗೂ ಅವರೆಲ್ಲರೂ ಒಗ್ಗಟ್ಟಾಗಿಯೇಇದ್ದಾರೆ. ಈ ಹಿನ್ನಲೆಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಇಂದು ನಡೆದ ಪತ್ರಿಕಾಗೋಷ್ಠಿ ರೈತ ವಿರೋಧಿಯಾಗಿದೆ” ಎಂದು ಟೀಕಿಸಿದೆ.