ಬೆಂಗಳೂರು ಗ್ರಾಮಾಂತರ ಜಿಲ್ಲೆ | ಬದಲಾವಣೆ ಬಯಸಿರುವ ಕ್ಷೇತ್ರಗಳಲ್ಲಿ ಪಾರಮ್ಯ ಮೆರೆಯುವುದೇ ಕಾಂಗ್ರೆಸ್?

Date:

ರಾಜ್ಯದ ಎರಡನೇ ಅತಿ ಶ್ರೀಮಂತ ರಾಜಕಾರಣಿಯನ್ನು ಹೊಂದಿರುವ, ಕ್ಷೇತ್ರ ಬದಲಾಯಿಸಿ ಅದೃಷ್ಟ ಪರೀಕ್ಷೆಗೆ ನಿಂತ ಮಾಜಿ ಕೇಂದ್ರ ಸಚಿವರ ಭವಿಷ್ಯ ನಿರ್ಧರಿಸುವ, ಜೆಡಿಎಸ್ ಪ್ರಾಬಲ್ಯದ ಕೋಟೆಯೊಳಗೆ ಲಗ್ಗೆ ಇಡಲು ಕಾದಿರುವ ಕಾಂಗ್ರೆಸ್ ಪಡೆಯ ಗೆಲುವಿನ ರಣತಂತ್ರಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಈ ಬಾರಿ ಸಾಕ್ಷಿಯಾಗಲಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ

ಬೆಂಗಳೂರು ನಗರದ ಮಗ್ಗುಲಲ್ಲಿರುವ ಕ್ಷೇತ್ರ ಹೊಸಕೋಟೆ. ರಾಜ್ಯದ ಎರಡನೇ ಸಿರಿವಂತ ರಾಜಕಾರಣಿಯನ್ನು ಹೊಂದಿರುವ ಕ್ಷೇತ್ರವಿದು.

ರಾಜ್ಯ ರಾಜಕಾರಣದ ಜಿದ್ದಾಜಿದ್ದಿಯ ಕಣಗಳಲ್ಲಿ ಒಂದಾಗಿರುವ ಹೊಸಕೋಟೆ ಕ್ಷೇತ್ರದ ರಾಜಕೀಯ ಅಖಾಡವೇ ಬಲು ವಿಶಿಷ್ಟ. ಎರಡು ಕುಟುಂಬಗಳ ನಡುವಿನ ನೇರ ಕದನ ಕಾರಣದಿಂದ ರಾಜಕೀಯ ಪಕ್ಷಗಳಿಗಿಲ್ಲಿ ಮನ್ನಣೆ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹೀಗಿರುವ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಎಂಟಿಬಿ ನಾಗರಾಜ್, ಕಾಂಗ್ರೆಸ್‌ನಿಂದ ಶರತ್ ಬಚ್ಚೇಗೌಡ ಸೇರಿದಂತೆ ಒಟ್ಟು 17 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದ್ದಾರೆ. ಇಲ್ಲೇನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳದ್ದೇ ನೇರಾನೇರ ಹಣಾಹಣಿ.

1962ರಿಂದ 1999ರ ವರೆಗೆ ಬಚ್ಚೇಗೌಡ ಮತ್ತು ಚಿಕ್ಕೇಗೌಡ ಕುಟುಂಬಗಳು ಅಧಿಕಾರ ಚಲಾಯಿಸಿಕೊಂಡು ಬಂದಿದ್ದವು. ಇಂತಹ ಕುಟುಂಬ ಪ್ರಾಬಲ್ಯದ ಈ ಕ್ಷೇತ್ರದ ಬೇರು ಅಲುಗಿಸಿದವರು ಮಾಜಿ ಸಚಿವ ಎಂ ಟಿ ಬಿ ನಾಗರಾಜ್.

2004ರಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಎಂಟಿಬಿ ಇಲ್ಲಿನ ರಾಜಕೀಯದ ಚಿತ್ರಣವನ್ನು ಬದಲಾಯಿಸಿದರು. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿದ್ದ ಕ್ಷೇತ್ರದಲ್ಲ ಮೊದಲ ಬಾರಿಗೆ ಒಕ್ಕಲಿಗರೇತರಾಗಿ ಗೆದ್ದು ಸಾಧನೆ ಮಾಡಿದ ಮೊದಲ ಕುರುಬ ಸಮಾಜದ ನಾಯಕ ಎನ್ನುವ ಹೆಗ್ಗಳಿಕೆ ಎಂಟಿಬಿಯವರದ್ದು.

ಇಷ್ಟೆಲ್ಲ ಸಾಧನೆ ಮಾಡಿದ ಎಂಟಿಬಿ ನಾಗರಾಜ್ ಈಗ ಕ್ಷೇತ್ರದ ಮಾಜಿ ಶಾಸಕರು. 2004, 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯನಾಗಿ ಗೆದ್ದು ಸಚಿವರಾಗಿ ಕೆಲಸ ಮಾಡಿದ ನಾಗರಾಜ್ ಆ ಬಳಿಕ ನಡೆದ ರಾಜಕೀಯ ಪಲ್ಲಟದಲ್ಲಿ ಬಿಜೆಪಿ ಸದಸ್ಯರಾದರು. ಹೀಗಾಗಿ ನಂತರ ನಡೆದ ಉಪಚುನಾವಣೆಯಲ್ಲಿ ಮತ್ತೆ ಕಣಕ್ಕಿಳಿದ ಎಂಟಿಬಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದಿದ್ದ ಬಚ್ಚೇಗೌಡ ಪುತ್ರ, ಮಾಜಿ ಬಿಜೆಪಿ ಅಭ್ಯರ್ಥಿ ಶರತ್ ಬಚ್ಚೇಗೌಡ ಎದುರು ಪರಾಭವಗೊಂಡರು.

ಹೀಗೆ ಕ್ಷೇತ್ರದಲ್ಲಿ ಆರಂಭವಾದ ಹೊಸ ತಲೆಮಾರಿನ ರಾಜಕಾರಣ ಈಗ ಮತ್ತಷ್ಟು ಬಿರುಸಾಗಿದೆ. ಶ್ರೀಮಂತ ಅಭ್ಯರ್ಥಿ ಎದುರು ಯುವ ಸಮುದಾಯ ಮತ್ತು ಜನಪರ ಕಾರ್ಯಗಳನ್ನು ಮುಂದಿಟ್ಟುಕೊಂಡೇ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿಗಳ ಬಲಾಬಲ

ಯುವನಾಯಕನಾಗಿ ಕ್ಷೇತ್ರದಲ್ಲಿ ಛಾಪು ಮೂಡಿಸಿದವರು ಶರತ್ ಬಚ್ಚೇಗೌಡ. ಈ ಹಿಂದೆ ಸಚಿವರಾಗಿದ್ದ ಎಂಟಿಬಿ ನಾಗರಾಜ್ ಅವಧಿಯಲ್ಲಾದ ಕ್ಷೇತ್ರದ ಅಭಿವೃದ್ದಿಯ ಅಡಿಪಾಯದ ಮೇಲೆ ಅಚ್ಚುಕಟ್ಟಾದ ಪ್ರಗತಿಯ ಕಟ್ಟಡ ಕಟ್ಟಿದವರು ಶರತ್ ಬಚ್ಚೇಗೌಡ. ಜನರ ಕಷ್ಟ ಸುಖಕ್ಕೆ ತಕ್ಷಣದಲ್ಲೇ ಸ್ಪಂದಿಸುವ ಇವರು ಪಧವೀಧರ. ಅಪ್ಪನ ಪಟೇಲಿಕೆ ರಾಜಕಾರಣಕ್ಕಿಂತ ಭಿನ್ನ ರಾಜಕಾರಣದ ಹಾದಿ ತುಳಿದು ಭೇಷ್ ಎನಿಸಿಕೊಂಡಿರುವುದು ಇವರ ಪ್ಲಸ್ ಪಾಯಿಂಟ್.

ಇನ್ನು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್, ಎಲ್ಲ ಇದ್ದೂ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ಕೈ ಕಟ್ಟಿ ನಿಂತಿರುವವರು. ಹಣ ಬಲ ಜನಬಲ ತೋಳ್ಬಲ ಹಾಗೂ ಮಾಜಿ ಸಚಿವರ ಪಟ್ಟವಿದ್ದು, ತಾಲೂಕಿಗೆ ಒಂದು ಸಾವಿರ ಕೋಟಿ ಅನುದಾನ ತಂದುಕೊಟ್ಟಿದ್ದರೂ, ಬದಲಾದ ರಾಜಕೀಯಕ್ಕೆ ಹೊಂದಿಕೊಳ್ಳುವಲ್ಲಿ ಎಡವಿ ಜನರ ಅವಕೃಪೆಗೆ ಪಾತ್ರರಾದವವರು. ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿಕೊಂಡು ಈ ಬಾರಿ ಮತಯಾಚನೆಗೆ ನಿಂತಿರುವ ಅವರು ಐದನೇ ಗೆಲುವಿಗೆ ಕಾದು ನಿಂತಿದ್ದಾರೆ.

ಜಾತಿ ಲೆಕ್ಕಾಚಾರ

ಒಟ್ಟು 2,25,567 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ1,12,339 ಪುರುಷ, 1,13,211 ಮಹಿಳಾ ಮತದಾರರಿದ್ದಾರೆ. ಒಕ್ಕಲಿಗರೇ ಇಲ್ಲಿ ಗೆಲುವಿನ ನಿರ್ಣಾಯಕ. ಇವರ ಜೊತೆ ಎಸ್ಸಿ-ಎಸ್ಟಿ, ಲಿಂಗಾಯುತರು, ಮುಸ್ಲಿಂ, ಕುರುಬ, ಗೊಲ್ಲ, ತಿಗಳ, ಬಲಿಜಿಗ, ಕಮ್ಮ ನಾಯ್ಡು, ಬ್ರಾಹ್ಮಣ, ಜೈನ್, ಮಡಿವಾಳ, ಭಜಂತ್ರಿ, ಗಾಣಿಗ, ವಿಶ್ವಕರ್ಮ, ದೇವಾಂಗ, ಉಪ್ಪಾರ, ಕುಂಬಾರ, ತೊಗಟವೀರ ಸಮುದಾಯದವರು ಇದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರ

ಬೆಂಗಳೂರು ನಗರದ ಹೆಬ್ಬಾಗಿಲೆಂದು ಕರೆಯಿಸಿಕೊಳ್ಳವ ನೆಲಮಂಗಲ ವಿಧಾನಸಭಾ ಕೇತ್ರ ಜಾತಿ ರಾಜಕಾರಣದ ಮತ್ತೊಂದು ಮಗ್ಗಲಿಗೆ ಹೆಸರಾಗಿರುವ ಮೀಸಲು ಕ್ಷೇತ್ರ. ಈ ಕ್ಷೇತ್ರದಲ್ಲಿ ಇದುವರೆಗೂ ಮೂರು ಚುನಾವಣೆಗಳು ನಡೆದಿವೆ.

ಎಸ್ಸಿ-ಎಸ್ಟಿ ಸಮುದಾಯದ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯ ಎರಡನೇ ಸ್ಥಾನದಲ್ಲಿದೆ. ಕಳೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ನೆಲೆ ಭದ್ರಪಡಿಸಿಕೊಂಡಿದೆ. ಇಲ್ಲಿ ಬಿಜೆಪಿ ಕಳೆದಕೊಂಡಿರುವ ತನ್ನ ಅಸ್ತಿತ್ವ ಮರಳಿ ಪಡೆಯಲು ಹೋರಾಟ ಮುಂದುರೆಸಿದೆ.

ನೆಲಮಂಗಲ ಕ್ಷೇತ್ರಕ್ಕೆ 2008 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ವಿ. ನಾಗರಾಜ್ ಗೆಲುವು ಸಾಧಿಸಿದ್ದರು. 2013 ರಲ್ಲಿ ಜೆಡಿಎಸ್‌ನ ಡಾ. ಕೆ. ಶ್ರೀನಿವಾಸಮೂರ್ತಿ ಜಯ ಗಳಿಸಿದ್ದರು. 2018 ರಲ್ಲಿ ಮತ್ತೆ ಡಾ. ಕೆ. ಶ್ರೀನಿವಾಸಮೂರ್ತಿ ಶಾಸಕರಾಗಿದ್ದರು.

2023ರ ಚುನಾವಣೆಯಲ್ಲಿ ಜೆಡಿಎಸ್‌ನ ಹಾಲಿ ಶಾಸಕ ಶ್ರೀನಿವಾಸಮೂರ್ತಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದರೆ, ಕಾಂಗ್ರೆಸ್‌ನಿಂದ ಎನ್.ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ಸಪ್ತಗಿರಿ ಶಂಕರ್ ನಾಯಕ್ ಕಣದಲ್ಲಿದ್ದಾರೆ.

ಅಭ್ಯರ್ಥಿಗಳ ಬಲಾಬಲ

ಹಾಲಿ ಶಾಸಕ ಡಾ.ಕೆ. ಶ್ರೀನಿವಾಸ ಮೂರ್ತಿ ಸೌಮ್ಯ ಸ್ವಭಾವದ ರಾಜಕಾರಣಿ. ಜನರ ಕೈಗೆ ಸಿಗುವ ಶಾಸಕ. ಇದುವರೆಗೂ ಯಾವುದೇ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳಿಗೆ ಸಿಲುಕದ ನಾಯಕ. ಇದು ಇವರ ವೈಯಕ್ತಿಕ ಶಕ್ತಿಯಾದರೆ, ಕ್ಷೇತ್ರದಲ್ಲಿರುವ ಜೆಡಿಎಸ್ ಪರ ಅಲೆ ಮತ್ತು ಕುಮಾರಸ್ವಾಮಿ ವಿಚಾರವಾಗಿನ ಅಭಿಮಾನ ಇವರಿಗೆ ಮತ್ತಷ್ಟು ಬಲ ತುಂಬಿವೆ.

ಬೆಂಗಳೂರು ಹೆಬ್ಬಾಗಿಲೆಂಬ ಅನ್ವರ್ಥ ನಾಮಕ್ಕೆ ತಕ್ಕಂತೆ ಕ್ಷೇತ್ರಾಭಿವೃದ್ಧಿ ಮಾಡದೇ ಇರುವುದು ಇವರ ಮೈನಸ್ ಪಾಯಿಂಟ್. ಇದರ ಜೊತೆಗೆ ಮಾಜಿ ಎಂಎಲ್ಸಿ ಬೆಮೆಲ್ ಕಾಂತರಾಜ್ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವುದರಿಂದ ಜೆಡಿಎಸ್ ಅಭ್ಯರ್ಥಿಗೆ ಕೊಂಚ ಹಿನ್ನಡೆಯಾಗಲಿದೆ.

ಕಾಂಗ್ರೆಸ್ ಅಭ್ಯರ್ಥಿ ಎನ್ ಶ್ರೀನಿವಾಸ್‌ಗೆ ಹೊರಗಿನವರೆಂಬುವುದೇ ಮೈನಸ್ ಪಾಯಿಂಟ್, ರಾಜಕೀಯ ಮೇಲಾಟದಲ್ಲಿ ಹಿಂದೊಮ್ಮೆ ರಕ್ತಮಂಗಲವೆಂದು ಕರೆಯಿಸಿಕೊಂಡಿದ್ದ ಕ್ಷೇತ್ರದ ಒಳಹೊರಗನ್ನು ತಿಳಿಯದಿರುವ ವ್ಯಕ್ತಿ ಕ್ಷೇತ್ರಕ್ಕೇನು ಮಾಡುತ್ತಾರೆ ಎನ್ನುವ ಪ್ರಶ್ನೆ ಇಲ್ಲಿನವರದ್ದು. ಇದೇ ಕಾರಣದಿಂದ ಕ್ಷೇತ್ರದ ಹಿರಿಯ ನಾಯಕ, ದಿವಂಗತ ಅಂಜನಮೂರ್ತಿ ಬೆಂಬಲಿಗರು ಕಾಂಗ್ರೆಸ್‌ನಿಂದ ದೂರ ಉಳಿದಿದ್ದಾರೆ.

ಉಳಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಇರುವುದು ಹೊರಗಿನವರೆನ್ನುವ ಆತಂಕವನ್ನು ದೂರ ಮಾಡಲು ಸಹಕಾರಿಯಾಗಲಿದೆ. ಇದರೊಂದಿಗೆ ಬಿಮೆಲ್ಎಂ ಕಾಂತರಾಜು ಟೀಂ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಮತ್ತೊಂದು ಪ್ಲಸ್ ಪಾಯಿಂಟ್. ಎಲ್ಲರನ್ನೂ ಒಳಗೊಳ್ಳವ ಶಕ್ತಿ ಇವರಿಗಿರುವ ಕಾರಣ ಮೊದಲ ಪ್ರಯತ್ನವೇ ಗೆಲುವಿನದ್ದಾಗಬಹುದೆನ್ನುವುದು ಹಲವರ ಅಭಿಪ್ರಾಯ

ಮಾಜಿ ಸಚಿವ ಶಂಕರ್ ನಾಯಕ್ ಪುತ್ರ ಸಪ್ತಗಿರಿ ಈ ಬಾರಿ ಇಲ್ಲಿನ ಬಿಜೆಪಿ ಅಭ್ಯರ್ಥಿ. ನೆಲಮಂಗಲ ಅಭಿವೃದ್ಧಿಗೆ ಶ್ರಮಿಸಿದ ಪ್ರಮುಖರಲ್ಲಿ ಶಂಕರ್ ನಾಯಕ್ ಅವರೂ ಒಬ್ಬರು. ಬಿಜೆಪಿ ಹೆಸರು ಕೈ ಹಿಡಿಯಬಹುದೆನ್ನುವ ಲೆಕ್ಕಚಾರ ಇವರದ್ದು.

ಕಾಂಗ್ರೆಸ್‌ನಂತೆಯೇ ಇವರೂ ಇಲ್ಲಿ ಹೊಸ ಮುಖವಾಗಿರುವುದು ಇವರ ಮೈನೆಸ್ ಅಂಶ. ಇದರ ಜೊತೆಗೆ ಕ್ಷೇತ್ರದ ಬೂತ್ ಮಟ್ಟದಲ್ಲಿ ಮುಖಂಡರ ಕೊರತೆ, ಜನರ ಬಳಿ ಹೋಗದೇ ತಂದೆಯ ಹೆಸರು ಬಳಸಿಕೊಂಡು ಚುನಾವಣೆ ನಡೆಸಲಿದ್ದಾರೆ ಎನ್ನುವ ಆರೋಪ ಇವರ ಮೇಲಿದೆ. ಹಾಗೆಯೇ ಟಿಕೆಟ್ ತಪ್ಪಿದ ನಾಗರಾಜು, ಹೊಂಬಯ್ಯ, ಎಂ.ಎನ್ ರಾಮ್ ಅವರುಗಳ ಒಳಬಂಡಾಯ ಅಭ್ಯರ್ಥಿಗೆ ಹೊಡೆತ ನೀಡಬಹುದು.

ಜಾತಿ ಲೆಕ್ಕಾಚಾರ

ಮೀಸಲು ಕ್ಷೇತ್ರವಾದ ನೆಲಮಂಗಲದಲ್ಲಿ 2,15,272 ಮತದಾರರಿದ್ದಾರೆ. ಅವರ ಪೈಕಿ 1,06,436 ಪುರುಷರು, 1,08,758 ಮಹಿಳಾ ಮತದಾರರಿದ್ದಾರೆ. ಸಮುದಾಯದ ಲೆಕ್ಕಾಚಾರದಲ್ಲಿ ನೋಡುವುದಾದರೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ 70,000, 45,000 ಒಕ್ಕಲಿಗ, 35,000 ಲಿಂಗಾಯತ, 10,000 ಕುರುಬರು, 8,000, ಮುಸ್ಲಿಂ, 15,000, ಬೋವಿ, 22,000 ಇತರೆ ಸಮುದಾಯಗಳಿವೆ.

ದಲಿತರ ಜೊತೆ ಒಕ್ಕಲಿಗರ ಮತಪೆಟ್ಟಿಗೆಯನ್ನು ಸಮರ್ಥವಾಗಿ ಹೊತ್ತೊಯ್ಯುವವರಿಗೆ ಈ ಬಾರಿ ಕ್ಷೇತ್ರದ ಶಾಸಕರಾಗುವ ಅವಕಾಶ ಲಭ್ಯವಾಗಲಿದೆ.

ಈ ಸುದ್ದಿ ಓದಿದ್ದೀರಾ? : ಬಾಗಲಕೋಟೆ ಜಿಲ್ಲೆ | ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ, ಖಾತೆ ತೆರೆಯುವ ಹಠದಲ್ಲಿ ಜೆಡಿಎಸ್‌

ದೇವನಹಳ್ಳಿ ವಿಧಾನಸಭಾ ಕ್ಷೇತ್ರ

ಹಿಂದೆ ಮೈಸೂರು ಹುಲಿ ಟಿಪ್ಪು ಸುಲ್ತಾನನ ಜನ್ಮಸ್ಥಾನವೆನ್ನುವ ಕಾರಣಕ್ಕೆ ಹೆಸರಾಗಿದ್ದ ದೇವನಹಳ್ಳಿ, ಈಗ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಗತ್ತಿಗೆ ಚಿರಪರಿಚಿತವಾಗಿದೆ. ವಿಶ್ವ ಮನ್ನಣೆಯ ಊರನ್ನೊಳಗೊಂಡಿರುವ ವಿಧಾನಸಭಾ ಕ್ಷೇತ್ರ ಈ ಬಾರಿ ಹಳೆಯ ಮತ್ತು ಹೊಸಬರ ನಡುವಿನ ಸ್ಪರ್ಧಾಕಣವಾಗಿ ಬದಲಾಗಿದೆ. ಈ ಕ್ಷೇತ್ರದ ಒಬ್ಬೇ ಒಬ್ಬ ಶಾಸಕನೂ ಯಾವ ಸರ್ಕಾರದಲ್ಲೂ ಮಂತ್ರಿಯಾಗದೇ ಇರುವುದು ಇದಕ್ಕಿರುವ ಕುಖ್ಯಾತಿ.

ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಈ ಬಾರಿ ಕೈ ವಶಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ನೆಲಮಂಗಲದಂತೆ ಇದೂ ಮೀಸಲು ಕ್ಷೇತ್ರವಾಗಿರುವ ಕಾರಣ ದಲಿತ ಸಮುದಾಯ ಯಾವ ಪಕ್ಷಕ್ಕೆ ಮನ್ನಣೆ ನೀಡಲಿದೆ ಎನ್ನುವ ಕಾತರ ಎಲ್ಲರಲ್ಲಿದೆ.

ಜೆಡಿಎಸ್ ಪಕ್ಷ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿಯವರನ್ನೇ ಮತ್ತೊಂದು ಅವಧಿಗೆ ಕಣಕ್ಕಿಳಿಸಿದೆ. ಇತ್ತ ಬಿಜೆಪಿ ಪಿಳ್ಳಮುನಿಶಾಮಪ್ಪರನ್ನು ಎರಡನೇ ಬಾರಿಗೆ ಇಲ್ಲಿನ ಉಮೇದುವಾರರನ್ನಾಗಿಸಿದೆ. ಕಳೆದ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುವುದೇ ಪಿಳ್ಳಮುನಿಶ್ಯಾಮಪ್ಪನವರಿಗಿರುವ ಮೊದಲ ಟಾಸ್ಕ್. ಇವರಿಬ್ಬರ ನಡುವೆ ಕ್ಷೇತ್ರದ ಹೊಸ ಮುಖವಾಗಿ ಕಾಣಿಸಿಕೊಂಡಿರುವವರು ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ.

ಅಭ್ಯರ್ಥಿಗಳ ಬಲಾಬಲ

ದೇವನಹಳ್ಳಿ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಪ್ರಾರಂಭದಲ್ಲೇ ಬಂಡಾಯದ ಬಿಸಿ ಅನುಭವಿಸಿದ್ದವರು. 2018ರ ಚುನಾವಣೆಯಲ್ಲಿ ಗೆದ್ದಿದ್ದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಥಳೀಯರಲ್ಲ. ನಾಲ್ಕು ವರ್ಷದ ಹಿಂದೆ ದೇವನಹಳ್ಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಅವರು ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಪರಿಚಿತರಾದವರು. ಮಂದೆ ಇದೇ ಅವರ ಶಾಸಕ ಸ್ಥಾನಕ್ಕೆ ಮೆಟ್ಟಿಲಾಗಿದ್ದು ಈಗ ಇತಿಹಾಸ.

ಅಂತರರಾಷ್ಟ್ರೀಯ ಮಟ್ಟದ ಕಂಪನಿಳಿಗಳು ಕ್ಷೇತ್ರದಲ್ಲಿದ್ದರೂ ಇಲ್ಲಿನ ಸ್ಥಳೀಯರಿಗೆ ದೊಡ್ಡ ಪ್ರಮಾಣದ ಉದ್ಯೋಗಗಳು ಲಭಿಸುತ್ತಿಲ್ಲ. ಇದನ್ನು ಸರಿಪಡಿಸುವಲ್ಲಿ ಶಾಸಕರು ಆಸಕ್ತಿ ತೋರಲ್ಲ ಎನ್ನುವ ಆರೋಪ ನಾರಾಯಣ ಸ್ವಾಮಿಯವರ ಮೊದಲ ಮೈನಸ್ ಅಂಶ.

ಉಳಿದಂತೆ ಇಲ್ಲಿನ ರಿಯಲ್ ಎಸ್ಟೇಟ್ ದಂಧೆ ಅಪರಾಧ ಚಟುವಟಿಕೆಗೆ ತಡೆಯುವಲ್ಲಿ ವಿಫಲರಾಗಿರುವುದು, ಆವತಿ ಬೆಟ್ಟ, ದೇವನಹಳ್ಳಿ ಕೋಟೆ, ನಲ್ಲೂರಿನ ಹುಣಸೆ ತೋಪು, ಕುಂದಾಣ ಬೆಟ್ಟ, ತಿಮ್ಮರಾಯಸ್ವಾಮಿ ಬೆಟ್ಟ ಸೇರಿದಂತೆ ಇತರ ಪ್ರವಾಸಿ ತಾಣಗಳ ಅಭಿವೃದ್ಧಿಗಳಿಗೆ ಅನುದಾನಗಳು ಬಳಕೆಯಲ್ಲಿ ಎಡವಿರುವುದು ಮತ್ತೊಂದು ನಕಾರಾತ್ಮಕ ಅಂಶ.

ಮೊದಲ ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ್ದ ತಪ್ಪನಿಂದ ಪಾಠ ಕಲಿತಿರುವ ಬಿಜೆಪಿಯ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ಈಗ ಮತ್ತೊಂದು ಅವಧಿಯ ಶಾಸಕತ್ವಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್ ತೊರೆದು ಬಿಜೆಪಿ ಸೇರಿದ ಬಳಿಕ ಪಕ್ಷ ಸಂಘಟನೆ ವಿಚಾರದಲ್ಲಿ ನಿರೀಕ್ಷಿತ ಸಾಧನೆ ಮಾಡದಿರುವುದೇ ಅವರ ಮೈನಸ್ ಪಾಯಿಂಟ್. ಬಿಜೆಪಿ ಘಟಾನುಘಟಿ ನಾಯಕರುಗಳು ರೋಡ್ ಶೋ ನಡೆಸಿ ಅವರ ಪರ ಮತಯಾಚನೆ ಮಾಡಿರುವುದು ಈಗ ಅವರ ಪಾಲಿಗೆ ಕೊಂಚ ಶಕ್ತಿ ತುಂಬಿದೆ.

ಕ್ಷೇತ್ರ ಹೊಸದಾದರೂ ರಾಜಕೀಯ ಅನುಭವದ ಗಣಿ ಕೆ ಎಚ್ ಮುನಿಯಪ್ಪ ಇಲ್ಲಿನ ಗೆಲುವಿನ ಫೇವರೆಟ್. ದಲಿತ ಸಮುದಾಯದ ಒಳಪಂಗಡದ ಜಾತಿ ಸಮೀಕರಣವನ್ನು ಅರೆದು ಕುಡಿದಿರುವ ಅವರು ಒಳಹೊಡೆತದ ಲಾಬಿಯನ್ನು ಮೀರಿ ನಿಲ್ಲಬಲ್ಲ ಚತುರ. ಇದನ್ನು ಮಾಡಿ ತೋರಿದ್ದೇ ಆದಲ್ಲಿ ಗೆಲುವು ಅನಾಯಾಸ.

ಹೊರಗಿನವರೆನ್ನುವ ಮೈನಸ್ ಅಂಶ ಬಿಟ್ಟರೆ ಉಳಿದಂತೆ ಮಾಜಿ ಕೇಂದ್ರ ಸಚಿವರೆನ್ನುವ ಅನುಭವ ಮತ್ತು ಕ್ಷೇತ್ರದ ಬಗ್ಗೆ ಜನತೆಗೆ ನೀಡಿರುವ ಭರವಸೆಯ ವಾಗ್ದಾನ ಅವರನ್ನು ಗೆಲುವಿನತ್ತ ಮುನ್ನಡೆಸಲಿದೆ ಎನ್ನುವುದು ಇಲ್ಲಿನವರ ಮಾತು. ಕ್ಷೇತ್ರದಲ್ಲಿ ಹೆಚ್ಚಿರುವ ಬಲಗೈ ಸಮುದಾಯದ ಓಲೈಕೆಯೊಂದೇ ಮುನಿಯಪ್ಪ ಮುಂದಿರುವ ಮೇಜರ್ ಟಾಸ್ಕ್.

ಜಾತಿ ಲೆಕ್ಕಾಚಾರ

ದೇವನಹಳ್ಳಿ ಕ್ಷೇತ್ರದಲ್ಲಿ ಒಟ್ಟು 206029 ಮತದಾರರು ಇದ್ದಾರೆ. ಈ ಪೈಕಿ ಎಸ್ಸಿ-ಎಸ್ಟಿ – 74,662, ಒಕ್ಕಲಿಗ – 45,723, ಕುರುಬರು – 16,231 ಮತದಾರರು ಇದ್ದಾರೆ. ಇನ್ನು ಮುಸ್ಲಿಮರು 8723, ಲಿಂಗಾಯತ – 7233 ಹಾಗೂ ವಿಶ್ವಕರ್ಮ ಸಮುದಾಯದವರು 2621 ಮತದಾರರಿದ್ದಾರೆ . ಈ ಸಮೀಕರಣದಲ್ಲಿ ಮೊದಲ ಮೂರು ಸಮುದಾಯಗಳ ಮತ ಕ್ರೋಡೀಕರಣ ಮಾಡಿಕೊಂಡವರಿಗೆ ಗೆಲುವು ಕಟ್ಟಿಟ್ಟ ಬುತ್ತಿ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ

ಬೆಂಗಳೂರಿಗೆ ಹತ್ತಿರವಿದ್ದರೂ ಗ್ರಾಮೀಣ ಸೊಗಡನ್ನು ಇನ್ನೂ ತನ್ನಲ್ಲಿ ಉಳಿಸಿಕೊಂಡಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಸದ್ಯ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಸಾಂಪ್ರದಾಯಿಕ ಎದುರಾಳಿ ಎಂದು ಗುರುತಿಸಿಕೊಂಡಿದ್ದ ಕಾಂಗ್ರೆಸ್, ಜೆಡಿಎಸ್ ಬದಲು ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ. ಇಲ್ಲಿಯವರೆಗೂ ಜಾತ್ಯತೀತ ಪಕ್ಷಗಳನ್ನೇ ಇಲ್ಲಿನ ಮತದಾರರು ಬೆಂಬಲಿಸುತ್ತ ಬಂದಿರುವುದು ವಿಶೇಷ.

ಈ ಬಾರಿಯ ಚುನಾವಣಾ ರಣಕಣಕ್ಕೆ ಬಿಜೆಪಿ ಯಾದವ ಸಮುದಾಯದ ಧೀರಜ್ ಮುನಿರಾಜು ಅವರನ್ನು ,ಕಾಂಗ್ರೆಸ್ ಒಕ್ಕಲಿಗ ಸಮುದಾಯದ ಟಿ.ವೆಂಕಟರಮಣಯ್ಯ ಅವರನ್ನು ಹಾಗೂ ಜೆಡಿಎಸ್ ಒಕ್ಕ್ಕಲಿಗರ ಮುನೇಗೌಡ ಅವರನ್ನಿಳಿಸಿದೆ. ಇವರುಗಳ ಜೊತೆ ಎಎಪಿಯ ಪುರುಷೋತ್ತಮ ಕೂಡ ಅದೃಷ್ಟ ಪರೀಕ್ಷೆಗೆ ನಿಂತಿರುವ ಮತ್ತೋರ್ವ ಅಭ್ಯರ್ಥಿ.

ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲೂ ಕೈ ಹಿಡಿತದಲ್ಲಿರುವ ಕ್ಷೇತ್ರ. ಈ ಬಾರಿಯೂ ಆ ಪಕ್ಷದ ತೆಕ್ಕೆ ಸೇರಲಿದೆ ಎನ್ನುವ ವಿಶ್ಲೇಷಣೆ ನಡೆದಿದೆ. ಹಾಲಿ ಶಾಸಕ ವೆಂಕಟರಮಣಯ್ಯ ಈ ಬಾರಿ ಗೆದ್ದು ಹ್ಯಾಟ್ರಿಕ್ ಜಯದ ಸರದಾರರಾಗುವ ಆಸೆಯಲ್ಲಿದ್ದಾರೆ.

ಇತ್ತ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವವರು ಜೆಡಿಎಸ್‌ನ ಮುನೇಗೌಡ; ಎರಡು ಚುನಾವಣೆಗಳಲ್ಲಿ ಸೋತು ಹೈರಾಣಾಗಿರುವ ಮುನೇಗೌಡ ಈ ಬಾರಿ ಗೆಲುವಿನ ನಗು ಬೀರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ಇವರಿಬ್ಬರ ನಡುವಲ್ಲಿ ಬಿಜೆಪಿ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.

ಆರೋಗ್ಯ ಸಚಿವ ಸುಧಾಕರ್ ಪಾಲಿಗೆ ಚಿಕ್ಕಬಳ್ಳಾಪುರದಂತೆ ಈ ಕ್ಷೇತ್ರವೂ ಪ್ರತಿಷ್ಠಿತವಾಗಿರುವ ಕಾರಣ ಬಿಜೆಪಿ ಅಭ್ಯರ್ಥಿ ಪಾಲಿಗೆ ಇದು ಅದೃಷ್ಟದ ಹೋರಾಟ.

ಎತ್ತಿನ ಹೊಳೆ ಯೋಜನೆ ಎನ್ನುವುದು ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರದ ಜನರ ಕನಸಿನ ಯೋಜನೆ. ‘ಎತ್ತಿನಹೊಳೆ ಯೋಜನೆ’ ಮೂಲಕ ನೀರು ಹರಿದುಬರುತ್ತದೆ ಎಂದು ಕಾದು ಕುಳಿತಿರುವ ಜನರ ಆಶೋತ್ತರ ಈಡೇರಿಸುವರಿಗೆ ಈ ಭಾರಿ ವಿಜಯ ಮಾಲೆ.

ಜಾತಿ ಲೆಕ್ಕಾಚಾರ

ಒಟ್ಟು 2,03,232 ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ 46,620 ಎಸ್ಸಿ-ಎಸ್ಟಿ ಸಮುದಾಯದ ಮತದಾರರು, 43,923 ಒಕ್ಕಲಿಗ, 26,278 ಲಿಂಗಾಯತ, ಹಾಗೂ 18,743 ಮುಸ್ಲಿಂ ಮತದಾರರಿದ್ದಾರೆ. ಇವರ ಒಲವು ಯಾರ ಕಡೆ ಎನ್ನುವುದರ ಮೇಲೆ ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪಚುನಾವಣೆ ಫಲಿತಾಂಶ | 13ರ ಪೈಕಿ 10ರಲ್ಲಿ ಗೆದ್ದ ‘ಇಂಡಿಯಾ’; ಎನ್‌ಡಿಎಗೆ ಕೇವಲ 2 ಸ್ಥಾನ

ಲೋಕಸಭಾ ಚುನಾವಣೆಯಲ್ಲಿನ ಪ್ರಬಲ ಪ್ರದರ್ಶನವನ್ನು ಮುಂದುವರೆಸಿರುವ 'ಇಂಡಿಯಾ' ಮೈತ್ರಿಕೂಟ ಏಳು ರಾಜ್ಯಗಳ...

ಜಮ್ಮು-ಕಾಶ್ಮೀರ | ‘ಹುತಾತ್ಮರ ದಿನ’ ಆಚರಣೆಗೆ ತಡೆ; ಹಲವು ನಾಯಕರಿಗೆ ಗೃಹಬಂಧನ

'ಹುತಾತ್ಮರ ದಿನಾಚರಣೆ' ಆಚರಿಸಲು ಶ್ರೀನಗರದ ಡೌನ್‌ಟೌನ್‌ಲ್ಲಿರುವ ಹುತಾತ್ಮರ ಸ್ಮಶಾಕಕ್ಕೆ ತೆರಳಲು ನಮಗೆ...

ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಮುಂದುವರಿಯುವ ನೈತಿಕತೆ ಉಳಿಸಿಕೊಂಡಿಲ್ಲ: ಎ.ನಾರಾಯಣಸ್ವಾಮಿ

ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ ಅನಾವರಣ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣಗಳಿಗೆ ನೈತಿಕ...