ಈ ಲೇಖನವು ಮುಸ್ಲಿಮ್ ಲೂಟಿಕೋರರು ಹಾಗೂ ಇಲ್ಲಿನ ಪುರೋಹಿತರ ನಡುವಿನ ನಂಟನ್ನು ಬಸವಣ್ಣನವರು ಬಲ್ಲವರಾಗಿದ್ದರು ಎನ್ನುವುದಕ್ಕೆ ಪರೋಕ್ಷವಾಗಿ ಸಾಕ್ಷಿಯನ್ನು ಒದಗಿಸುತ್ತದೆ. ಆದರೆ ಬಸವಣ್ಣನವರ ವಚನವೊಂದನ್ನು ಈ ವೀರಶೈವ ಪಂಡಿತ ಆದಿಯಾಗಿ ಎಲ್ಲಾ ಬಲಪಂಥೀಯ ವೈದಿಕ ಲೇಖಕರು ಅಪವ್ಯಾಖ್ಯಾನಿಸುತ್ತ ಬಸವಣ್ಣನವರು ಮುಸ್ಲಿಮರ ವಿರುದ್ಧವಾಗಿದ್ದರು ಎಂದು ವಾದಿಸುತ್ತಿರುವುದು ಅತ್ಯಂತ ಹೇಯ ಹಾಗೂ ಪೂರ್ವಾಗ್ರಹ ಪೀಡಿತ ʼಇಸ್ಲಾಮೊಫೋಬಿಯಾ‘ ಪರಿಣಾಮದಿಂದ
ಸಾಮಾನ್ಯವಾಗಿ ವೀರಶೈವವಾದಿಗಳು ಲಿಂಗಾಯತ ಧರ್ಮದ ಪ್ರಮುಖ ಫಲಾನುಭವಿಗಳು. ಶತಶತಮಾನಗಳಿಂದ ಶ್ರಮಿಕ ವರ್ಗದ ಲಿಂಗಾಯತರ ಭಿಕ್ಷೆಯಲ್ಲಿ ಪರಾವಲಂಬಿಯಾಗಿ ಬದುಕುತ್ತಿರುವವರು. ಇತ್ತೀಚಿಗೆ ಲಿಂಗಾಯತರನ್ನು “ಲಿಂಗಹತ” ರು ಎನ್ನುವ ಅಶ್ಲೀಲ, ಅನಾಗರಿಕ, ಉಡಾಫೆಯ, ಸೌಜನ್ಯಹೀನ, ಅಪಯಕಾರಿ, ಅಪಕ್ವ ಹಾಗೂ ಸಂಕುಚಿತ ಪದಪ್ರಯೋಗ ಮಾಡುತ್ತಾ ವಿಕೃತ ಆನಂದ ಹೊಂದುವ ನಿರಂತರ ಪೀಡನಸುಖಿಗಳು ಉದ್ಭವಿಸಿರುವುದು ಆಶ್ಚರ್ಯದ ಸಂಗತಿಯೇನಲ್ಲ. ಸಂಕುಚಿತ ಜಾತಿ ಮನಸ್ಸಿನ ಪುರೋಹಿತಶಾಹಿ ವರ್ಗಕ್ಕೆ ಈ ಬಗೆಯ ವಿಕೃತ ಆನಂದ ಪಡೆಯುವ ಚಾಳಿ ಇದ್ದೇ ಇರುತ್ತದೆ.
ಇತ್ತೀಚಿಗೆ ನಾನು ಮುಸ್ಲಿಮ್ ಬಾಂಧವ್ಯ ವೇದಿಕೆಯ ಸಮಾರಂಭದಲ್ಲಿ ಏಕದೇವೋಪಾಸಕ ಧರ್ಮಗಳಾದ ಇಸ್ಲಾಮ್ ಮತ್ತು ಲಿಂಗಾಯತ ಧರ್ಮಗಳ ನಡುವಿನ ಸಾಮ್ಯತೆಯ ಕುರಿತು ಆಡಿದ ಮಾತುಗಳ ವಿಡಿಯೋ ವಿಪರೀತ ವೈರಲ್ ಆಗಿದ್ದು ಅದು ಮಡಿವಂತ ಲಿಂಗಾಯತರು ಹಾಗೂ “ವೀರಶವ”ಗಳನ್ನು ಕಂಗಾಲಾಗಿಸಿದೆ. ವಚನ ಧರ್ಮದ ಮೂಲ ಆಶಯಗಳನ್ನು ಸಂಚುಚಿತ ವೈದಿಕ/ಆಗಮಿಕ ವೀರಶೈವ ಪ್ರಣೀತ ಆರಾಧ್ಯ ಬ್ರಾಹ್ಮಣರ ಚೌಕಟ್ಟಿಗೆ ಸಿಲುಕಿಸುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ. ಆ ಪ್ರಯತ್ನಗಳಿಂದ ಲಿಂಗಾಯತ ಸಿದ್ಧಾಂತಕ್ಕಾಗಲಿ ಅಥವಾ ಸಂವಿಧಾನ ಮಾನ್ಯತೆಯ ಚಳವಳಿಗಾಗಲಿ ಯಾವುದೇ ಹಿನ್ನೆಡೆಯಾಗದು. ಲಿಂಗಾಯತ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಜಂಗಮ ವಿರಕ್ತರನ್ನು ಯಾವತ್ತೂ ಟೀಕಿಸದೆ ಕೇವಲ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳನ್ನು ಮಾತ್ರ ಟೀಕಿಸುವ ಜಾತಿ ಮನಸ್ಥಿತಿಯ ಜಾಡ್ಯ ಸಾಮಾನ್ಯರಿಗೂ ಅರ್ಥವಾಗುವಂತದ್ದೆ.
ಏಳು-ಎಂಟನೇ ಶತಮಾನದಲ್ಲಿ ಕ್ಷತ್ರಿಯರಿಗೂ ಹಾಗೂ ಬ್ರಾಹ್ಮಣರಿಗೂ ಮಂದಿರಗಳಲ್ಲಿನ ಸಂಪತ್ತಿನ ಕುರಿತು ತಕರಾರು ಹುಟ್ಟಿತ್ತು. ಅದರ ಪರಿಣಾಮವಾಗಿ ಅರಬ್ ಹಾಗೂ ಅಫ್ಘಾನ್ ಜೊತೆಗೆ ವ್ಯಾಪಾರ ಸಂಬಂಧ ಹೊಂದಿದ್ದ ಬನಿಯಾಗಳೊಂದಿಗೆ ಸೇರಿ ಮುಸ್ಲಿಮ್ ಲೂಟಿಕೋರರನ್ನು ಕರೆಸಿ ಭಾರತದ ಮಂದಿರಗಳ ಮೇಲೆ ದಾಳಿ ಮಾಡಿಸಿ ಇಲ್ಲಿನ ಸಂಪತ್ತನ್ನು ಲೂಟಿ ಮಾಡಿಸಿ ಅದರಲ್ಲಿ ಪಾಲು ಪಡೆಯುವಲ್ಲಿ ಪುರೋಹಿತರ ಪ್ರಮುಖ ಪಾತ್ರವಿತ್ತು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಬಸವಪೂರ್ವದ ಈ ಬೆಳವಣಿಗೆಗಳನ್ನು ಬಸವಣ್ಣನವರು ಸೂಕ್ಷ್ಮವಾಗಿ ಗಮನಿಸಿರುವ ಸಾಧ್ಯತೆಗಳಿವೆ. ಸುಚೇತನ್ ಸ್ವರೂಪ್ ಅವರು ತಮ್ಮ ʼಆ ಪೂರ್ವ, ಈ ಪಶ್ಚಿಮʼ ಕೃತಿಯ 23ನೇ ಅಧ್ಯಾಯ ʼಭಾರತದ ದೇಹದಲ್ಲಿ ಯುರೋಪಿಯನ್ ಮನಸ್ಸುʼ ಎಂಬ ಕೃತಿಯಲ್ಲಿ “ಜಗತ್ತಿನಲ್ಲಿ ಹೆಚ್ಚುತ್ತಿರುವ ಇಸ್ಲಾಮ್ ಪ್ರಾಬಲ್ಯವನ್ನು ಎದುರಿಸಲು ಬಸವಣ್ಣನವರು ನೆಲಮೂಲದ ಬಹುಜನರನ್ನು ಸಂಘಟಿಸಿದರು” ಎನ್ನುವ ಅರ್ಥದ ಲೇಖನ ಬರೆದಿದ್ದಾರೆ. ಈ ಗ್ರಂಥವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ 2006ರಲ್ಲಿ ಪ್ರಕಟಿಸಿದೆ.
ಈ ಲೇಖನವು ಮುಸ್ಲಿಮ್ ಲೂಟಿಕೋರರು ಹಾಗೂ ಇಲ್ಲಿನ ಪುರೋಹಿತರ ನಡುವಿನ ನಂಟನ್ನು ಬಸವಣ್ಣನವರು ಬಲ್ಲವರಾಗಿದ್ದರು ಎನ್ನುವುದಕ್ಕೆ ಪರೋಕ್ಷವಾಗಿ ಸಾಕ್ಷಿಯನ್ನು ಒದಗಿಸುತ್ತದೆ. ಆದರೆ ಬಸವಣ್ಣನವರ ವಚನವೊಂದನ್ನು ಈ ವೀರಶೈವ ಪಂಡಿತ ಆದಿಯಾಗಿ ಎಲ್ಲಾ ಬಲಪಂಥೀಯ ವೈದಿಕ ಲೇಖಕರು ಅಪವ್ಯಾಖ್ಯಾನಿಸುತ್ತ ಬಸವಣ್ಣನವರು ಮುಸ್ಲಿಮರ ವಿರುದ್ಧವಾಗಿದ್ದರು ಎಂದು ವಾದಿಸುತ್ತಿರುವುದು ಅತ್ಯಂತ ಹೇಯ ಹಾಗೂ ಪೂರ್ವಾಗ್ರಹ ಪೀಡಿದ ಇಸ್ಲಾಮೊಫೋಬಿಯಾ ಪರಿಣಾಮದಿಂದ.
“ಗಾಂಧಾರ ಮಾಂಧಾರ… ಎಂದು ಆರಂಭವಾಗುವ ಬಸವಣ್ಣನವರ ಈ ವಚನವು ಇಷ್ಟಲಿಂಗ ಅನುಸಂಧಾನ ಮಾಡಲು ಯಾವ ಸಮಯ ಸೂಕ್ತ ಎನ್ನುವ ಸಂದೇಶವನ್ನು ಸಾರುತ್ತದೆ. “ಗೋವನ್ನು ಕೊಲ್ಲುವ ಪಾಪಿಯ ಧ್ವನಿ ಕೇಳುವ ಮುನ್ನ ಪೂಜಿಸು ಪೂಜಿಸು ಲಿಂಗವ…” ಎನ್ನುವ ವಚನದ ಸಾಲನ್ನು ವೀರಶೈವ ಹಾಗೂ ವೈದಿಕ ಪಂಡಿತರು ಅಪವ್ಯಾಖ್ಯಾನಿಸುತ್ತಾ ಇದು ಮುಸಲ್ಮಾನರ ವಿರುದ್ಧ ಬಸವಣ್ಣನವರ ಬರೆದ ವಚನವೆಂದು ಸುಳ್ಳು ಹೇಳುತ್ತಿರುವುದರ ಹಿಂದೆ ಅಧ್ಯಯನದ ಕೊರತೆಯ ಜೊತೆಗೆ ಲಿಂಗಾಯತ ಯುವ ಮನಸ್ಸುಗಳನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟುವ ಕುಠಿಲ ರಾಜಕೀಯ ಹುನ್ನಾರ ಎದ್ದು ಕಾಣಿಸುತ್ತದೆ. ಆರ್ಯ ವೈದಿಕರು ವೇದ ಕಾಲದಿಂದ ಮೊದಲ್ಗೊಂಡು ಬುದ್ದಪೂರ್ವದ ಕಾಲದವರೆಗೆ ತಮ್ಮ ಧಾರ್ಮಿಕ ಕಾರ್ಯಗಳಲ್ಲಿ ಹಸು ಹಾಗೂ ಎತ್ತುಗಳನ್ನು ಯಜ್ಞ ಯಾಗಗಳಲ್ಲಿ ಬಲಿ ಕೊಟ್ಟು ಅವುಗಳ ಮಾಂಸವನ್ನು ಭಕ್ಷಿಸುತ್ತಿದ್ದ ಸಂಗತಿಯು ವೈದಿಕ ಸಾಹಿತ್ಯಗಳಾದ ವೇದ ಹಾಗೂ ಮನುಸ್ಮೃತಿಗಳಲ್ಲಿ ಧಾರಾಳವಾಗಿ ಕಾಣಸಿಗುತ್ತದೆ. ಆ ವಿಷಯವು ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲೂ ಪ್ರಸ್ತಾಪವಾಗಿದೆ. ಹನ್ನೆರಡನೇ ಶತಮಾನಕ್ಕೆ ಮುಂಚೆ ಮುಸ್ಲಿಮ್ ಲೂಟಿಕೋರರು ಪುರೋಹಿತರ ಬೆಂಬಲದೊಂದಿಗೆ ಉತ್ತರ ಭಾರತಕ್ಕೆ ಬಂದು ಹೋಗಿದ್ದರು. ಆಗಿನ್ನೂ ಭಾರತದಲ್ಲಿ ಮುಸ್ಲಿನ್ ಸೆಟ್ಲರ್ಸ್ ಗಳು ಬಂದಿರಲಿಲ್ಲ. ದಕ್ಷಿಣ ಭಾರತಕ್ಕಂತೂ ಮುಸ್ಲಿಮರು ಬಂದಿದ್ದು ಬಸವೋತ್ತರ ಯುಗದಲ್ಲಿ. ಅಂದರೆ, ಇದರಿಂದ ಬಸವಯುಗದಲ್ಲಿ ಗೋವುಗಳನ್ನು ಧಾರ್ಮಿಕ ಕಾರ್ಯಗಳಲ್ಲಿ ಯಾವ ಪಾಪಿಗಳು ಕೊಂದು ಅವುಗಳ ಮಾಂಸವನ್ನು ಭಕ್ಷಿಸುತ್ತಿದ್ದರು ಎನ್ನುವುದು ಸ್ಪಷ್ಟವಾಗಿ ಗುರುತಿಸಬಹುದು.
“ಹೊಲೆಯರ ಹೊಟ್ಟೆಯಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂದುದ್ದಕ್ಕೆ ಇದೇ ದೃಷ್ಟ…” ಎಂದು ಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ ಬಹಳ ತೀಕ್ಷ್ಣವಾಗಿ ಹೇಳಿದ್ದಾರೆ. ಬಹಳ ಸ್ಪಷ್ಟವಾಗಿ ಬಸವಪೂರ್ವ ಹಾಗೂ ಬಸವಯುಗದಲ್ಲಿ ಗೋಮಾಂಸ ಭಕ್ಷಿಸುವ ಪಾಪಿಗಳು ಯಾರು ಎನ್ನುವುದಕ್ಕೆ ಬಸವಣ್ಣನವರ ವಚನಗಳೆ ಸಾಕ್ಷಿಯಾಗಿವೆ. ಇದಕ್ಕೆ ಪೂರಕವೆನ್ನುವಂತೆ ಉತ್ತರ ಕರ್ನಾಟಕದಲ್ಲಿ ಇಂದಿಗೂ ಬಹುತೇಕ ವೈದಿಕರು ತಮ್ಮ ಮನೆಯಲ್ಲಿ ಮಂಗಳ ಕಾರ್ಯಗಳು ಮಾಡುವ ಸಮಯದಲ್ಲಿ ಗೋದಿ ಹಿಟ್ಟಿನ ಕಣಕದಿಂದ ಗೋವನ್ನು ಮಾಡಿ, ಅದಕ್ಕೆ ಕುಂಕುಮದ ನೀರಿನಿಂದ ಅಭಿಷೇಕ ಮಾಡಿˌ ಬಲಿಕೊಟ್ಟು ತಮ್ಮ ಹಬ್ಬದ ಅಡಿಗೆಯಲ್ಲಿ ಸಾಂಕೇತಿಕವಾಗಿ ಆ ಕಣಕದ ಒಂದು ಚೂರನ್ನು ಮಿಶ್ರ ಮಾಡುತ್ತಾರೆ. ಇದು ಸಾಂಕೇತಿಕವಾಗಿ ವೈದಿಕರು ಇಂದಿಗೂ ಗೋವನ್ನು ವಧಿಸಿ ಅದರ ಮಾಂಸವನ್ನು ಭಕ್ಷಿಸುವ ಪದ್ದತಿಯನ್ನು ಸಾರಿ ಹೇಳುತ್ತದೆ. ಬುದ್ದಪೂರ್ವದಲ್ಲಿ ವಲಸಿಗ ಆರ್ಯರ ಋಷಿ ಸಂಸ್ಕೃತಿಯು ನೆಲಮೂಲದ ಶಿವದ್ರಾವಿಡರ ಕೃಷಿ ಸಂಸ್ಕೃತಿಯ ಮೇಲೆ ಆಮಾನುಷವಾದ ದಾಳಿಯನ್ನು ಎಸಗಿದೆ. ನಮ್ಮ ಕೃಷಿ ಸಂಸ್ಕೃತಿಯ ಮೂಲ ಜೈವಿಕ ಪರಿಕರಗಳಾದ ಹಸು ಹಾಗು ಎತ್ತುಗಳನ್ನು ಧರ್ಮದ ಹೆಸರಿನಲ್ಲಿ ಕೊಂದು ತಿನ್ನುವ ಯಜ್ಞ-ಯಾಗದ ಹಿಂಸಾ ಪದ್ದತಿಯನ್ನು ವಿರೋಧಿಸಿಯೆ ಅಹಿಂಸಾ ಧರ್ಮಗಳಾದ ಜೈನ ಹಾಗೂ ಬೌದ್ದ ಧರ್ಮಗಳು ಗಂಗಾ ನದಿಯ ದಡದಲ್ಲಿ ಉದಯಿಸಿದವು. ಅದರಿಂದ ಹೆದರಿದ ಆರ್ಯ ವೈದಿಕರು ತಮ್ಮ ಮುಖ್ಯ ಆಹಾರವಾಗಿದ್ದ ಗೋವನ್ನು ದೈವತ್ವಕ್ಕೇರಿಸಿ ಅದನ್ನು ಗೋಮಾತಾ ಮಾಡಿ ಸಸ್ಯಾಹಾರಿಗಳಾದರು.
“ಗೋವನ್ನು ಕೊಲ್ಲುವ ಪಾಪಿಗಳ ಧ್ವನಿ ಕೇಳುವ ಮುನ್ನ ಪೂಜಿಸು, ಪೂಜಿಸು ಲಿಂಗವ…”ಎಂದು ಬಸವಣ್ಣನವರು ಹೇಳಿದ್ದು ಯಾವ ಪಾಪಿಗಳ ಕುರಿತು ಎನ್ನುವ ಸ್ಪಷ್ಟತೆಯು ಲಿಂಗಾಯತರು ಹೊಂದಬೇಕಿದೆ. ಜಾತಿ, ಧರ್ಮಗಳ ನಡುವೆ ಬೇಲಿಯನ್ನು ಹಾಕುವ ಗೋಡೆಯನ್ನು ಕಟ್ಟುವ ಸಮಾಜಘಾತುಕ ಶಕ್ತಿಗಳ ಕುಟಿಲ ಹುನ್ನಾರಗಳನ್ನು ಬಸವಪ್ರಣೀತ ಲಿಂಗಾಯತರು ಅರ್ಥ ಮಾಡಿಕೊಂಡು ಸಮಾಜದಲ್ಲಿ ಸೌಹಾರ್ದತೆಯಿಂದ ಬಾಳಬೇಕಿದೆ. ಇದುವೆ ಬಸವ ತತ್ವ, ಶರಣ ಮಾರ್ಗ ಹಾಗೂ ಲಿಂಗಾಯತ ಮಹಾಮಾರ್ಗದ ಮೂಲ ಆಶಯವಾಗಿದೆ. ಇದನ್ನು ವಿಕೃತ ಮನಸ್ಸಿನ “ವೀರಶವ”ಗಳಾಗಲಿ, “ವೈದಿಕ” ಮನಸ್ಸುಗಳಾಗಲಿ ಅಲ್ಲಾಡಿಸಲು ಆಗಲಾರದು. ಲಿಂಗಾಯತ ತತ್ವದ ಉದಾರತೆಯಿಂದಲೆ ಅನೇಕ ತಳ ಸಮುದಾಯಗಳು ಲಿಂಗಾಯತ ಮಹಾಮಾರ್ಗದಲ್ಲಿ ವಿಲೀನಗೊಂಡಿವೆ. ಅದರೊಟ್ಟಿಗೆ ಈ ಮಹಾಮಾರ್ಗದಲ್ಲಿ ಆಂಧ್ರ ಮೂಲಕ ವೀರಶೈವ ಆರಾಧ್ಯ ಬ್ರಾಹ್ಮಣರೂ ಬಂದು ಸೇರಿದ್ದಾರೆ. ಲಿಂಗಾಯತವು ಎಲ್ಲರನ್ನೂ ಇಂಬಿಟ್ಟುಕೊಳ್ಳುವ ಉದಾರ ಧರ್ಮವಾಗಿದೆ. ಲಿಂಗಾಯತರ ಉದಾರತೆಯತೆಯನ್ನು, ಅವರ ದಾಸೋಹ ಪ್ರವೃತ್ತಿಯನ್ನು ವೀರಶೈವರು ದುರುಪಯೋಗಪಡಿಸಿಕೊಂಡು ಲಿಂಗಾಯತರ ವಿರುದ್ಧವೇ ವಿಷಕಾರುತ್ತಿರುವುದು ವಿಷಾದದ ಸಂಗತಿಯಾಗಿದೆ.
ಸೌಜನ್ಯ ಪರ ನಿಂತಿದ್ದಕ್ಕಾಗಿ ಈದಿನ ಯೂಟ್ಯೂಬ್ ಚಾನೆಲ್ ಬ್ಲಾಕ್ ಮಾಡಲಾಗಿದೆ. ಪರ್ಯಾಯವಾಗಿ eedina tv ಚಾನೆಲ್ ಕಾರ್ಯನಿರ್ವಹಿಸುತ್ತಿದೆ. ಸಬ್‌ಸ್ಕ್ರೈಬ್ ಮಾಡಿ👇🏽
https://www.youtube.com/@EedinaTv

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ
ನೂರಕ್ಕೂ ನೂರು ಸತ್ಯ ಲೇಖನ ಆಗಿದೆ, ಧನ್ಯವಾದ
ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ