ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ‘ಅಮೃತಧಾರೆ’ ಧಾರಾವಾಹಿ ನಟಿ ಶ್ರುತಿ ಅವರು ಚಾಕು ಇರಿತಕ್ಕೆ ಒಳಗಾಗಿದ್ದಾರೆ. ನಟಿ ಶ್ರುತಿ ಅವರ ಪತಿಯೇ ಅವರಿಗೆ ಚಾಕು ಇರಿದಿದ್ದಾರೆ ಎನ್ನಲಾಗುತ್ತಿದೆ. ಪತ್ನಿಯ ಬಗ್ಗೆ ಅನುಮಾನಿಸಿದ ಪತಿ ಅಮರೇಶ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ಇದೀಗ ಶ್ರುತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶ್ರುತಿ ಅವರ ಪತಿ ಅಮರೇಶ್ ಅವರನ್ನು ಬಂಧಿಸಿದ್ದಾರೆ.
‘ಅಮೃತಧಾರೆ’ ಸೇರಿದಂತೆ ಕನ್ನಡದ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿ ಶ್ರುತಿ ನಟಿಸಿದ್ದಾರೆ. ಶ್ರುತಿ ಮತ್ತು ಅಮರೇಶ್ ನಡುವೆ ಮೊದಲಿನಿಂದಲೂ ಮನಸ್ತಾಪಗಳಿದ್ದವು. ಶ್ರುತಿ ಹಾಗೂ ಅಮರೇಶ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇಬ್ಬರು ಮಕ್ಕಳು ಸಹ ಈ ದಂಪತಿಗೆ ಇದ್ದಾರೆ. ಹನುಮಂತ ನಗರದಲ್ಲಿ ದಂಪತಿ ವಾಸವಿದ್ದರು. ಆದರೆ ಪತ್ನಿಯ ಬಗ್ಗೆ ಅಮರೇಶ್ಗೆ ಅನುಮಾನಗಳಿದ್ದು, ಇದೇ ಕಾರಣಕ್ಕೆ ಪದೇ-ಪದೇ ಜಗಳಗಳು ನಡೆಯುತ್ತಿದ್ದವು.
ಇದನ್ನು ಓದಿದ್ದೀರಾ? ತಮಿಳು ನಾಡು ಚುನಾವಣೆ: ಟಿವಿಕೆ ಪಕ್ಷದಿಂದ ವಿಜಯ್ ಸಿಎಂ ಅಭ್ಯರ್ಥಿ
ಇದೇ ಏಪ್ರಿಲ್ ತಿಂಗಳಲ್ಲಿ ಶ್ರುತಿ, ಅಮರೇಶ್ ಇಂದ ದೂರಾಗಿ ತಮ್ಮ ಅಣ್ಣನ ಮನೆಗೆ ಬಂದಿದ್ದರು. ಅಲ್ಲಿಯೇ ವಾಸವಿದ್ದರು. ಆದರೆ ಅದಾದ ಬಳಿಕವೂ ಸಹ ಮನೆಯ ಭೋಗ್ಯದ ಹಣದ ಕುರಿತಾಗಿ ಜಗಳ ನಡೆದಿತ್ತು. ಇದರ ಕುರಿತಾಗಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಶ್ರುತಿ ದೂರು ನೀಡಿದ್ದರು. ಬಳಿಕ ರಾಜಿ-ಸಂಧಾನ ನಡೆದು ನಿನ್ನೆಯಷ್ಟೆ (ಗುರುವಾರ) ಇಬ್ಬರೂ ಮತ್ತೆ ಒಟ್ಟಿಗೆ ನೆಲೆಸಲು ಒಪ್ಪಿದ್ದರು. ಮುನೇಶ್ವರ ಲೇಔಟ್ನ ಮನೆಯಲ್ಲಿ ಇಬ್ಬರೂ ವಾಸವಿದ್ದರು. ಆದರೆ ರಾಜಿ-ಸಂಧಾನ ನಡೆದ ಮಾರನೇಯ ದಿನವೇ ಅಂದರೆ ಇಂದು ಅಮರೇಶ್, ಶ್ರುತಿಗೆ ಚಾಕು ಇರಿದಿದ್ದಾನೆ.
ಮೊದಲು ಶ್ರುತಿ ಕಣ್ಣಿಗೆ ಪೆಪ್ಪರ್ ಸ್ಪ್ರೇ ಹೊಡೆದ ಅಮರೇಶ್ ಆ ನಂತರ ಚಾಕುವಿನಿಂದ ಶ್ರುತಿಯ ಹೊಟ್ಟೆ, ಪಕ್ಕೆಲುಬು, ತೊಡೆ ಹಾಗೂ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಶ್ರುತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಮರೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.