ಗದಗ ಜಿಲ್ಲೆಯ ಬಿದರಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಸುನಿತಾ ಅವರು ಖೊಟ್ಟಿ ಜಾತಿ (ಎಸ್‌ಸಿ) ಪ್ರಮಾಣ ಪತ್ರ ಪಡೆದು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದನ್ನು ತಡೆಗಟ್ಟಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ಆಗ್ರಹಿಸಿದೆ. ಗದಗ ಅಪರ ಜಿಲ್ಲಾಧಿಕಾರಿಗೆ ದಸಂಸ ಕಾರ್ಯಕರ್ತರು ಖಂಡನಾ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿಎಸ್ಎಸ್ ಮುಖಂಡ ಎಸ್.ಎನ್ ಬಳ್ಳಾರಿ, “2024ನೇ ಸಾಲಿನ ಮುಂದಿನ ಅವಧಿಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಆದರೆ, ಆ ಗ್ರಾಮ ಪಂಚಾಯತಿಗೆ ಒಳಪಡುವ ಬಿದರಹಳ್ಳಿ ಕ್ಷೇತ್ರದಿಂದ (ಸಾಮಾನ್ಯ ಮೀಸಲು) ಗ್ರಾಮ ಪಂಚಾಯತಿ ಸದಸ್ಯಳಾಗಿ ಸುನಿತಾ ಆಯ್ಕೆಯಾಗಿದ್ದಾರೆ. ಅಲ್ಲದೆ, ಈ ಹಿಂದೆ ಸಾಮಾನ್ಯ ವರ್ಗಕ್ಕೆ ನೀಡಲಾಗಿದ್ದ ಅಧ್ಯಕ್ಷ ಹುದ್ದೆಗೆ ಅವರು ಆಯ್ಕೆಯಾಗಿ, ಅಧಿಕಾರ ಚಲಾಯಿಸಿದ್ದಾರೆ. ಈಗ, ಮತ್ತೆ ನಡೆಯುತ್ತಿರುವ ಅಧ್ಯಕ್ಷರ ಚುನಾವಣೆಗೆ ಎಸ್‌ಸಿ ಮೀಸಲಾತಿಯಡಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಅವರು ಹಿಂದು ಮಡ್ಡಿ ಜಾತಿಗೆ (ಪ್ರವರ್ಗ-1) ಸೇರಿದ್ದು, ಹಿಂದು ಭೋವಿ ಎಂದು ಹೇಳಿಕೊಂಡು ಕೊಟ್ಟಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು ಸಂವಿಧಾನ ವಿರೋಧಿಯಾಗಿದೆ” ಎಂದು ಕಿಡಿಕಾರಿದ್ದಾರೆ.
ಡಿಎಸ್ಎಸ್ ತಾಲೂಕು ಸಂಚಾಲಕ ದುರಗಪ್ಪ ಹರಿಜನ ಮಾತನಾಡಿ, “ಈಗಾಗಲೇ ಬಿದರಹಳ್ಳಿ ಗ್ರಾಮದಲ್ಲಿ ಈ ಮಡ್ಡಿ ಜಾತಿಗೆ ಸೇರಿದ ಜನಾಂಗವು ಪ್ರವರ್ಗ-1ರಲ್ಲಿ ಸೇರುವುದಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಹಾಗೂ ಜಿಲ್ಲಾ ಜಾತಿ ಪರಿತೀಲನಾ ಸಮಿತಿ ರವರು ದಿನಾಂಕ: 30-08-2015 ರಂದು ಸೂಚಿಸಿದ್ದಾರೆ. ಆದರೆ ಬಿದರಳ್ಳಿ ಗ್ರಾಮದ ಸದರಿ ಶ್ರೀಮತಿ ಸುನಿತಾ ನಾಗಪ್ಪ ಹಾರೋಗೇರಿ ಅವರ ಸಂಬಂಧಿಕರಾದ ದೇವೆಂದ್ರಪ್ಪ ಸತ್ಯಪ್ಪ ತುರಗೋಡಿ ಹಾಗೂ ಈ ಹಿಂದೆ ಅದೇ ಜಾತಿಗೆ ಸೇರಿದ ಶ್ರೀಮತಿ, ರೇಣುಕಾ ಸತ್ಯಪ್ಪ ಕುರಗೋಡಿ ಎಂಬವರು ಪೋಲಿಸ್ ಹುದ್ದೆಯಲ್ಲಿ ನ ಜಾರಿ ಕೋಟಾದಿಂದ ನೇಮಕ ಗೊಂಡಿದ್ದನ್ನು ಪ್ರಶ್ನಿಸಿ ಜಾತಿ ಪರಿಶೀಲನೆಗೆ ಒಳಪಡಿಸಿದಾಗ ಖೊಟ್ಟಿ ಜಾತಿ ಪ್ರಮಾಣ ಪತ್ರ ರದ್ದಾಗಿದೆ” ಎಂದರು.
“ಖೊಟ್ಟಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಎಸ್‌ಸಿ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ಸುನಿತಾ ಸ್ಪರ್ಧಿಸಿರುವುದನ್ನು ತಡೆಗಟ್ಟಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ದುರಗಪ್ಪ ಹರಿಜನ ಒತ್ತಾಯಿಸಿದರು.