ಬರೋಬ್ಬರಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದಲ್ಲಿ ಗೋಡೆಯೊಂದು ಒಂದೇ ಮಳೆಗೆ ಕುಸಿದು ಬಿದ್ದಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.
ರೇವಾದಲ್ಲಿ ಇತ್ತೀಚೆಗಷ್ಟೇ ವಿಮಾನ ನಿಲ್ದಾಣ ನಿರ್ಮಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಆದರೆ, ಈಗ ಸುರಿಯುತ್ತಿರುವ ಮುಂಗಾರು ಮಳೆಗೆ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಿಸಲಾಗಿದ್ದ ತಡೆಗೋಡೆ ಕುಸಿದು ಬಿದ್ದಿದೆ. ಇದು, ಅಲ್ಲಿನ ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸ್ಥಳೀಯರ ಪ್ರಕಾರ, ಕೆಲ ದಿನಗಳ ಹಿಂದೆ ಗೋಡೆಯ ತಳಭಾಗದಲ್ಲಿ ಬಿರುಕು ಬಿಟ್ಟಿತ್ತು. ಶನಿವಾರ ರಾತ್ರಿ ಸುರಿದ ಮಳೆಯಿಂದಾಗಿ, ಗೋಡೆ ಕುಸಿದಿದೆ. ಈ ವಿಮಾನ ನಿಲ್ದಾಣದಲ್ಲಿ ಗೋಡೆ ಕುಸಿದಿರುವುದು ಇದೇ ಮೊದಲೇನೂ ಅಲ್ಲ. ಇಲ್ಲಿ ವಿಮಾನಗಳು ತಮ್ಮ ಸಂಚಾರ ಆರಂಭಿಸುವುದಕ್ಕೂ ಮುನ್ನವೂ ಇಂತಹ ಘಟನೆಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇವಾ ಪ್ರದೇಶದ ಐದು ಗ್ರಾಮಗಳ 323 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಕೇವಲ 18 ತಿಂಗಳ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ತರಾತುರಿ ಮತ್ತು ಕಳಪೆ ಗುಣಮಟ್ಟದಲ್ಲಿ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರೇವಾ ವಿಮಾನ ನಿಲ್ದಾಣದಿಂದ ಖಜುರಾಹೊ, ಜಬಲ್ಪುರ ಹಾಗೂ ಭೋಪಾಲ್‍ಗೆ ತೆರಳುವ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ವರದಿಯಾಗಿದೆ.