ಕಚ್ಚಾ ತೈಲ ಸಾಗಿಸುತ್ತಿದ್ದ ಸರಕು ರೈಲೊಂದು ಭಾನುವಾರ ಬೆಂಕಿ ಅವಘಡಕ್ಕೆ ತುತ್ತಾಗಿದ್ದು, ಬೆಂಕಿ ಜ್ವಾಲಾಮುಖಿಯಂತೆ ಚಿಮ್ಮಿರುವ ಘಟನೆ ತಮಿಳುನಾಡಿನ ತಿರುವಲ್ಲೂರು ಬಳಿ ನಡೆದಿದೆ. ಪರಿಣಾಮ, ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿ ರೈಲು ಸೇವೆಗಳು ಸ್ಥಗಿತಗೊಂಡಿವೆ. ಸಾವಿರಾರು ರೈಲು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.
ಬೆಂಕಿ ಅವಘಡದಿಂದಾಗಿ ಬೆಂಕಿಯ ಜ್ವಾಲೆಗಳು ಎತ್ತರಕ್ಕೆ ಚಿಮ್ಮಿದ್ದು, ದಟ್ಟ ಹೊಗೆ ಆವರಿಸಿದೆ. ರೈಲ್ವೇ ಹಳಿಗಳ ಸಮೀಪ ವಾಸಿಸುವ ನಿವಾಸಿಗಳು ಭಯಭೀತರಾಗಿದ್ದಾರೆ. ಅವರನ್ನು ತ್ವರಿತವಾಗಿ ಸ್ಥಳಾಂತರಿಸಲಾಗಿದೆ.
ಭಾನುವಾರ ಮುಂಜಾನೆ ಎನ್ನೋರ್‌ನಿಂದ ಜೋಲಾರ್‌ಪೆಟ್ಟೈಗೆ ಕಚ್ಚಾ ತೈಲ ಸಾಗಿಸುತ್ತಿದ್ದ 45 ಬೋಗಿಗಳನ್ನು ಹೊಂದಿರುವ ಸರಕು ರೈಲು ತಿರುವಲ್ಲೂರು ಬಳಿ ಸಂಚರಿಸುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ರೈಲಿನ ಎರಡು ವ್ಯಾಗನ್‌ಗಳು ಹಳಿತಪ್ಪಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಆದಾಗ್ಯೂ, ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ. ಬೆಂಕಿ ಕಾಣಿಸಿಕೊಂಡ ಐದು ಬೋಗಿಗಳನ್ನು ರೈಲಿನಿಂದ ಬೇರ್ಪಡಿಸಲಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ನಾಲ್ಕು ಬೋಗಿಗಳು ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟುಹೋಗಿವೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಭಾರೀ ಬೆಂಕಿಯಿಂದಾಗಿ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಳಿಗಳ ಬಳಿ ವಾಸಿಸುವ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Breaking!🚨
— 🐧 (@DrJain21) July 13, 2025
Massive Fire broke out after a Diesel tanker Train derailed near Tiruvallur Railway station in Tamil Nadu
Condition of Infrastructure in India has gone beyond repair, but the Govt is only focused on PR 😵💫 #TrainAccident pic.twitter.com/OXJK1AeUeI
ಘಟನೆಯಿಂದಾಗಿ, ಚೆನ್ನೈ-ಅರಕ್ಕೋಣಂ ವಿಭಾಗದಲ್ಲಿನ ಎಲ್ಲ ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಚೆನ್ನೈಗೆ ಹೊರಟಿದ್ದ ಮಂಗಳೂರು ಮೈಲ್, ನೀಲಗಿರಿ ಎಕ್ಸ್‌ಪ್ರೆಸ್, ಮೈಸೂರು ಎಕ್ಸ್‌ಪ್ರೆಸ್, ಕೊಯಮತ್ತೂರು ಇಂಟರ್‌ಸಿಟಿ, ತಿರುವನಂತಪುರಂ ಮೈಲ್ ಮತ್ತು ಜೋಲಾರ್‌ಪೆಟ್ಟೈ ಎಕ್ಸ್‌ಪ್ರೆಸ್ ಸೇರಿದಂತೆ ಸುಮಾರು ಎಂಟು ಎಕ್ಸ್‌ಪ್ರೆಸ್ ರೈಲುಗಳನ್ನು ಅರಕ್ಕೋಣಂ ಮತ್ತು ಕಟ್ಪಾಡಿ ನಡುವೆ ನಿಲ್ಲಿಸಲಾಗಿದೆ.
ಅದೇ ರೀತಿ, ಚೆನ್ನೈ-ಮೈಸೂರು ಶತಾಬ್ದಿ, ಚೆನ್ನೈ-ಕೊಯಮತ್ತೂರು ಕೋವೈ ಎಕ್ಸ್‌ಪ್ರೆಸ್, ಚೆನ್ನೈ-ತಿರುಪತಿ ಸಪ್ತಗಿರಿ ಎಕ್ಸ್‌ಪ್ರೆಸ್ ಹಾಗೂ ಚೆನ್ನೈ-ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಸೇರಿದಂತೆ ಚೆನ್ನೈ ಸೆಂಟ್ರಲ್‌ನಿಂದ ಹೊರಡಬೇಕಿದ್ದ ಎಂಟು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ನಾಲ್ಕು ರೈಲುಗಳು ಗುಡೂರು ಮತ್ತು ರೇಣಿಗುಂಟ ಮಾರ್ಗದ ಮುಲಕ ಸಂಚರಿಸುತ್ತಿವೆ.
ಸ್ಥಳ ಪರಿಶೀಲನೆ ನಡೆಸಿದ ತಿರುವಳ್ಳೂರು ಜಿಲ್ಲಾಧಿಕಾರಿ ಎಂ. ಪ್ರತಾಪ್, “ಹಳಿ ಪಕ್ಕದಲ್ಲಿರುವ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಬೆಂಕಿ ನಿಯಂತ್ರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪರಿಹಾರ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಅರಕ್ಕೋಣಂ ಘಟಕದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.