ಕಾರ್ಮಿಕರ ಜೀವನ ನಿರ್ವಹಣೆ ವೆಚ್ಚ ಹೆಚ್ಚಾಗಿದ್ದು ಹಳೆಯ ವೇತನ ಪದ್ಧತಿ ಮುಂದುವರಿಸುವುದು ಸೂಕ್ತವಲ್ಲ. ಆದುದರಿಂದ ರಾಜ್ಯ ಸರಕಾರ ಕೂಡಲೇ ನೂತನವಾಗಿ ಮಂಡನೆಯಾಗಿರುವ ಕನಿಷ್ಠ ವೇತನವನ್ನು ಜಾರಿಗೊಳಿಸಬೇಕು ಎಂದು ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸುಧಾಕರ್ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಧ್ಯಕ್ಷರುಗಳ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರಿ ಹೊರಗುತ್ತಿಗೆ ನೌಕರರು ಸೇವಾ ಭದ್ರತೆ ಇಲ್ಲದೆ ದುಡಿಯುತ್ತಿರುವುದರಿಂದ ದಿನನಿತ್ಯದ ಜೀವನ ನಿರ್ವಹಣೆ ಕಷ್ಟವಾಗಿದೆ. ಗುತ್ತಿಗೆ ಕಾರ್ಮಿಕರು ಖಾಯಂ ಸಿಬ್ಬಂದಿಯಂತೆಯೇ ಕೆಲಸ ಮಾಡುತ್ತಿದ್ದರೂ, ಇವರು ಎಲ್ಲ ಸೌಲಭ್ಯಗಳಿಂದ ದೂರ ಉಳಿಯುವಂತಾಗಿದೆ ಎಂದರು.
ಕನಿಷ್ಠ ವೇತನ ಕಾಯ್ದೆ 1948 ಯಂತೆ, ರಾಜ್ಯವು ಐದು ವರ್ಷಗಳಿಗೊಮ್ಮೆ ನಿಯಮಿತ ಮಧ್ಯಂತರದಲ್ಲಿ ಕನಿಷ್ಠ ವೇತನವನ್ನು ಪರಿಷ್ಕರಿಸಬೇಕು. ಒಂದು ವೇಳೆ ಸರಕಾರ ಕನಿಷ್ಠ ವೇತನವನ್ನು ಪರಿಷ್ಕರಿಸಲು ವಿಫಲವಾದರೆ ಅದು ಬಲವಂತದ ಕಾರ್ಮಿಕ ಪದ್ಧತಿಯಾಗಿರುತ್ತದೆ. ಅಷ್ಟೇ ಅಲ್ಲದೇ, ಸಂವಿಧಾನದ 21 ಮತ್ತು 23ನೇ ವಿಧಿಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಕನಿಷ್ಠ ವೇತನವು ರಾಜಕೀಯ ಅನುಕೂಲತೆಯ ವಿಷಯವಲ್ಲ, ಅವು ಕಾರ್ಮಿಕರ ಮೂಲಭೂತ ಹಕ್ಕು ಎಂದು ಸುಧಾಕರ್ ಹೇಳಿದರು.
ನೂತನ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಮತ್ತು ಕೆಲಸದ ಭದ್ರತೆ, ವೇತನ ಭದ್ರತೆ ಹಾಗೂ ಸಾಮಾಜಿಕ ಭದ್ರತೆಯನ್ನು ರಕ್ಷಿಸಲು ಸೂಕ್ತ ತಿದ್ದುಪಡಿಗಳನ್ನು ತರಬೇಕು ಎಂದು ಒತ್ತಾಯಿಸಿದರು.
ಜೀತಪದ್ದತಿಯನ್ನು ಜೀವಂತಗೊಳಿಸಿರುವ ಗುತ್ತಿಗೆ, ಹೊರಗುತ್ತಿಗೆ, ಫಿಕ್ಸೆಡ್ ಟರ್ಮ್ ಎಂಪ್ಲಾಯ್‌ಮೆಂಟ್ ಪದ್ದತಿಗಳನ್ನು ರದ್ದುಗೊಳಿಸಬೇಕು ಹಾಗೂ ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕೂಡಲೇ ಪರಿಷ್ಕರಿಸಿ 42 ಸಾವಿರ ರೂ. ಕನಿಷ್ಠ ವೇತನ ಘೋಷಿಸಬೇಕು ಎಂದು ಸುಧಾಕರ್ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ರೆಡ್ಡಿ, ಕಾರ್ಯಧ್ಯಕ್ಷ ನಾಗಪ್ಪ, ಹೈಕೋರ್ಟ್ ವಕೀಲ ಮುನಿರಾಜ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಹಾಲಿಂಗಯ್ಯ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಅನಿತಾ ಸ್ವಾಮಿ, ರಾಜ್ಯ ಸಂಚಾಲಕ ಗಂಗಾಧರ್ ಸೇರಿದಂತೆ ಸರಕಾರಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷರುಗಳು ಭಾಗವಹಿಸಿದ್ದರು.
