ಎಲ್ಲ ನೈತಿಕ ಎಲ್ಲೆಗಳನ್ನು ಎದೆ ಸೆಟೆಸಿ ಉಲ್ಲಂಘಿಸುವ ಭಂಡತನದಲ್ಲಿ ಪೈಪೋಟಿ ನಡೆಯತೊಡಗಿದೆ. ದ್ವೇಷ, ಧೃವೀಕರಣ ಹಾಗೂ ಹಿಂಸೆಗಳನ್ನು ಪ್ರಚೋದಿಸುವ ಪಂದ್ಯಗಳಲ್ಲಿ ತಾವು ಭಾಗವಹಿಸುತ್ತಿದ್ದೇವೆ ಎಂಬ ಭಾವನೆಯನ್ನು ಬಿಜೆಪಿಯಲ್ಲಿ ಮತ್ತು ಈ ಪಕ್ಷದ ಕಟ್ಟರ್ ವಾದಿ ಬೆಂಬಲಿಗರಲ್ಲಿ ಉತ್ತೇಜಿಸಲಾಗುತ್ತಿದೆ. ಈ ನಾಚಿಕೆಗೇಡಿನಲ್ಲಿ ತೊಡಗಿದವರಿಗೆ ಇಂದಲ್ಲದಿದ್ದರೆ ನಾಳೆ ಪಕ್ಷ ಬಹುಮಾನಗಳನ್ನು ನೀಡಿ ಬೆನ್ನು ತಟ್ಟುತ್ತಿದೆ
ನಾಜಿ ಜರ್ಮನಿಯ ಇತಿಹಾಸ ಭಾರತದಲ್ಲಿ ಸುರುಳಿ ಬಿಚ್ಚತೊಡಗಿದೆ. ಅನುಮಾನವೇ ಇಲ್ಲ, ಇದು ಸುದೀರ್ಘ ಇರುಳು. ಆದರೆ ಯಾವ ಸರ್ಕಾರವೂ ದೇಶಕ್ಕಿಂತ ದೊಡ್ಡದಲ್ಲ. ನಾಯಕ ಅದೆಷ್ಟೇ ಪ್ರಚಂಡನಾದರೂ ಜನತೆಗಿಂತ ದೊಡ್ಡವನಲ್ಲ. ಮುಂಬಯಿ-ಜೈಪುರ್ ಎಕ್ಸ್ ಪ್ರೆಸ್ ರೈಲುಗಾಡಿಯಲ್ಲಿ ನಡೆದಿರುವ ಹತ್ಯೆಗಳು ದ್ವೇಷ-ಸೇಡಿನ ಪಾತಕಗಳು. ದ್ವೇಷ- ಸೇಡುಗಳನ್ನು ಬಿತ್ತಿ ಬೆಳೆಯುತ್ತಿರುವ ಆಳುವ ಪಕ್ಷದ ಚಂಡ ಪ್ರಚಂಡ ತಲೆಯಾಳುಗಳು ಮತ್ತು ಅವರ ಕಾಲು ನೆಕ್ಕಿ ಕಾಸು ಮಾಡುವ ಗೋದಿ ಮೀಡಿಯಾ ಈ ಹತ್ಯೆಗಳಲ್ಲಿ ಸಮಾನ ಪಾಲುದಾರರು.
ಚುನಾವಣೆಗಳ ಗೆಲ್ಲಲು ತನ್ನ ಪಾಲಿನ ಯಶಸ್ವೀ ಸೂತ್ರವೆಂದು ಸಾಬೀತಾಗಿರುವ ಹಿಂದು-ಮುಸ್ಲಿಮರ ನಡುವೆ ಕೋಮುವಾದಿ ಬೆಂಕಿ ಹಚ್ಚುವ ಪಾತಕಕ್ಕೇ ಶರಣಾಗತೊಡಗಿದೆ ಮೋದಿ-ಶಾ-ಯೋಗಿ ತ್ರಿವಳಿ. ಅನುದಿನವೂ ಕೋಮುವಾದದ ಹೊಸ ಕೊಳ್ಳಿಗಳನ್ನು ಹಚ್ಚತೊಡಗಿದೆ. ಆದರೆ ಹಚ್ಚಲಾಗುವ ಈ ಕಿಚ್ಚಿಗೆ ಹಿಂದೂಗಳು- ಮುಸಲ್ಮಾನರು ಎಂಬ ಧರ್ಮ ಇರುವುದಿಲ್ಲ. ಉರಿ ಉರಿದು, ಕಂಡದ್ದನ್ನೆಲ್ಲ ಬೂದಿಯಾಗಿಸುವುದೊಂದೇ ಕಿಚ್ಚಿನ ನಿಜ ಧರ್ಮ.
ಭಯೋತ್ಪಾದಕರೆಂದೂ, ದೇಶದ್ರೋಹಿಗಳೆಂದೂ ಮುಸಲ್ಮಾನರನ್ನು, ತೀವ್ರ ಎಡಪಂಥೀಯರೆಂದು ಆದಿವಾಸಿಗಳನ್ನು ಸುಳ್ಳು ಕೇಸುಗಳಲ್ಲಿ ಸಿಲುಕಿಸಿ ಜೈಲಿಗೆ ಅಟ್ಟುವ ಇಲ್ಲವೇ ಹುಸಿ ಎನ್ಕೌಂಟರುಗಳಲ್ಲಿ ಹೊಡೆದು ಹಾಕುವ ಅಕ್ರಮ ಮತ್ತು ಅಮಾನುಷ ಪ್ರವೃತ್ತಿಗೆ ಅಂಕೆಯೇ ಇಲ್ಲವಾಗಿದೆ. ಇಸ್ಲಾಮಿಕ್ ಭಯೋತ್ಪಾದನೆ ಮತ್ತು ತೀವ್ರ ಮಾವೋವಾದದ ಹೆಸರಿನಲ್ಲಿ ಅಮಾಯಕರು ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆಯುವಂತಾಗಿದೆ. ವಿನಾ ಕಾರಣ ಸಾಮಾಜಿಕ ಕಳಂಕವನ್ನು ಹೊತ್ತು ತಿರುಗಬೇಕಿದೆ.
ಮುಸಲ್ಮಾನರನ್ನು ನಿರಂತರವಾಗಿ ಹೊರಗಿನವರೆಂದೂ ಇತರರೆಂದೂ ಕಾಣಲಾಗುತ್ತಿದೆ. ಮೂರನೆಯ ದರ್ಜೆಯ ಪ್ರಜೆಗಳಂತೆ ಬಿದ್ದಿರಬೇಕೆಂಬ ಸಂದೇಶಗಳನ್ನು ಕಳೆದ ಐದಾರು ವರ್ಷಗಳಲ್ಲಿ ಬಗೆಬಗೆಯಾಗಿ ಅವರಿಗೆ ರವಾನಿಸುತ್ತ ಬರಲಾಗಿದೆ. ಗೋರಕ್ಷಣೆಯ ಹೆಸರಿನಲ್ಲಿ ಹಾಡಹಗಲೇ ದಾರಿ ಹೆದ್ದಾರಿಗಳಲ್ಲಿ ಅವರನ್ನು ಜಜ್ಜಿ ಕೊಂದವರನ್ನು ಕೊಂಡಾಡಲಾಯಿತು. 370ನೆಯ ಕಲಮಿನ ಪ್ರಕಾರ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತು, ಉಸಿರುಕಟ್ಟಿಸುವ ಹಲವು ನಿರ್ಬಂಧಗಳ ವಿಧಿಸಿ ಮುಕ್ಕಾಲು ಕೋಟಿ ಜನರು ಬದುಕುವ ಕಾಶ್ಮೀರ ಕಣಿವೆಗೆ ತಿಂಗಳುಗಟ್ಟಲೆ ಬೀಗ ಜಡಿಯಲಾಯಿತು. ಅವರು ಈ ದೇಶದ ನಾಗರಿಕರೇ ಅಲ್ಲ ಎಂಬ ತಳಮಳಕ್ಕೆ ತಳ್ಳಲಾಯಿತು. ಅವರ ಕುರಿತು ಸಾಮಾನ್ಯ ಜನಮಾನಸದಲ್ಲಿ ಪೂರ್ವಗ್ರಹ ಮತ್ತು ದ್ವೇಷವನ್ನು ಬಡಿದೆಬ್ಬಿಸಲಾಯಿತು. ದೆಹಲಿ ಕೋಮುಗಲಭೆಯಲ್ಲಿ ಅವರನ್ನು ಬೇಟೆಯಾಡಿದ ಪರಿ 2002ರ ಗುಜರಾತ್ ಭೀಭತ್ಸವನ್ನು ನೆನಪಿಸಿತ್ತು.
ಮುಸಲ್ಮಾನರೊಂದಿಗೆ ಕೈ ಕಲೆಸಿ ಕೆಲಸ ಮಾಡುವ ಸ್ವಯಂಸೇವಾ ಸಂಸ್ಥೆಗಳನ್ನು ಮಟ್ಟ ಹಾಕುವ ಕೃತ್ಯ ಲಾಗಾಯ್ತಿನಿಂದ ಚಾಲೂ ಇದ್ದೇ ಇದೆ. ಅವರ ಕುರಿತು ಸಹಾನುಭೂತಿ ತೋರುವ ಉದಾರವಾದಿಗಳು- ವಿಚಾರವಂತರನ್ನು ದೇಶದ್ರೋಹಿಗಳೆಂದೂ ಅವರನ್ನು ಗುಂಡಿಟ್ಟು ಕೊಲ್ಲಬೇಕೆಂದೂ ಕೇಂದ್ರ ಮಂತ್ರಿಗಳು ಬಹಿರಂಗಸಭೆಯಲ್ಲಿ ಘೋಷಣೆ ಕೂಗಿಸಿದರು.
ಎಲ್ಲ ನೈತಿಕ ಎಲ್ಲೆಗಳನ್ನು ಎದೆ ಸೆಟೆಸಿ ಉಲ್ಲಂಘಿಸುವ ಭಂಡತನದಲ್ಲಿ ಪೈಪೋಟಿ ನಡೆಯತೊಡಗಿದೆ. ದ್ವೇಷ, ಧೃವೀಕರಣ ಹಾಗೂ ಹಿಂಸೆಗಳನ್ನು ಪ್ರಚೋದಿಸುವ ಪಂದ್ಯಗಳಲ್ಲಿ ತಾವು ಭಾಗವಹಿಸುತ್ತಿದ್ದೇವೆ ಎಂಬ ಭಾವನೆಯನ್ನು ಬಿಜೆಪಿಯಲ್ಲಿ ಮತ್ತು ಈ ಪಕ್ಷದ ಕಟ್ಟರ್ ವಾದಿ ಬೆಂಬಲಿಗರಲ್ಲಿ ಉತ್ತೇಜಿಸಲಾಗುತ್ತಿದೆ. ಈ ನಾಚಿಕೆಗೇಡಿನಲ್ಲಿ ತೊಡಗಿದವರಿಗೆ ಇಂದಲ್ಲದಿದ್ದರೆ ನಾಳೆ ಪಕ್ಷ ಬಹುಮಾನಗಳನ್ನು ನೀಡಿ ಬೆನ್ನು ತಟ್ಟುತ್ತಿದೆ.
ಸಿ.ಎ.ಎ.- ಎನ್.ಆರ್.ಸಿ. ವಿರುದ್ಧ ಶಾಂತಿಯುತ ಪ್ರತಿಭಟನೆ ಜರುಗಿದ ಶಾಹೀನ್ ಬಾಗ್‌ನ್ನು ಮಿನಿ ಪಾಕಿಸ್ತಾನ ಎಂದು ಕರೆಯುವುದು, ದೇಶ್ ಕೇ ಗದ್ದಾರೋಂ ಕೋ, ಗೋಲೀ ಮಾರೋ ಸಾಲೋಂ ಕೋ ಎಂಬ ಘೋಷಣೆಗಳನ್ನು ಜನಸಭೆಗಳಲ್ಲಿ ಕೂಗಿಸುವುದು, ಎಷ್ಟು ಸಿಟ್ಟಿನಿಂದ ನೀವು ಚುನಾವಣಾ ಮತಯಂತ್ರದ ಗುಂಡಿ ಒತ್ತಬೇಕೆಂದರೆ ಅದರ ಆಘಾತ ಶಾಹೀನ್ ಬಾಗ್ ಗೆ ತಗುಲಬೇಕು ಎಂದು ಪ್ರಚೋದಿಸುವುದು, ಕಾಶ್ಮೀರದಲ್ಲಿ ಪಂಡಿತರನ್ನು ಹಿಂಸಿಸಿ ಬೆದರಿಸಿ ಓಡಿಸಿದಂತೆಯೇ ದೆಹಲಿಯಲ್ಲಿ ಶಾಹೀನ್ ಬಾಗ್‌ನ ಪ್ರತಿಭಟನಕಾರರು ನಾಳೆ ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲ್ಲಬಹುದು ಎಂದು ಒಂದು ಜನಾಂಗದ ವಿರುದ್ಧ ಹೇವರಿಕೆ ಭಯ ದ್ವೇಷ ಹುಟ್ಟಿಸುವುದು, ಶಾಹೀನ್ ಬಾಗ್ ಪ್ರತಿಭಟನೆಯ ಹಿಂದೆ ದೇಶವನ್ನು ಒಡೆಯುವ ಹುನ್ನಾರವಿದೆ ಎಂದು ವಿಷ ಕಕ್ಕುವುದು. ಶಾಹೀನ್ ಬಾಗ್ ನಲ್ಲಿ ಧರಣಿ ಕುಳಿತಿರುವ ಮಹಿಳೆಯರು ಮತ್ತು ಮಕ್ಕಳು ಸಾಯಬಾರದೇಕೆ, ಉತ್ತರಪ್ರದೇಶದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಿಎಎ ಪ್ರತಿಭಟನಾಕಾರರನ್ನು ನಾಯಿಗಳಂತೆ ಗುಂಡು ಹೊಡೆದು ಸಾಯಿಸಲಾಗಿದೆ ಎನ್ನಲಾಯಿತು. ಈ ದ್ವೇಷದ ಕಿಚ್ಚನ್ನು ಜನಮಾನಸದ ಎದೆಯಲ್ಲಿ ಹೊತ್ತಿಸಿ ದಾರಿ ತಪ್ಪಿಸುವ ಅಪಾಯಕಾರಿ ಆಟವಿದು. ಜನರನ್ನು ಒಡೆದು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ಕೊಲ್ಲಿಸುವ ಆಟ. ಈ ಆಟದಲ್ಲಿ ಕಿಚ್ಚು ಹೊತ್ತಿಸುವವರು ಗೆಲ್ಲಬಹುದು, ಆದರೆ ದೇಶ ಸೋಲುತ್ತದೆ.
‘ಗೋಲಿ ಮಾರೋ ಸಾಲೋಂ ಕೋ’ ಎಂಬ ತಮ್ಮ ನಾಯಕರು ಕುಡಿಸಿರುವ ದ್ವೇಷದ ನಶೆಯನ್ನು ಏರಿಸಿಕೊಂಡಿರುವ ಯುವಕರು ಶಾಹೀನ್ ಬಾಗ್ ನಲ್ಲಿ ಗುಂಡು ಹಾರಿಸತೊಡಗಿದರು. ಈ ಕಿಚ್ಚು ಕ್ರಮೇಣ ವ್ಯಾಪಿಸತೊಡಗಿದೆ. ನಿಯಂತ್ರಿಸದೆ ಹೋದರೆ ಮನೆಮನೆಗಳನ್ನೂ ಹೊಕ್ಕು ಸುಡಲೂಬಹುದು. ಪಕ್ಕದ ಮನೆ ಆ ಬೆಂಕಿಯ ಸುಡುವ ಬೆಂಕಿ ಇಂದಲ್ಲ ನಾಳೆ ನನ್ನ ಮನೆಯನ್ನೂ ಸುಟ್ಟೀತಲ್ಲವೇ ಎಂಬ ಪ್ರಜ್ಞೆ ಮೂಡಬೇಕಿದೆ.
ಪ್ರತಿಯೊಬ್ಬ ಔರಂಗಜೇಬನಿಗೆ ಒಬ್ಬ ಶಿವಾಜಿ ಇದ್ದೇ ಇರುತ್ತಾನೆ ಎಂಬ ಪ್ರಧಾನಿಯ ಹೇಳಿಕೆಗೆ ಕೋಮುವಾದಿ ವಿಷ ಕಕ್ಕುವುದ ಬಿಟ್ಟು ಇನ್ಯಾವ ಘನಂದಾರಿ ಉದ್ದೇಶ ಇದ್ದೀತು? ಗೋದಿ ಮೀಡಿಯಾ ಒಂಬತ್ತು ವರ್ಷಗಳಿಂದ ನೀರೆರೆಯುತ್ತಿದ್ದ ದ್ವೇಷ ತಿರಸ್ಕಾರಗಳ ಬೀಜ ಈಗ ಮರವಾಗತೊಡಗಿದೆ. ಹೆಮ್ಮರವಾಗಿ ಬೇರು ಬಿಳಿಲುಗಳನ್ನು ಊರುವ ಮುನ್ನ ಕಡಿದು ಒಗೆಯಬೇಕಿದೆ. ಕೊಂದು ಉಳಿಸಿಕೊಳ್ಳಬೇಕಾದ ಧರ್ಮ ಯಾವುದಾದರೂ ಇದೆಯೇ ಈ ಪ್ರಪಂಚದಲ್ಲಿ ಎಂದು ಪೂರ್ಣಚಂದ್ರ ತೇಜಸ್ವಿ ಅವರು ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದರು. ದ್ವೇಷವನ್ನು ಬಿತ್ತಿ ಪ್ರೀತಿಯನ್ನು ಬೆಳೆಯುವುದು ಸಾಧ್ಯವಿಲ್ಲ.
