- ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
- ದ್ವಿಚಕ್ರ ವಾಹನದಲ್ಲಿ ಮೃತದೇಹ ಊರಿಗೆ ತಂದ ಆರೋಪಿ
ಪಾರ್ಟಿಗೆಂದು ಸ್ನೇಹಿತನನ್ನು ಕರೆದು, ಆತನನ್ನು ಕೊಲೆ ಮಾಡಿ ಮೃತದೇಹವನ್ನು ಬೈಕ್‌ನಲ್ಲಿ ಊರಿಗೆ ತಂದ ಘಟನೆ ಬೆಂಗಳೂರಿನ ಆನೇಕಲ್‌ನಲ್ಲಿ ನಡೆದಿದೆ.
ಮೊಹಮ್ಮದ್ ಸಲೀಂ ಕೊಲೆಯಾದ ದುರ್ದೈವಿ. ಚರಣ್ ಮತ್ತು ನಾರಾಯಣಪ್ಪ ಬಂಧಿತ ಆರೋಪಿಗಳು.
ಜುಲೈ 31ರಂದು ಚರಣ್ ಎಂಬುವವನ ಬರ್ತಡೇ ಪಾರ್ಟಿ ಮಾಡಲಾಗುತ್ತಿತ್ತು. ಈ ವೇಳೆ, ಮೊಹಮ್ಮದ್ ಸಲೀಂ ಎಂಬಾತನನ್ನು ಪಾರ್ಟಿಗೆ ಕರೆದಿದ್ದಾರೆ. ಇದರ ಹಿಂದೆ ಆರೋಪಿಗಳು ಸಲೀಂನನ್ನು ಕೊಲ್ಲವ ಸಂಚು ರೂಪಿಸಿದ್ದರು.
ಸಲೀಂ ಪಾರ್ಟಿಗೆ ಬರುತ್ತಿದ್ದಂತೆ ಮದ್ಯಪಾನ ಮಾಡಿಸಿ ಬಳಿಕ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಮೃತದೇಹವನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಆರೋಪಿ ನಾರಾಯಣಪ್ಪ ಊರಿಗೆ ತೆರಳಿದ ಬಳಿಕ ಮನೆಯವರೆಲ್ಲ ಸಲೀಂ ಎಲ್ಲಿ ಎಂದು ವಿಚಾರಿಸಿದಾಗ ನಾರಾಯಣಪ್ಪ ಮತ್ತೆ ಮೃತದೇಹ ಇರುವ ಸ್ಥಳಕ್ಕೆ ತೆರಳಿ ತನ್ನದೆ ಟಿವಿಎಸ್ ಎಕ್ಸೆಲ್ ದ್ವಿಚಕ್ರ ವಾಹನದಲ್ಲಿ ಮೃತದೇಹವನ್ನು ಊರಿಗೆ ತಂದಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮದ್ಯ ಸೇವಿಸಿ ಟ್ಯಾಂಕರ್ ಚಾಲನೆ; ಪಾದಾಚಾರಿಗಳ ಸಾವು
ಮೃತದೇಹ ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಸರ್ಜಾಪುರ ಠಾಣೆಯ ಪೊಲೀಸರು ನಾರಾಯಣಪ್ಪ ಮತ್ತು ಚರಣ್ ಅವರನ್ನು ವಶಕ್ಕೆ ಪಡೆದು ವಿಚಾರ ನಡೆಸುತ್ತಿದ್ದಾರೆ.
ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.