ಗುಬ್ಬಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಸಮಸ್ಯೆ ಬಗೆಹರಿಸಲು ಪಟ್ಟಣ ಪಂಚಾಯಿತಿ ಕರೆದಿದ್ದ ಸಭೆಯಲ್ಲಿ ನಾಗರೀಕರ ಒತ್ತಾಯದಂತೆ ನೋ ಪಾರ್ಕಿಂಗ್ ವ್ಯವಸ್ಥೆ ಹಾಗೂ ಕಾರು ಹಾಗೂ ದ್ವಿಚಕ್ರ ವಾಹನ ನಿಲುಗಡೆಗೆ ಸೂಕ್ತ ಕ್ರಮ ಕೈಗೊಂಡು ರಸ್ತೆ ಸುರಕ್ಷತೆಯ ಬಗ್ಗೆ ಪೌರ ಕಾರ್ಮಿಕರ ನೇಮಕ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸಿದ್ದ ತಹಶೀಲ್ದಾರ್ ಆರತಿ.ಬಿ ಅವರು ತಾಲ್ಲೂಕು ಕಚೇರಿ ಆವರಣದಲ್ಲಿ ಬೈಕ್ ಪಾರ್ಕಿಂಗ್ ವ್ಯವಸ್ಥೆಗೆ ಅನುವು ಮಾಡಿದರು. ಜೊತೆಗೆ ತಾಲ್ಲೂಕು ಕಚೇರಿ ಹಿಂಭಾಗ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿದರು.
ಪಪಂ ಅಧ್ಯಕ್ಷೆ ಆಯಿಷಾ ತಾಸೀನ್ ಮಾತನಾಡಿ ಸೋಮವಾರದಿಂದ ಜಾರಿಯಾಗುವಂತೆ ನಿಯಮ ಸಿದ್ದ ಮಾಡಿದ ಪಟ್ಟಣ ಪಂಚಾಯಿತಿ ಎಂ.ಜಿ.ರಸ್ತೆಯಲ್ಲಿ ಈ ಮೊದಲು ಜಾರಿಯಿದ್ದ ಪಾರ್ಕಿಂಗ್ ವ್ಯವಸ್ಥೆ ಮತ್ತೊಮ್ಮೆ ಜಾರಿಗೆ ಸಿದ್ಧಗೊಳಿಸಿ ರಸ್ತೆ ಸುರಕ್ಷತೆ ಹಿನ್ನಲೆ ಮೊದಲ ಹೆಜ್ಜೆಯಾಗಿ ಪಟ್ಟಣ ಪಂಚಾಯಿತಿ ಕಚೇರಿಯಿಂದ ಲೋಕೋಪಯೋಗಿ ಇಲಾಖೆ ಕಚೇರಿವರೆಗೆ ಎಡ ಬದಿಯ ರಸ್ತೆಗೆ ನೋ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಲ ಬದಿಯಲ್ಲಿ ವಾಹನ ನಿಲುಗಡೆಗೆ ಅನುವು ಮಾಡಲಾಗಿದೆ ಎಂದರು.
ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ ಸಾರ್ವಜನಿಕರ ಅಭಿಪ್ರಾಯದಂತೆ ಸುಗಮ ಸಂಚಾರಕ್ಕೆ ಒಂದು ಬದಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಾನೂನು ರೀತಿಯ ನಿಯಮ ಪಾಲನೆಗೆ ಪೊಲೀಸರ ಸಹಕಾರ ಅತ್ಯಗತ್ಯವಿದೆ. ಸದ್ಯಕ್ಕೆ ನಮ್ಮ ಪೌರ ಕಾರ್ಮಿಕರೇ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸುತ್ತಿದ್ದಾರೆ ಎಂದರು.
ಪಪಂ ಸದಸ್ಯ ಮಹಮ್ಮದ್ ಸಾದಿಕ್ ಮಾತನಾಡಿ ಬಹುದಿನದ ಬೇಡಿಕೆಯಾದ ಪಾರ್ಕಿಂಗ್ ವ್ಯವಸ್ಥೆ ಪಟ್ಟಣ ಪಂಚಾಯಿತಿ ಮಾಡಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ನಾಗರೀಕರು ಸಭೆಯಲ್ಲಿ ದೂರು ಹೇಳಿದ ಹಿನ್ನಲೆ ಕೂಡಲೇ ಪಾರ್ಕಿಂಗ್ ವ್ಯವಸ್ಥೆ ಮಾಡಿ ನಮ್ಮ ಕಾರ್ಮಿಕರಿಂದ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗುಬ್ಬಿ ಹಿತ ರಕ್ಷಣಾ ಸಮಿತಿಯ ಯಲ್ಲಪ್ಪ, ಸಿ.ಆರ್.ಶಂಕರ್ ಕುಮಾರ್ ಇತರರು ಇದ್ದರು.