ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಕೇರಳದ ಭಾರತೀಯ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆ ಮುಂದೂಡಿಕೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮೆಹ್ದಿ ಕೊಲೆ ಪ್ರಕರಣದಲ್ಲಿ ನಿಮಷಾ ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. ಸದ್ಯ ಕ್ಷಮಾದಾನದ ಮಾತುಕತೆ ಮುಂದುವರೆದಿದೆ.
ಯೆಮೆನ್ ಪ್ರಜೆ ತಲಾಲ್ ಹತ್ಯೆ ಪ್ರಕರಣದಲ್ಲಿ 38 ವರ್ಷದ ನಿಮಿಷಾಗೆ 2020ರಲ್ಲಿ ಯೆಮೆನ್ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು. ನಂತರ ಈ ತೀರ್ಪನ್ನು ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023ರಲ್ಲಿ ಎತ್ತಿಹಿಡಿದಿದ್ದು, ಜುಲೈ 16ರಂದು ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ನಿಗದಿಯಾಗಿತ್ತು.
ಇದನ್ನು ಓದಿದ್ದೀರಾ? ಜು.16ರಂದು ಯೆಮೆನ್‌ನಲ್ಲಿ ಕೇರಳದ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ: ಏನಿದು ಪ್ರಕರಣ?
ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದ್ದರು. ಅಲ್ಲಿ 2014ರಲ್ಲಿ ಸ್ಥಳೀಯ ನಿವಾಸಿ ತಲಾಲ್ ಅಬ್ದೋ ಮೆಹ್ದಿ ಜೊತೆ ಪಾಲುದಾರಿಕೆಯಲ್ಲಿ ಕ್ಲಿನಿಕ್ ಒಂದನ್ನು ತೆರೆದಿದ್ದರು. ಇದೀಗ ತಲಾಲ್ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
2017ರಲ್ಲಿ ನಿಮಿಷಾ ಅವರ ಪಾಸ್‌ಪೋರ್ಟ್ ತಲಾಲ್ ಅಬ್ದೋ ಮಹ್ದಿ ಅನ್ನು ವಶಪಡಿಸಿಕೊಂಡು ಯೆಮೆನ್‌ನಿಂದ ನಿಮಿಷಾ ಹೊರಗೆ ಹೋಗಲು ಸಾಧ್ಯವಾಗದಂತೆ ತಡೆದಿದ್ದಾನೆ ಎಂದು ಆರೋಪಿಸಲಾಗಿದೆ. ನಿಮಿಷಾ ಪ್ರಿಯಾ ದಾಖಲೆಯನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಮಹ್ದಿಗೆ ಮತ್ತು ಬರಿಸುವ ಇಂಜೆಕ್ಷನ್ ಚುಚ್ಚಿದ್ದಳು. ಆದರೆ ಆ ಡೋಸೇಜ್ ಅತಿಯಾಗಿದ್ದು, ಮಹ್ದಿ ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ನಿಮಿಷಾ ಯೆಮೆನ್‌ನಿಂದ ಪರಾರಿಯಾಗಲು ಯತ್ನಿಸಿದ್ದು ಆಕೆಯನ್ನು ಬಂಧಿಸಲಾಗಿತ್ತು. ಸದ್ಯ ಪ್ರಸಿದ್ಧ ಸೂಫಿ ಗುರು ಶೇಖ್ ಹಬೀಬ್ ಉಮರ್ ಬಿನ್ ಹಫೀಲ್ ನೇತೃತ್ವದಲ್ಲಿ ತುರ್ತು ಮಾತುಕತೆ ನಡೆಯುತ್ತಿದೆ.
