ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 500 ಕೋಟಿ ಮಹಿಳೆಯರು ಸಂಚರಿಸಿದ್ದರ ಅಂಗವಾಗಿ ಸಂಭ್ರಮಾಚರಣೆ ನಡೆಸಲಾಗಿದೆ. ಈ ಅಗಾಧ ಸಂಖ್ಯೆಯ ಮಹಿಳೆಯರ ಪ್ರಯಾಣವನ್ನು ಯೋಜನೆಯ ಯಶಸ್ಸು ಎಂದೇ ಹೇಳಬಹುದು. ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯೊಂದಿಗೆ ಸರ್ಕಾರ ರಾಜ್ಯ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿದ್ದು, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೊಂದು ಮೆಟ್ಟಿಲಾಗಿ ಬದಲಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

“ರಾಜ್ಯ ಸರ್ಕಾರದ ಶಕ್ತಿ ಯೋಜನೆ ಎರಡು ವರ್ಷದಲ್ಲಿ 500 ಕೋಟಿ ಮಹಿಳೆಯರ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದೆ. ಬಹುಶಃ ಯಾವುದೇ ಯೋಜನೆ ಕೂಡ ಈ ಸಂಖ್ಯೆಯ ಜನಸಂಖ್ಯೆಯನ್ನು ತಲುಪಿ, ಇಷ್ಟೊಂದು ಅಭೂತಪೂರ್ವ ಯಶಸ್ಸನ್ನು ಗಳಿಸಿರಲಿಕ್ಕಿಲ್ಲ. ಮಹಿಳೆಯರ ಓಡಾಟದ ವೆಚ್ಚವನ್ನು ಕಡಿಮೆ ಮಾಡಿ, ಅವರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು ಹಾಗೂ ಸಾರ್ವಜನಿಕ ಸಾರಿಗೆ ಬಳಸುವ ಪ್ರಮಾಣವನ್ನು ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿತ್ತು.
ಬಹುತೇಕ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಇದ್ದು ಜೀವನ ಸವೆಸುತ್ತಿದ್ದು, ಹೆಚ್ಚೆಂದರೆ ಪಕ್ಕದ ರಾಮಕ್ಕನ ಮನೆಗೋ, ಲಲಿತಮ್ಮನ ಮನೆಗೋ ಹೋಗಿಬರುತ್ತಿದ್ದ ತಾಯಂದಿರು, ಅಕ್ಕಂದಿರು ಇಂದು ಅದರ ಗಡಿ ದಾಟಿ ಸಂತೆಯ ಕಾಯಿಪಲ್ಲೆ, ತರಕಾರಿ ತರಲು, ಪೇಟೆಯಿಂದ ದಿನಸಿ ಕೊಂಡುಬರಲು, ಸಣ್ಣ ಪುಟ್ಟ ಸಮಾರಂಭಗಳಿಗೆ, ದೂರದೂರಿನ ದೇಗುಲಗಳು, ಪ್ರವಾಸಿ ತಾಣಗಳಿಗೆ ಹೋಗಿಬರುವ ಸಾಹಸ ತೋರಿದ್ದಾರೆ. ಅನೇಕ ಮಹಿಳೆಯರು ಶಕ್ತಿ ಯೋಜನೆಯಿಂದಾಗಿ ಹೊಸ ಹೊಸ ಕೆಲಸಗಳಿಗೆ ಸೇರಿ ಕಾರ್ಯ ನಿರ್ವಹಿಸುತ್ತಿರುವುದು ಯೋಜನೆಯ ಯಶಸ್ಸಿಗೆ ಒಂದು ಗರಿ.
ಉಚಿತ ಪ್ರಯಾಣ ಸೌಲಭ್ಯದಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಳವಾಗಿದೆ. ಅವರು ಸ್ವತಂತ್ರವಾಗಿ ಹೊರ ಹೋಗಿ ತಮ್ಮ ಕಾರ್ಯ ನಿರ್ವಹಿಸಲು ಪ್ರೇರಣೆಯಾಗುತ್ತಿದೆ.
ಪಕ್ಕದ ಜಿಲ್ಲಾ ಕೇಂದ್ರಗಳ ಹೆಸರು ಕೇಳಿದರೆ ಅದು ಎಲ್ಲಿದೆ? ಎಂದು ಮರು ಪ್ರಶ್ನೆ ಹಾಕುತ್ತಿದ್ದ ಬಹುತೇಕ ಮಹಿಳೆಯರು ಇಂದು ದೂರದ ನೆಂಟನಂತಿದ್ದ ಬೆಂಗಳೂರು ಸೇರಿದಂತೆ ಹಲವು ನಗರ ಪ್ರದೇಶಗಳಿಗೆ ಕೂಡ ಸಲೀಸಾಗಿ ಹೋಗಿ ಬರುವಷ್ಟು ಪರಿಚಿತವೆನಿಸಿವೆ.
ಮಹಿಳೆಯರು ಉಚಿತವಾಗಿ ನಗರ ಹಾಗೂ ಗ್ರಾಮಾಂತರ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಬಹುದು. ಇದರಿಂದ ದೈನಂದಿನ ಪ್ರಯಾಣದ ವೆಚ್ಚ ಉಳಿತಾಯವಾಗಿ, ಆ ಹಣವನ್ನು ಇತರ ಅಗತ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ.ಯೋಜನೆಯು ಪ್ರಯಾಣ ಅಷ್ಟೇ ಅಲ್ಲ, ಉದ್ಯೋಗಕ್ಕೂ ದಾರಿ ಮಾಡಿ ಕೊಟ್ಟಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವಾಗಿದೆ. ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಉತ್ತಮ ಸೇವೆ ಒದಗಿಸಿಕೊಡುವ ಯೋಜನೆಯಾಗಿದ್ದು, ಶಕ್ತಿ ಯೋಜನೆಯ ಸಹಾಯದಿಂದ ಮಹಿಳೆಯರು ಯಾರನ್ನೂ ಅವಲಂಬಿಸದೆ ಮುಕ್ತವಾಗಿ ಪ್ರಯಾಣಿಸುತ್ತಿದ್ದಾರೆ. ಯೋಜನೆಯು ಕರ್ನಾಟಕ ರಾಜ್ಯದ ಆರ್ಥಿಕವಾಗಿ ಹಿಂದುಳಿದ ಮಹಿಳಾ ನಾಗರಿಕರ ಸಾಮಾಜಿಕ ಸ್ಥಾನಮಾನ ಮತ್ತು ಜೀವನ ಮಟ್ಟವನ್ನು ಸುಧಾರಿಸಿದೆ.

ಈದಿನ ಡಾಟ್ ಕಾಮ್ ನೊಂದಿಗೆ ಮಾತನಾಡಿದ ಭರಮಸಾಗರದ ಮಹಿಳೆ ನಿರ್ಮಲಾ
“ರಾಜ್ಯದ ಸರ್ಕಾರದ ಶಕ್ತಿ ಯೋಜನೆಯಿಂದ ಬಹಳ ಅನುಕೂಲವಾಗಿದೆ. 500 ಕೋಟಿಗೂ ಹೆಚ್ಚು ಮಹಿಳಾ ಫಲಾನುಭವಿಗಳು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವುದು ಸಂತಸದ ಸಂಗತಿ. ನಾರಿಶಕ್ತಿಯ ಸಬಲೀಕರಣಕ್ಕೆ ಸಹಕಾರಿಯಾಗಿರುವ ಶಕ್ತಿ ಯೋಜನೆ ಮುಂದುವರೆಯಬೇಕು. ಇದರಿಂದಾಗಿ ಮಹಿಳೆಯರು ಉದ್ಯೋಗ, ವ್ಯವಹಾರಗಳಲ್ಲಿ ತೊಡಗಿಕೊಳ್ಳಲು ಸಾದ್ಯವಾಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಸರ್ಕಾರಕ್ಕೆ ಉತ್ತಮ ಹೆಸರು ಮತ್ತು ಕೀರ್ತಿ ತಂದ ಯಶಸ್ಸಿನ ಯೋಜನೆ. ಯೋಜನೆಯಿಂದ ರಾಜ್ಯದ ಬಹುತೇಕ ಪ್ರವಾಸಿ ತಾಣಗಳು, ದೇಗುಲಗಳು, ಸುಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು ಮಹಿಳೆಯರಿಂದಲೇ ತುಂಬಿ ತುಳುಕುತ್ತಿದ್ದು, ನಿರೀಕ್ಷೆ ಮೀರಿ ಆದಾಯ ಗಳಿಸಿವೆ. ಇದಿಷ್ಟೇ ಅಲ್ಲದೆ ಮಹಿಳೆಯರು ಸಾಂಪ್ರದಾಯಿಕ ಗಡಿ ದಾಟಿ ವ್ಯವಹಾರ, ಉದ್ಯೋಗ, ಓದು ಸೇರಿದಂತೆ ಹಲವು ವಲಯಗಳಲ್ಲಿ ನೈಪುಣ್ಯತೆ ಹೊಂದಲು ಸಹಕಾರಿಯಾಗಿದೆ. ಯೋಜನೆಯಿಂದಾಗಿ ಮಹಿಳೆಯರಿಗೆ ಆರ್ಥಿಕ ಉಳಿತಾಯ ಕೂಡ ಆಗಿದ್ದು, ಜೊತೆಗೆ ಅವರ ದೈನಂದಿನ ಜೀವನದಲ್ಲಿ ಗಣನೀಯ ಬದಲಾವಣೆಯನ್ನು ತಂದಿದೆ ಎಂದೇ ವಿಶ್ಲೇಷಿಸಬಹುದು.

ಒಟ್ಟು ಮೌಲ್ಯ 12,511 ಕೋಟಿ ರೂಪಾಯಿಗಳನ್ನು ಪ್ರತಿದಿನ ಸರಾಸರಿ 70 ರಿಂದ 80 ಲಕ್ಷ ಮಹಿಳೆಯರು ಸೌಲಭ್ಯವನ್ನು ಬಳಸಿಕೊಂಡಿರುವ ಶಕ್ತಿ ಯೋಜನೆ ಜಾರಿಗೆ ವ್ಯಯಿಸಲಾಗಿದೆ. ಇದು ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲೇ ಒಂದು ಹೊಸ ದಾಖಲೆಯಾಗಿದ್ದು, ಯೋಜನೆಯಿಂದ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರ ಪ್ರಮಾಣ ಶೇ.40 ರಷ್ಟು ಹೆಚ್ಚಿದ್ದು, ರಾಜ್ಯ ಸಾರಿಗೆ ಸಂಸ್ಥೆಯ ವ್ಯವಹಾರ ಕೂಡ ಗಣನೀಯವಾಗಿ ಏರಿದೆ ಕಂಡಿದೆ.
ದಾವಣಗೆರೆ ಕೆಎಸ್‍ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್ ಕುಮಾರ್ ಮಾತನಾಡಿ, “ಶಕ್ತಿ ಯೋಜನೆಯು ಅತ್ಯಂತ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ 2025 ರ ಜುಲೈ 11 ರವರೆಗೆ ವಯಸ್ಕರು, ಮಕ್ಕಳು ಸೇರಿದಂತೆ 9,55,31,863 ಮಹಿಳಾ ಪ್ರಯಾಣಿಕರು ಯೋಜನೆಯ ಲಾಭ ಪಡೆದಿದ್ದಾರೆ. ಇದರ ವೆಚ್ಚ ರೂ. 27,21,78,538 ಕೋಟಿ ಮೊತ್ತವಾಗಿದೆ. ರಾಜ್ಯದಲ್ಲಿ 500 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಇದಕ್ಕಾಗಿ 12,511 ಕೋಟಿ ಸಾರಿಗೆ ಸಂಸ್ಥೆಯ ವ್ಯವಹಾರವಾಗಿದೆ” ಎಂದು ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆಗಳಿಂದ ಬಡವರ ಬದುಕು ಹಸನಾಗಿದೆ. ನಿತ್ಯ ಕೆಲಸಕ್ಕೆ ಹೋಗಿಬರುವ ನಾನು ತಿಂಗಳಿಗೆ ಸಾವಿರಕ್ಕೂ ಹೆಚ್ಚು ಟಿಕೆಟ್ ಗಾಗಿ ಕೊಡುತ್ತಿದ್ದೆ. ನಮ್ಮಂತಹ ಉದ್ಯೋಗಿಗಳು ಬಸ್ ಪ್ರಯಾಣಕ್ಕಾಗಿ ಪ್ರತಿನಿತ್ಯ ಖರ್ಚು ಮಾಡುತ್ತಿದ್ದ ಹಣವನ್ನು, ಮನೆಯ ಇತರೆ ಖರ್ಚು ವೆಚ್ಚ ಭರಿಸಲು, ಉಳಿತಾಯಕ್ಕೆ ಅನುಕೂಲವಾಗಿದೆ. ಹಾಗಾಗಿ ಪಂಚ ಗ್ಯಾರಂಟಿ ಯೋಜನೆಗಳು ಯಾವುದೇ ಅಡೆತಡೆ ಇಲ್ಲದೇ ಹೀಗೆಯೇ ಮುಂದುವರೆಯಬೇಕು ಎಂಬುವುದೇ ನನ್ನಂತಹ ಮಹಿಳೆಯರ ಆಸೆ. ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದಗಳು ಎನ್ನುತ್ತಾರೆ” ಗಾರ್ಮೆಂಟ್ಸ್ ನಲ್ಲಿ ಕೆಲಸ ಉದ್ಯೋಗಿ ವಿನುತಾ.
ದಾವಣಗೆರೆಗೆ ಪ್ರತಿನಿತ್ಯ ಹರಿಹರದಿಂದ ಸಂಚರಿಸುವ ಮಹಿಳಾ ಉದ್ಯೋಗಿ ಅಫ್ರೀನ್ ತಾಜ್ ಮಾತನಾಡಿ, “ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಹಲವಾರು ಅನುಕೂಲಗಳಾಗಿವೆ. ಮಹಿಳೆಯರು ನೋಡಲು ಬಹುತೇಕ ಕನಸಿನ ಮಾತಾಗಿದ್ದ ಪ್ರವಾಸದ ಸ್ಥಳಗಳು, ದೂರದ ನಗರಗಳಿಗೆ ಮಹಿಳೆಯರು ಸ್ವತಂತ್ರವಾಗಿ, ಮುಕ್ತವಾಗಿ ಸಂಚರಿಸಲು ಅನುಕೂಲವಾಗಿದೆ. ತುರ್ತು ಸಂದರ್ಭಗಳಲ್ಲಿ ಹೊರ ಹೋಗಲು ಇನ್ನೊಬ್ಬರನ್ನು ಅವಲಂಬಿಸುತ್ತಿದ್ದ ಮಹಿಳೆಯರಿಂದು ಶಿಕ್ಷಣ, ಉದ್ಯೋಗ, ಪ್ರವಾಸ ಸೇರಿದಂತೆ ಹಲವು ತುರ್ತು ಉದ್ದೇಶಗಳಿಗಾಗಿ ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ಪ್ರಯಾಣ ಮಾಡುವ ಮೂಲಕ ಮಹಿಳೆಯರಿಗೆ ಶಕ್ತಿ ಯೋಜನೆಯು ನಿಜಾರ್ಥದಲ್ಲಿ ಶಕ್ತಿಯನ್ನು ತುಂಬಿದೆ” ಎಂದು ಅಭಿಪ್ರಾಯ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸ್ತ್ರೀಯರ ಸಮಾನ ಶಿಕ್ಷಣ, ಸ್ವಾತಂತ್ರ್ಯ ಇಲ್ಲದ ಸಮಾಜ, ದೇಶದ ಪ್ರಗತಿ ಸಾಧ್ಯವಿಲ್ಲ: ಸಚಿವ ಸಂತೋಷ್ ಲಾಡ್
ಒಟ್ಟಿನಲ್ಲಿ ಶಕ್ತಿ ಯೋಜನೆಯು ಮಹಿಳೆಯರಿಗೆ ಸ್ವತಂತ್ರ ಮತ್ತು ಮುಕ್ತ, ಆರ್ಥಿಕ ಹೊರೆಯಿಲ್ಲದಂತಹ ಪ್ರಯಾಣದ ಅನುಕೂಲ ಕಲ್ಪಿಸಿದ್ದು , ಮಹಿಳೆಯರಿಗೆ ಮುಕ್ತ ಅವಕಾಶಗಳನ್ನು ಕೂಡ ತೆರೆದಿದೆ. ಇದರೊಂದಿಗೆ ಯೋಜನೆಯ ಸಾಕಾರಕ್ಕೆ ಸರ್ಕಾರ ಕೂಡ ಇನ್ನಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿರುವ ಅವಶ್ಯಕತೆ ಇದೆ.
ಬಹುತೇಕ ಕಡೆ ಪ್ರಯಾಣಿಕರು ತುಂಬಿ ತುಳುಕುತ್ತಿದ್ದು, ಕೆಲ ಅನಾನುಕೂಲತೆಗಳು ಕೂಡ ಉಂಟಾಗಿರುವ ವರದಿಗಳು ಕೇಳಿಬಂದಿವೆ. ಆದರೆ ಯೋಜನೆ ಯಶಸ್ಸು ದೊಡ್ಡದಿದ್ದು ಇದನ್ನು ಹೀಗೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯ ಬಸ್, ಸಿಬ್ಬಂದಿಗಳು, ಇತರ ವ್ಯವಸ್ಥೆಗಳನ್ನು ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಹೆಚ್ಚಿಸಬೇಕಿದೆ ಎಂಬುದು ಮಹಿಳೆಯರ, ಸಾರ್ವಜನಿಕರ ಮನವಿ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು