ಗ್ಯಾರಂಟಿ ಯೋಜನೆ ಮುಂದಿಟ್ಟುಕೊಂಡು ಲೋಕಸಭೆ ಎದುರಿಸೋಣ ಬನ್ನಿ: ಮೋದಿಗೆ ಸಿದ್ದರಾಮಯ್ಯ ಸವಾಲು

Date:

Advertisements
  • ಗ್ಯಾರಂಟಿ ಯೋಜನೆ ವಿರೋಧಿಸುವುದಾದರೆ ನಿಮ್ಮ ಪಕ್ಷದ ಸ್ಪಷ್ಟ ನಿಲುವೇನು?
  • ‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಗೆ ನಿಮ್ಮ ಪಕ್ಷ ಆಗ್ರಹಿಸುತ್ತಿದೆ’

ಕರ್ನಾಟಕದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಖಜಾನೆ ಬರಿದಾಗಲಿದೆ ಮತ್ತು ಅಭಿವೃದ್ದಿಗೆ ಹಣ ಇಲ್ಲದಂತಾಗಿದೆ ಎಂದು ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, “ಗ್ಯಾರಂಟಿ ಯೋಜನೆಗಳ ಬಗೆಗೆ ಕಾಳಜಿ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, “ನರೇಂದ್ರ ಮೋದಿಯವರೇ, ಇದು ನಿಮ್ಮ ವೈಯಕ್ತಿಕ ಅಭಿಪ್ರಾಯವೇ, ಪ್ರಧಾನಿಯವರ ಅಭಿಪ್ರಾಯವೇ? ಇಲ್ಲವೆ ಪಕ್ಷದ ಅಭಿಪ್ರಾಯವೇ? ಎನ್ನುವುದನ್ನು ದಯವಿಟ್ಟು ಸ್ಪಷ್ಟಪಡಿಸಿ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದಾದರೆ ನಿಮ್ಮ ಮತ್ತು ನಿಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿ” ಎಂದು ಆಗ್ರಹಿಸಿದ್ದಾರೆ.

“ಕರ್ನಾಟಕದ ಬಿಜೆಪಿ ನಾಯಕರಿಗೂ ನಮ್ಮ ಗ್ಯಾರಂಟಿ ಯೋಜನೆಗಳನ್ನು ಸಾರ್ವಜನಿಕವಾಗಿ ವಿರೋಧಿಸಲು ನಿರ್ದೇಶನ ನೀಡಿ. ಮುಂದಿನ ಲೋಕಸಭಾ ಚುನಾವಣೆಯನ್ನು ಗ್ಯಾರಂಟಿ ಯೋಜನೆಗಳ ವಿಷಯವನ್ನೇ ಮುಂದಿಟ್ಟುಕೊಂಡು ಎದುರಿಸಲು ನಾವು ಸಿದ್ಧರಿದ್ದೇವೆ, ನೀವು ಸಿದ್ಧರಿದ್ದರೆ ಹಾಗೆಂದು ಘೋಷಿಸಿಬಿಡಿ” ಎಂದು ಸವಾಲು ಹಾಕಿದ್ದಾರೆ.

Advertisements

“ಇಲ್ಲಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿಗೊಳಿಸಬೇಕೆಂದು ಕರ್ನಾಟಕದ ಬಿಜೆಪಿ ನಾಯಕರು ಒಂದೇ ಸಮನೆ ನಮ್ಮ ಬೆನ್ನು ಹತ್ತಿದ್ದಾರೆ. ಬಡವರಿಗೆ ನೀಡುವ ಹೆಚ್ಚುವರಿ ಅಕ್ಕಿಯಲ್ಲಿ ಒಂದು ಕಾಳು ಕಡಿಮೆ ಮಾಡಿದರೂ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಡಿಯೂರಪ್ಪನವರು ಗುಡುಗುತ್ತಲೇ ಇದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು”‌ ಎಂದು ಪ್ರಶ್ನಿಸಿದ್ದಾರೆ.

“ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಮತ್ತು ಬಿಪಿಎಲ್ ಕುಟುಂಬಗಳಿಗೆ ಅರ್ಧ ಲೀಟರ್ ನಂದಿನ ಹಾಲು ಉಚಿತವಾಗಿ ನೀಡುತ್ತೇವೆ ಎಂದು ಇತ್ತೀಚಿನ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ ಕರ್ನಾಟಕದ ಬಿಜೆಪಿ ಭರವಸೆ ನೀಡಿತ್ತು. ಇದು ಫ್ರೀಬಿ, ರೇವ್ಡಿ ಯೋಜನೆಗಳಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾರಿಗೆ ನೌಕರರು ಸಂಬಳ ಇಲ್ಲದೆ ದುಡಿಯುವಂತಹ ದಿನಗಳು ದೂರವಿಲ್ಲ: ಮಾಜಿ ಸಿಎಂ ಬೊಮ್ಮಾಯಿ

“ವಿಧಾನಸಭಾ ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಹೆಣ್ಣುಮಕ್ಕಳ ಖಾತೆಗೆ ಮಾಸಿಕ 1000 ರೂಪಾಯಿ ಜಮೆ ಮಾಡುವ ಲಾಡ್ಲಿ-ಬೆಹನಾ ಯೋಜನೆಯ ಘೋಷಣೆ ಮಾಡಿದ್ದಾರೆ. ಇದನ್ನು 3000 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದ್ದಾರೆ. ಇದು ಉಚಿತ ಯೋಜನೆ ಅಲ್ಲವೇ?” ಎಂದು ವಾಗ್ದಾಳಿ ನಡೆಸಿದ್ದಾರೆ.

“ಕೇಂದ್ರ ಸರ್ಕಾರದ್ದೇ ಯೋಜನೆಯಾಗಿರುವ ರೈತರ ಖಾತೆಗೆ ವಾರ್ಷಿಕ ಆರು ಸಾವಿರ ರೂಪಾಯಿಗಳನ್ನು ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ನಾನು ಐದು ಕಿಲೋ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಿದರೆ ಅದರಿಂದ ರಾಜ್ಯದ ಖಜಾನೆ ಬರಿದಾಗಲಿದೆ ಎನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಐದು ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡುವ ಪಿಎಂ ಗರೀಬ್ ಅನ್ನ ಕಲ್ಯಾಣ ಯೋಜನೆಯನ್ನು ಯಾವ ಗುಂಪಿಗೆ ಸೇರಿಸುತ್ತೀರಿ” ಎಂದು ಪ್ರಶ್ನಿಸಿದ್ದಾರೆ.

“ಉಚಿತ ಸ್ವರೂಪದ ಎಂಟು ಯೋಜನೆಗಳನ್ನು ಕೇಂದ್ರ ಸರ್ಕಾರ ಅಂದಾಜು 1.25 ಲಕ್ಷ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುತ್ತಿದೆ. ಉಚಿತ ಯೋಜನೆಗಳನ್ನು ವಿರೋಧಿಸುತ್ತಿರುವ ನೀವು ಈ ಯೋಜನೆಗಳನ್ನು ಹೇಗೆ ಸಮರ್ಥಿಸುತ್ತೀರಿ? ಡಬಲ್ ಎಂಜಿನ್ ಸರ್ಕಾರದ ಜನವಿರೋಧಿ ಆಡಳಿತದಿಂದ ಬೇಸತ್ತು ಹೋಗಿರುವ ಕರ್ನಾಟಕದ ಜನತೆ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಜನಾದೇಶವನ್ನು ನೀಡಿ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನುಡಿದಂತೆ ನಡೆಯುವ ಬದ್ಧತೆ ಹೊಂದಿರುವ ನಾವು ಕೊಟ್ಟ ಭಾಷೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

“ಬೆಲೆ ಏರಿಕೆ ಮತ್ತು ನಿರುದ್ಯೋಗಗಳಿಂದಾಗಿ ವಿಪರೀತ ಆರ್ಥಿಕ ಒತ್ತಡಕ್ಕೆ ಸಿಕ್ಕಿ ಕೈಖಾಲಿ ಮಾಡಿಕೊಂಡಿರುವ ಜನಸಾಮಾನ್ಯರನ್ನು ಆರ್ಥಿಕ ಹೊರೆಯಿಂದ ಪಾರು ಮಾಡಲು, ಸಾಲದ ಶೂಲದಿಂದ ಕೆಳಗಿಳಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಇಡೀ ದೇಶಕ್ಕೆ ಕರ್ನಾಟಕ ಮಾದರಿಯ ಆಡಳಿತದ ಅವಶ್ಯಕತೆ ಇದೆ” ಎಂದು ಹೇಳಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

Download Eedina App Android / iOS

X