ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ ಅವರು ಮೋದಿ ಫೋಟೋ ಇಟ್ಟುಕೊಂಡು ಚುನಾವಣೆಯಲ್ಲಿ ಗೆಲ್ಲುತ್ತಿದ್ದಾರೆ. ಅವರು ವೈಯಕ್ತಿಕ ವರ್ಚಸ್ಸಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು. ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದನಿದ್ದೇನೆ. ಅವರೂ ಪಕ್ಷ ಬಿಟ್ಟು ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸವಾಲು ಹಾಕಿದ್ದಾರೆ.
ತಮ್ಮ ವಿರುದ್ಧದ ಸಂಸದರ ಟೀಕೆಗೆ ಉತ್ತರ ನೀಡಿದ ಅವರು, “ನಾನು ಕಾಂಗ್ರೆಸ್ ಕಟ್ಟಾಭಿಮಾನಿ. ನಮ್ಮ ಇಡೀ ಕುಟುಂಬ ಕಾಂಗ್ರೆಸ್ ಬೆಂಬಲಿಸುತ್ತದೆ. ಯಾವುದೇ ಪಕ್ಷದ ಬೆಂಬಲ ಇಲ್ಲದೆ, ವೈಯಕ್ತಿಕವಾಗಿ ನಾನು ಲೋಕಸಭೆಗೆ ಸ್ಪರ್ಧಿಸುತ್ತೇನೆ. ನನಗೆ ಯಾರ ಆಶೀರ್ವಾದವೂ ಬೇಡ, ಜನರ ಆಶೀರ್ವಾದವೊಂದು ಇದ್ರೆ ಸಾಕು. ಅವರು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧರಿದ್ದಾರಾ” ಎಂದು ಪ್ರಶ್ನಿಸಿದ್ದಾರೆ.
“ನಾನು ಸಿದ್ದೇಶ್ವರ ಅವರಿಂದ ಸಂಸ್ಕಾರ ಕಲಿಯಬೇಕಿಲ್ಲ. ನಮ್ಮ ಅಪ್ಪ, ಅಜ್ಜ ಹಾಗೂ ಅವ್ವ ನಮ್ಮವ್ವ ಸಂಸ್ಕಾರ ಕಲಿಸಿದ್ದಾರೆ. ಬೇಕಾದರೆ ನಾನೇ ಕಲಿಸಿಕೊಡುವೆ. ನಾನು, ನಮ್ಮ ಅಪ್ಪ ಈವರೆಗೆ ಬಡ್ಡಿ ವ್ಯವಹಾರ ಮಾಡಿಲ್ಲ. ಅವರ ಕುಟುಂಬದ ಜೊತೆ ಕೈಗಡ ವ್ಯವಹಾರವಿತ್ತು ಅಷ್ಟೇ. ಅವರು ಒಂದಕ್ಕೆ ನಾಲ್ಕು ರೂಪಾಯಿ ಬಡ್ಡಿ ವಸೂಲಿ ಮಾಡಿ ಊರು ಹಾಳುಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಹಳೇ ದಾವಣಗೆರೆಯಲ್ಲಿ ಉದ್ಯಾನವನ್ನು ನೋಂದಣಿ ಮಾಡಿಕೊಟ್ಟಿರುವ ಪ್ರಕರಣ ಹೊರಬಂದಿದೆ. ಪಾಲಿಕೆ ಸದಸ್ಯರೊಬ್ಬರ ಅಕ್ಕ ಮತ್ತು ಅಪ್ಪ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 2021ರಲ್ಲಿ ಉದ್ಯಾನದ ಜಾಗವನ್ನು ಖಾತೆ ಮಾಡಿ 2022ರಲ್ಲಿ ನೋಂದಣಿ ಮಾಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಸಬ್ ರಿಜಿಸ್ಟರ್ ಮೇಲೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕಾರಣ. ಗಣಿಗಾರಿಕೆಯಲ್ಲಿ ನಾವು ಏನು ಮಾಡಿಲ್ಲ ಎಂದು ಹೇಳುವ ಅವರ ಮೇಲೆ 220 ಕೋಟಿ ಅಕ್ರಮ ದಾಖಲೆ ಇದೆ. ಬೇಕಾದರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಚರ್ಚೆಗೆ ಬರಲಿ” ಎಂದರು.