ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೆಲವೊಂದು ಅಧಿಕಾರಿಗಳು ಪ್ರಸ್ತುತ ದಿನಗಳಲ್ಲಿ ಲೋಕಾಯುಕ್ತ ಬಲೆಗೆ ಬೀಳುತ್ತಿರುವುದರಿಂದ, ಅಧಿಕಾರಿಗಳ ಭ್ರಷ್ಟತೆ ಸಾರ್ವಜನಿಕ ವಲಯದಲ್ಲಿ ತೀವ್ರತರವಾದ ಚರ್ಚೆಯನ್ನು ಎದುರಿಸುತ್ತಿದೆ. ಆದ್ದರಿಂದ ಅಧಿಕಾರಿಗಳು ಜನಸಾಮಾನ್ಯರ ರಕ್ತ ಹೀರುವ ಕೆಲಸವನ್ನು ಮಾಡಬೇಡಿ ಎಂದು ಶಾಸಕ ಸಮೃದ್ದಿ ವಿ ಮಂಜುನಾಥ ಹೇಳಿದರು.
ಮುಳಬಾಗಿಲು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿನ ಕೋಮುಲ್ ಕಚೇರಿಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಸಾರ್ವಜನಿಕರಿಂದ ಅಧಿಕಾರಿಗಳ ವಿರುದ್ಧ ಹಲವಾರು ರೀತಿಯ ದೂರುಗಳು ಕೇಳಿಬರುತ್ತಿವೆ. ಬಹಿರಂಗವಾಗಿ ಅಧಿಕಾರಿಗಳು ಜನರನ್ನು ಹಣಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಕೇಳಿಬರುತ್ತಿರುವ ವಿಷಯಗಳು ಇಲ್ಲಿಗೆ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಂತಹ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯನ್ನು ಅನುಭವಿಸುವುದು ಕಟ್ಟಿಟ್ಟ ಬುತ್ತಿ” ಎಂದರು.
“ನ್ಯಾಯಬೆಲೆ ಅಂಗಡಿಗಳಲ್ಲಿ ನ್ಯಾಯವೇ ಇಲ್ಲದಂತಾಗಿದೆ. ತಾಲೂಕಿನಲ್ಲಿ ಅತಿಹೆಚ್ಚು ಭ್ರಷ್ಟಾಚಾರವಾಗುತ್ತಿರುವುದೇ ಆಹಾರ ಇಲಾಖೆಯಲ್ಲಿ” ಎಂದು ಅಧಿಕಾರಿಗಳು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಮತ್ತು ಕೇಂದ್ರದಿಂದ ಎಷ್ಟು ಅಕ್ಕಿ ಬರುತ್ತಿದೆ ಎಂಬುದರ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಸ್ಪಷ್ಟ ಮಾಹಿತಿ ನೀಡಿದ ಬಳಿಕ ಭ್ರಷ್ಟಾಚಾರವಾಗಿರುವುದು ಶಾಸಕರ ಕೋಪಕ್ಕೆ ಪ್ರಮುಖ ಕಾರಣವಾಯಿತು.
“ಅಧಿಕಾರಿಗಳು ರಾಜಕಾರಣಕ್ಕೆ ಇಳಿದು ಇಲ್ಲಸಲ್ಲದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡುವವರು ಯಾರು” ಎಂದು ಪ್ರಶ್ನಿಸಿದರು.
“ಅಧಿಕಾರಿಗಳು ರಾಜಕಾರಣ ಮಾಡಿಕೊಂಡು ಸುತ್ತಾಡಿಕೊಂಡಿದ್ದರೆ ಅಂತಹವರ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.
“ಅಬಕಾರಿ ಇಲಾಖೆಯಲ್ಲಿ ಯಾವುದೇ ರೀತಿಯ ಕೆಲಸ ಕಾರ್ಯ ಗಳು ನಡೆಯುತ್ತಿಲ್ಲ. ಶಾಸಕರಿಗೆ ಬಂದ ದೂರುಗಳು ಇಲಾಖೆಗೆ ಬರುವುದಿಲ್ಲ. ಜನಸಾಮಾನ್ಯರು ದೂರುಗಳ ಮೇಲೆ ದೂರುಗಳನ್ನು ನೀಡಿದರೂ ಕೂಡ ಅಬಕಾರಿ ಇಲಾಖೆ ಮಾತ್ರ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವುದನ್ನು ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಇದೇ ರೀತಿ ಅಧಿಕಾರಿಗಳು ನಿರ್ಲಕ್ಷದಿಂದ ಕೆಲಸ ಮಾಡಿದರೆ ಅಂತಹವರು ಬೇರೆ ಕಡೆಗೆ ಹೊರಟು ಹೋಗಿ” ಎಂದು ಕಿಡಿಕಾರಿದರು.
“ಯುಎನ್‌ಆರ್‌ಟಿಸಿ ವ್ಯವಸ್ಥಾಪಕ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಕಿರುಕುಳ ನೀಡುತ್ತಿದ್ದಾರೆಂದು ಮಾಹಿತಿ ಇದೆ. ಕೆಲಸ ಮಾಡುವವರನ್ನು ಏಕವಚನದಲ್ಲಿ ಮಾತನಾಡಿಸುವುದು, ಬಯ್ಯುವುದು ಹಾಗೂ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದಾರೆಂಬುದುದು ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ನೇಮಕ
“ಬಸ್‌ಗಳ ಡೀಸೆಲ್ ಕಡಿಮೆಗೊಳಿಸಬೇಕೆಂದು ಚಾಲಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಕಾರಣ ಹಳೆ ಬಸ್‌ಗಳಿಗೆ ಅಧಿಕವಾಗಿ ಡೀಸೆಲ್ ಬೇಕಾಗುತ್ತಿದೆ. ಹೊಸ ಬಸ್‌ಗಳನ್ನು ಕೊಟ್ಟು ಚಾಲಕರ ಮೇಲೆ ಒತ್ತಡ ಹಾಕಿದರೆ ಕಡಿಮೆ ಪ್ರಮಾಣದಲ್ಲಿ ಡೀಸೆಲ್ ಬಳಕೆ ಆಗುತ್ತದೆ. ಇಂತಹ ಸನ್ನಿವೇಶಗಳಿಗೆ ಅವಕಾಶ ಮಾಡಿಕೊಡಬೇಡಿ” ಎಂದು ಸೂಚನೆ ನೀಡಿದರು.
ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆ ಮತ್ತು ಅನುದಾನಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡರು.
ತಹಶೀಲ್ದಾರ್ ವಿ ಗೀತಾ, ತಾ.ಪಂ ಇಒ ಸರ್ವೇಶ್, ನಗರಸಭೆ ಪೌರಾಯುಕ್ತ ಶ್ರೀಧರ್ ಸೇರಿದಂತೆ ಇತರರು ಇದ್ದರು.