ಕೊಪ್ಪಳ ಜಿಲ್ಲಾಡಳಿತ ಕಚೇರಿಯ ಸಮೀಪದಲ್ಲಿರುವ ಮಂಗಳಾಪುರದಲ್ಲಿ ಶವ ಸಂಸ್ಕಾರಕ್ಕೆ ಸ್ಮಶಾನವಿಲ್ಲದ ಕಾರಣ ಗ್ರಾಮದ ಶಾಲೆಯ ಆವರಣದಲ್ಲಿಯೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಲು ತಯಾರಿ ನಡೆಸಿದ ಗ್ರಾಮಸ್ಥರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.
ಗ್ರಾಮದಲ್ಲಿ ಸತ್ತವರ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡುವಂತಾಯಿತು. ಸವಂತ್ರಮ್ಮ ಮೆಳ್ಳಿಕೇರಿ(80) ಎಂಬುವವರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ನಡೆಸಲು ಸ್ಮಶಾನವಿಲ್ಲದ್ದರಿಂದ ಗ್ರಾಮ ಪಂಚಾಯಿತಿ ಹಾಗೂ ತಹಶೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಗ್ರಾಮಕ್ಕೆ ಸ್ಮಶಾನ ಜಾಗ ಸೌಲಭ್ಯ ಕಲ್ಪಸಿಕೊಡುವಂತೆ ಗ್ರಾಮ ಪಂಚಾಯಿತಿ, ತಾಲೂಕು ತಹಶೀಲ್ದಾರರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಬೇಡಿಕೆ ಈಡೇರಲಿಲ್ಲ. ಮೃತ ಸಾವಂತ್ರಮ್ಮನಿಗೆ ಸ್ವಂತ ಜಮೀನೂ ಇಲ್ಲ. ಹಾಗಾಗಿ ಶಾಲಾ ಜಾಗದಲ್ಲಿಯೇ ಅಂತ್ಯಕ್ರಿಯೆ ಮಾಡಲು ಸಿದ್ದತೆ ನಡೆಸಿದ್ದೇವೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ನಾಲತವಾಡ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದ ವೈದ್ಯರಿಗೆ ಸನ್ಮಾನ ಸಮಾರಂಭ
ವಿಷಯ ತಿಳಿದ ತಹಶೀಲ್ದಾರ್ ವಿಠಲ್ ಚೌಗುಲಾ ಹಾಗೂ ಪೊಲೀಸರು ಗ್ರಾಮಕ್ಕೆ ಧಾವಿಸಿದ್ದು, ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಭೇಟಿ ಕೊಟ್ಟ ಅಧಿಕಾರಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ನಂತರ ಪೊಲೀಸರು ಹಾಗೂ ತಹಶೀಲ್ದಾರರ ಮನವೊಲಿಕೆಯಿಂದ ಹಳ್ಳಕ್ಕೆ ತೆರಳುವ ರಸ್ತೆ ಬದಿ ಶವ ಅಂತ್ಯಕ್ರಿಯೆ ನೆರವೇರಿಸಲಾಯಿತು.