ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹಾಲು ಸಂಗ್ರಹ ಹಾಗೂ ಮಾರಾಟದಲ್ಲಿ ಮತ್ತೆ ದಾಖಲೆ ಬರೆದಿದೆ. ಇತ್ತೀಚಿಗಷ್ಟೇ ದಿನವೊಂದರಲ್ಲಿ 1 ಕೋಟಿ ಲೀಟರ್‌ಗೂ ಅಧಿಕ ಪ್ರಮಾಣದ ಹಾಲು ಸಂಗ್ರಹಿಸಿದ್ದ ಕೆಎಂಎಫ್, ಜುಲೈ ತಿಂಗಳಿನಲ್ಲಿ ಪ್ರತಿನಿತ್ಯವೂ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸಿ ಮತ್ತೊಂದು ದಾಖಲೆ ನಿರ್ಮಿಸಿದೆ.
ಪ್ರಸ್ತುತ ಸಂಸ್ಥೆಯ ಹದಿನಾರು ಒಕ್ಕೂಟಗಳಲ್ಲಿ ನಿತ್ಯವೂ ಸರಾಸರಿ 98.26 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಈ ತಿಂಗಳಲ್ಲಿ ಪ್ರತಿದಿನವೂ 1 ಕೋಟಿ ಕೆಜಿ ಹಾಲು ಸಂಗ್ರಹವಾಗುತ್ತಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 96.74 ಲಕ್ಷ ಕೆಜಿ ಹಾಲು ಸಂಗ್ರಹವಾಗಿತ್ತು. ಸಂಗ್ರಹಗೊಳ್ಳುವ ಹಾಲಿನಲ್ಲಿ ಅರ್ಧದಷ್ಟು ಮಾರಾಟವಾಗುತ್ತಿದ್ದು, ಕಳೆದ ವಾರದಲ್ಲಿ ನಿತ್ಯವೂ ಸರಾಸರಿ 46 ಲೀ. ಮಾರಾಟ ಕಂಡಿದೆ. ಉಳಿದ ಹಾಲು ಸಂಸ್ಥೆಯ ಇತರ ಉತ್ಪನ್ನಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಮೊದಲ ಸ್ಥಾನದಲ್ಲಿ ಬಮೂಲ್
ಕೆಎಂಎಫ್ 16 ಒಕ್ಕೂಟಗಳನ್ನು ಹೊಂದಿದ್ದು, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳನ್ನು ಒಳಗೊಂಡಿರುವ ‘ಬಮುಲ್’ ಒಕ್ಕೂಟವು ಹೆಚ್ಚು ಹಾಲು ಸಂಗ್ರಹ ಹಾಗೂ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಬಮೂಲ್ ನಿತ್ಯವೂ ಸರಾಸರಿ 17.18 ಲಕ್ಷ ಕೆಜಿ ಹಾಲು ಸಂಗ್ರಹಿಸುತ್ತಿದ್ದು, 9.40 ಲಕ್ಷ ಲೀ. ಪ್ರಮಾಣದಷ್ಟು ಮಾರಾಟ ಮಾಡುತ್ತಿದೆ. ರಾಜಧಾನಿಯಲ್ಲಿ ಹಾಲು ಹಾಗೂ ಮೊಸರು ಮಾರಾಟ 22 ಲಕ್ಷ ಲೀಟರ್‌ಗೂ ಅಧಿಕ ಮಾರಾಟವಾಗುತ್ತಿದೆ.
ಬೆಂಗಳೂರು ಹೊರತುಪಡಿಸಿ ಹಾಸನ, ಮಂಡ್ಯ, ತುಮಕೂರು, ಮೈಸೂರು ಹಾಗೂ ಶಿವಮೊಗ್ಗ ಒಕ್ಕೂಟಗಳಲ್ಲಿ ಹೆಚ್ಚಿನ ಹಾಲು ಸಂಗ್ರಹವಾಗುತ್ತಿದೆ. ಹಸುಗಳ ಸಂಖ್ಯೆ ಕಡಿಮೆ ಇರುವುದರಿಂದ ಕಲಬುರಗಿ ಒಕ್ಕೂಟದಲ್ಲಿ 0.60 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಈ ಪೈಕಿ ಶೇ.95 ಮಾರಾಟವಾಗುತ್ತಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇವನಹಳ್ಳಿ ಐತಿಹಾಸಿಕ ಗೆಲುವಿಗೆ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಿದ್ದರಾಮಯ್ಯ ಕಾರಣ
ರಾಜ್ಯದ ವಿವಿಧ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಂದಿನಿ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಹೆಚ್ಚುತ್ತಿದೆ. ಕೆಲ ತಿಂಗಳ ಹಿಂದೆ ಪರಿಚಯಿಸಿರುವ ದೋಸೆ ಹಿಟ್ಟು ಹೆಚ್ಚು ಜನಪ್ರಿಯವಾಗಿದೆ.
ತಿರುಪತಿ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ
ನಂದಿನಿ ಹಾಲು/ಮೊಸರು ನಂತರ ಕೆಎಂಎಫ್ ತುಪ್ಪ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ. ಇತರ ಸಂಸ್ಥೆಗಳಿಗಿಂತ ನಂದಿನಿ ಬ್ರ್ಯಾಂಡಿನ ತುಪ್ಪ ಅಧಿಕ ಸ್ವಾದ ಹಾಗೂ ಗುಣಮಟ್ಟವನ್ನು ಹೊಂದಿದೆ. ಇದೇ ಕಾರಣದಿಂದ ತಿರುಪತಿ ಶ್ರೀನಿವಾಸ ದೇವಸ್ಥಾನದ (ಟಿಟಿಡಿ) ಲಾಡು ಪ್ರಸಾದಕ್ಕೆ ನಂದಿನಿ ತುಪ್ಪವನ್ನೇ ಬಳಸಲಾಗುತ್ತಿದೆ. ಇದರಿಂದಾಗಿ ಲಡ್ಡುವಿನ ಘಮ ಮತ್ತಷ್ಟು ಹೆಚ್ಚಿದೆ. ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿನ ಸೂಪರ್ ಮಾರ್ಕೆಟ್‌ಗಳಲ್ಲಿ ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ ಬಂದಿದೆ.