ಮಣಿಪುರದ ಇಬ್ಬರು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಕಾರಣ ಕೇವಲ ಕಾಮ ಮಾತ್ರವಲ್ಲ, ಜನಾಂಗೀಯ ದ್ವೇಷ ಕಾರಣ. ಇಂತಹ ದುರ್ಘಟನೆಗಳು ನನ್ನವರಲ್ಲದವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯಗಳಾಗಿವೆ ಎಂದು ಸಾಮಾಜಿಕ ಚಿಂತಕ ಶಿವಸುಂದರ್ ಹೇಳಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಉಡುಪಿಯಲ್ಲಿ ‘ಸಮಾನ ಮನಸ್ಕ ವೇದಿಕೆ’ ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಮಣಿಪುರದ ಹಿಂಸಾಚಾರ ಮತ್ತು ದೌರ್ಜನ್ಯಗಳು ಆಕಸ್ಮಿಕವಲ್ಲ. ಅದರ ಹಿಂದೆ ಮತೀಯ ರಾಜಕಾರಣದ ದುರುದ್ದೇಶವಿದೆ. ಪ್ರಧಾನಿ ಮೌನವನ್ನ ಆಯುಧ ಮಾಡಿಕೊಂಡಾಗ, ನಾವು ಮಾತನ್ನು ಆಯುಧ ಮಾಡಿಕೊಳ್ಳಬೇಕು. ಮಾತನಾಡುವ ಮೂಲಕ, ಪ್ರತಿಭಟನೆಗಳನ್ನು ಮಾಡುವ ಮೂಲಕ ದೇಶವನ್ನು ಎಚ್ಚರಿಸಬೇಕು” ಎಂದು ಕರೆಕೊಟ್ಟರು.
“ಘಟನೆ ನಡೆದಾಗ ಏನಾಯಿತು ಅಂತ ತಿಳಿದುಕೊಳ್ಳುವುದು ಮಾತ್ರವಲ್ಲ. ಯಾಕಾಯಿತು ಎಂಬುದನ್ನು ತಿಳಿದುಕೊಳ್ಳಬೇಕು. ಮೇ 4ರಂದು ನಡೆದ ದುರಂತ ಘಟನೆ ಬೆಳಕಿಗೆ ಬಂದಿದ್ದು 80 ದಿನಗಳ ಬಳಿಕ. ಇಂತಹ ನೂರಾರು ಘಟನೆಗಳು ಮಣಿಪುರದಲ್ಲಿ ನಡೆಯುತ್ತಿವೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವಂತೆ ಮಣಿಪುರದ ಜನರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಮೊದಲಿಗೆ ಸುಪ್ರೀಂ ಕೋರ್ಟ್ ಕೂಡ ಆ ಜನರ ಮಾತಿಗೆ ಕಿವಿಗೊಡಲಿಲ್ಲ. ಸುಪ್ರೀಂ ಕೋರ್ಟ್ ಒಳಗೊಂಡಂತೆ ಇಡೀ ದೇಶ ಎಚ್ಚರಗೊಳ್ಳಲು ದುರಂತ ಘಟನೆಯೇ ನಡೆಯಿತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಂತಹ ದುರ್ಘಟನೆಗಳ ಹಿಂದೆ ಇದ್ದದ್ದು ಕೇವಲ ಕಾಮ ಮಾತ್ರವಲ್ಲ. ದ್ವೇಷ, ಅಸೂಯೆಯೂ ಇದೆ. ಇಂತಹ ಹಲವು ಘಟನೆಗಳು ಹಿಂದೆಯೂ ನಡೆದಿವೆ. ಇದೆಲ್ಲವೂ ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ. ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದಾಗ 900 ಮಂದಿ ಪುರುಷರು ಮೆರವಣಿಗೆ ಹೋಗುತ್ತಿದ್ದರು. ಅವರಾರಿಗೂ ಆ ಹೆಣ್ಣು ಮಕ್ಕಳ ಮೇಲೆ ‘ಅಯ್ಯೋ’ ಅನ್ನಿಸಲಿಲ್ಲ. ಇದಕ್ಕೆ ಕಾಮ ಮಾತ್ರವಲ್ಲ ಕಾರಣವಲ್ಲ. ದ್ವೇಷವೂ ಕಾರಣ. ಮಣಿಪುರದ ವಿಚಾರದಲ್ಲಿ ಪ್ರಧಾನಿಯ ಮೌನದ ಹಿಂದೆ ಇಡೀ ಸರ್ಕಾರವಿದೆ. ಮತೀಯ ರಾಜಕಾರಣವಿದೆ” ಎಂದು ಅವರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ?: ಆರಗ ಜ್ಞಾನೇಂದ್ರರಂತಹ ಅರೆ ಜ್ಞಾನಿಗಳು ಶಾಸಕರಾಗಿರುವುದೇ ದುರ್ದೈವ: ರಮೇಶ್ ಬಾಬು
“ಇಡೀ ಮಣಿಪುರದಲ್ಲಿ ಮೈಥೇಯಿ ಜನಾಂಗ ಪ್ರಬಲವಾಗಿದೆ. ಅವರು ಹಿಂದು ಧರ್ಮದ ಭಾಗವಾಗುವ ಮೊದಲು ಎಲ್ಲರನ್ನೂ ಒಳಗೊಳ್ಳುತ್ತಿದ್ದರು. ಆದರೆ, ಅವರು ಯಾವಾಗ ಬ್ರಾಹ್ಮಣ್ಯದ ಧರ್ಮ ಸೇರಿದರೂ, ಅಂದಿನಿಂದ ತಮ್ಮ ಸಮುದಾಯ ಅಲ್ಲವರನ್ನು ದ್ವೇಷಿಸಲು ಆರಂಭಿಸಿದರು. ಇಂದು ಅವರು ಕುಕಿ, ನಾಗ ಸಮುದಾಯಗಳನ್ನು ದ್ವೇಷಿಸುತ್ತಿದ್ದಾರೆ” ಎಂದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಝನೇಟ್ ಬರ್ಬೋಝಾ, “ಬೊಲೊ ಭಾರತ್ ಮಾತಕಿ ಜೈ ಎಂದು ಪ್ರಧಾನಿ ನರೇಂದ್ರ ಮೋದಿಗಳು ಯಾವಾಗಲೂ ಹೇಳುತ್ತಿರುತ್ತಾರೆ. ನರೇಂದ್ರ ಮೋದಿಯವರೇ ಮಹಿಳೆಯರನ್ನು ನಗ್ನವಾಗಿ ನೆರವಣಿಗೆ ಮಾಡಿದ್ದಕ್ಕೆ ಭಾರತ್ ಮಾತಕಿ ಜೈ ಎಂದು ಕೂಗುವುದೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.