ಗುಂಡು ಮಗು ಬೇಕೆಂಬ ಪುರುಷಾಹಂಕಾರದ ಹಪಾಹಪಿಯಿಂದ ವಿಕೃತ ತಂದೆಯೊಬ್ಬ ತನ್ನ 7 ವರ್ಷದ ಮಗಳನ್ನು ಕಾಲುವೆಗೆ ಎಸೆದು ಕೊಂದಿರುವ ಹೃದಯವಿದ್ರಾವಕ, ಅಮಾನುಷ ಘಟನೆ ಗುಜರಾತ್‌ನಲ್ಲಿ ನಡೆದಿದೆ.
ಗುಜರಾತ್‌ನ ಖೇಡಾ ಜಿಲ್ಲೆಯ ಕಪಡ್ವಂಜ್ ತಾಲ್ಲೂಕಿನ ಚೆಲಾವತ್ ಗ್ರಾಮದಲ್ಲಿ ಜುಲೈ 10ರಂದು ಘಟನೆ ನಡೆದಿದ್ದು, ಇದೀಗ ಆರೋಪಿಯ ಪತ್ನಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಬಳಿಕ, ಆರೋಪಿ ವಿಜಯ್ ಸೋಲಂಕಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 10ರಂದು ರಾತ್ರಿ ದೀಪೇಶ್ವರಿ ದೇವಾಲಯಕ್ಕೆ ತೆರಳುತ್ತಿದ್ದ ಸಮಯದಲ್ಲಿ ಬಾಲಕಿ ಭೂಮಿಕಾಳನ್ನು ಆರೋಪಿ ಕೊಂದಿದ್ದಾನೆ. ಆರೋಪಿ ವಿಜಯ್ ತನಗೆ ಗಂಡು ಮಗು ಇಲ್ಲವೆಂಬ ಕಾರಣಕ್ಕೆ ಅತೃಪ್ತನಾಗಿದ್ದ. ಆದ್ದರಿಂದಲೇ, ಆಗಾಗ್ಗೆ ತನ್ನ ಮಗಳ ಮೇಲೆ ಸಿಡುಕುಗೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಘಟನೆ ನಡೆದ ರಾತ್ರಿ, ಆರೋಪಿ ವಿಜಯ್ ತನ್ನ ಪತ್ನಿ ಅಂಜನಾಬೆನ್ ಮತ್ತು ಮಗಳು ಭೂಮಿಕಾಳನ್ನು ಬೈಕ್‌ನಲ್ಲಿ ದೇವಸ್ತಾನಕ್ಕೆ ಕರೆದೊಯ್ಯುತ್ತಿದ್ದನು. ನರ್ಮದಾ ಕಾಲುವೆಯ ಮೇಲಿನ ವಾಘಾವತ್ ಸೇತುವೆ ಮೇಲೆ ಆರೋಪಿ ಬೈಕ್ ನಲ್ಲಿಸಿದ್ದಾನೆ. ತಕ್ಷಣವೇ, ಮಗಳನ್ನು ಕಾಲುವೆಗೆ ಎಸೆದಿದ್ದಾನೆ. ಘಟನೆ ಬಗ್ಗೆ ಯಾರಿಗೂ ಹೇಳದಂತೆ ಪತ್ನಿಗೆ ಬೆದರಿಕೆ ಹಾಕಿದ್ದಾನೆ” ಎಂದು ಪೊಲೀಸರು ವಿವರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮತ್ತೆ ಬಂದ ನಾರಾಯಣ ಮೂರ್ತಿ; 70 ಗಂಟೆ ಆಯ್ತು, ಈಗ 100 ಗಂಟೆ ಕೆಲಸದ ಸರದಿ
ಬಾಲಕಿಯ ಮೃತದೇಹವು ಜುಲೈ 11ರಂದು ಕಾಲುವೆಯಲ್ಲಿ ಪತ್ತೆಯಾಗಿದೆ. ಮೃತದೇಹ ಪತ್ತೆಯಾದಾಗ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ, ಮಗಳನ್ನು ಕಳೆದುಕೊಂಡು ನೊಂದಿದ್ದ ತಾಯಿ ಅಂಜನಾಬೆನ ಅವರು ತನ್ನ ಮಗಳನ್ನು ಪತಿಯೇ ಕೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಆಕೆ ನೀಡಿದ ದೂರಿನ ಮೇಲೆ ಹೊಸದಾಗಿ ಪ್ರಕರಣ ದಾಖಲಿಸಿಕೊಂಡ ಅತರ್ಸುಬಾ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದ್ದಾರೆ. “ವಿಚಾರಣೆಯ ಸಮಯದಲ್ಲಿ ಸೋಲಂಕಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತನಗೆ ಹೆಣ್ಣು ಮಕ್ಕಳು ಬೇಡ, ಗಂಡು ಮಗು ಬೇಕೆಂದು ಆತ ಹೇಳಿಕೊಂಡಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.