ತಾಯಿ ಮೇಲೆ ಆಣೆಯಿಟ್ಟ ಬೊಮ್ಮಾಯಿಯಿಂದ ಪಂಚಮಸಾಲಿಗಳಿಗೆ ಮೋಸ; ಸ್ವಾಮೀಜಿಯೇಕೆ ಹೀಗೆ ಮಾಡಿದರು?

Date:

Advertisements
ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಂದು ಸಮುದಾಯದ ಮೀಸಲಾತಿ ಕಿತ್ತುಕೊಂಡು 2% ಹೆಚ್ಚಳ ಮಾಡಿದ್ದಾರೆ. ಅದರಲ್ಲೂ 2% ಹೆಚ್ಚಿಸಿದ್ದು ಕೇವಲ ಪಂಚಮಸಾಲಿಯವರಿಗಾಗಿಯೇ? ಇಲ್ಲ! ಇದರಲ್ಲಿ ಇಡೀ ಲಿಂಗಾಯತ ಸಮುದಾಯದ ಉಳಿದ 101 ಪಂಗಡಗಳನ್ನು, ಜೈನರನ್ನು (ದಿಗಂಬರ) ಹಾಗೂ ಕ್ರೈಸ್ತರನ್ನು ಸೇರಿಸಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ರಾಜಕೀಯ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಸಿಕ್ಕಿದೆಯೋ, ಇಲ್ಲವೋ ಎನ್ನುವ ಚರ್ಚೆಯನ್ನು ಪಕ್ಕಕ್ಕಿಡೋಣ. ಹೋರಾಟದ ಕಡೆ ಮುರುಗೇಶ್ ನಿರಾಣಿ, ಸಿ ಸಿ ಪಾಟೀಲ್ ಇತ್ಯಾದಿ ಸಮುದಾಯದ ರಾಜಕಾರಣಿಗಳು ಇಣುಕಿಯೂ ನೋಡದಿದ್ದರೂ, ಹರಿಹರ ಪೀಠ ಈ ಹೋರಾಟದಿಂದ ಬಹುತೇಕ ದೂರವೇ ಉಳದಿದ್ದರೂ ಇಡೀ ಪಂಚಮಸಾಲಿಗರು ಒಂದಾಗಿ ‘ಪಂಚಮಸಾಲಿ ಹೋರಾಟ ಸಮಿತಿ’ಯ ನೇತೃತ್ವದಲ್ಲಿ ಎರಡು ವರ್ಷ ಹೋರಾಡಿದ್ದು ಸಾಮಾನ್ಯ ಸಂಗತಿಯಲ್ಲ.

ಪಂಚಮಸಾಲಿಗರ ಬೇಡಿಕೆ ಇದ್ದದ್ದು ಪ್ರವರ್ಗ 2Aಗೆ ಸೇರಲು! ಅದಕ್ಕಾಗಿಯೇ ಎರಡು ವರ್ಷ ಬೀದಿ ಹೋರಾಟ, ಪಾದಯಾತ್ರೆ, ಸಮಾವೇಶಗಳು ಹಾಗೂ ಸತ್ಯಾಗ್ರಹ ಮಾಡಿದರು. ಆದರೆ ಕೊನೆಗೆ ಪಡದಿದ್ದೇನು? ಅವರು ಈ 2 ಪ್ರತಿಶತ ಮೀಸಲಾತಿಗಾಗಿಯೇ ಎರಡು ವರ್ಷ ಹೋರಾಡಿದ್ದಾ? ‘ಮುಖ್ಯಮಂತ್ರಿ ಬೊಮ್ಮಾಯಿ ತಾಯಿಯ ಮೇಲೆ ಆಣೇ ಮಾಡಿ ನಿಮಗೆ ಪ್ರವರ್ಗ 2A ಅಡಿಯಲ್ಲಿ ಖಂಡಿತ ಸೇರಿಸುವೆ’ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎದುರುಗಡೆ ಆಣೆ ಇಟ್ಟಿದ್ದು ಏನಾಯ್ತು? (ಬೊಮ್ಮಾಯಿ ಆಣೆ ಇಟ್ಟ ಮಾತು ಸ್ವತಃ ಸ್ವಾಮೀಜಿಯೇ ಸಾರ್ವಜನಿಕವಾಗಿ ಹತ್ತಾರು ಸಲ ಹೇಳಿದ್ದು) ಬೊಮ್ಮಾಯಿ ಮಾತಿಗೆ ತಪ್ಪಿದರೆ ಅವರಿಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆಂದು ಸ್ವಾಮೀಜಿಯವರು ಹೂಂಕರಿಸಿದರು.

ಇದನ್ನು ಓದಿದ್ದೀರಾ?: ಲಿಂಗಾಯತ ಪಂಚಮಸಾಲಿ ಉಪವರ್ಗಕ್ಕೆ ಮೀಸಲಾತಿ ಸಿಕ್ಕಿತೇ?

Advertisements

ಮುಖ್ಯಮಂತ್ರಿ ಬೊಮ್ಮಾಯಿ ಮಾಧ್ಯಮಗಳೆದುರು ಪಂಚಮಸಾಲಿ ಸಮುದಾಯ ಒಳಗೊಂಡಂತೆ ಇಡೀ ವೀರಶೈವ ಲಿಂಗಾಯತರನ್ನು 3B ಇಂದ ಹೊಸದಾಗಿ ಸೃಷ್ಟಿಸಿದ ಪ್ರವರ್ಗ 2D ಗೆ ಸೇರಿಸಿದ್ದೇವೆ ಮತ್ತು ಮೊದಲು 5% ಮೀಸಲಾತಿ ಇತ್ತು, ಈಗ ನಾವು 2% ಹೆಚ್ಚಿಸಿ, ಒಟ್ಟಾರೆ 7% ಮಾಡಿದ್ದೇವೆಂದು ಹೇಳಿದರು.

ಹೋರಾಟದ ಮುಂದಾಳುಗಳಾದ ಯತ್ನಾಳ್, ಸ್ವಾಮೀಜಿ ಮತ್ತು ವಿಜಯಾನಂದ ಕಾಶಪ್ಪನವರ್ ಸೇರಿಕೊಂಡು ಮರುದಿನ ಪ್ರೆಸ್ ಮೀಟ್ ಕರೆದಿದ್ದರು. ಬಹುತೇಕರು ಸರ್ಕಾರದ ಈ ನಿರ್ಧಾರವನ್ನು ಒಕ್ಕೊರಲಿನಿಂದ ತಿರಸ್ಕರಿಸುತ್ತಾರೆಂದು ಭಾವಿಸಿದ್ದರು. ಆದರೆ ಮಾಧ್ಯಮಗಳೆದುರು ಸ್ವಾಮೀಜಿಯವರು ಆಡಿರುವ ಮಾತುಗಳು ಕೇಳಿ ಎಲ್ಲರೂ ಶಾಕ್ ಆದರು. ಆ ಪ್ರೆಸ್ ಮೀಟ್ ನಲ್ಲಿ ಸ್ವಾಮಿಯವರನ್ನು ಹಾಗೂ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರಾಡಿದ ಮಾತುಗಳು, ಅವರ ದೇಹಭಾಷೆ, ಅವರ ಮುಖಭಾವ ಸಪ್ಪೆ ಆಗಿದ್ದು ಎದ್ದು ಕಾಣುತ್ತಿತ್ತು. ಅಲ್ಲಿ ಅವರ ಅಸಹಾಯಕತೆ ಕಾಣುತ್ತಿತ್ತು. ಅವರನ್ನು ಪ್ರಾಯಶಃ ಹೆದರಿಸಿಯೋ ಅಥವಾ ಬೇರೆ ತರಹ ಮ್ಯಾನೇಜ್ ಮಾಡಿಯೋ ಮೋದಿ, ಬಿಜೆಪಿ ಮತ್ತು ಬೊಮ್ಮಾಯಿ ಗುಣಗಾನವನ್ನು ಅವರಿಂದ ಒತ್ತಾಯದಿಂದ ಮಾಡಿಸಿದಂತಿತ್ತು; ಸರ್ಕಾರದ ಆದೇಶವನ್ನು ಅವರನ್ನು ಸ್ವಾಗತಿಸಲು ಹೇಳಿ ಕೊಟ್ಟಂತಿತ್ತು. ಇಲ್ಲದಿದ್ದರೆ ನಾವೆಲ್ಲರೂ ಬಲ್ಲಂತ ಸ್ವಾಮೀಜಿ ಹೀಗೆ ‘ನಾವು ಯುದ್ಧದಲ್ಲಿ ಗೆದ್ದಿದೆವೆಂದು’ ಹುಸಿ ಮಾತನಾಡುತ್ತಿರಲಿಲ್ಲ!

ಪಂಚಮಸಾಲಿ ಹೋರಾಟ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತ್ರ ಸರ್ಕಾರದ ಆದೇಶ ಮತ್ತು ಸ್ವಾಮೀಜಿ ಹಾಗೂ ಯತ್ನಾಳ್ ನಿಲುವನ್ನು ಅದೇ ಪ್ರೆಸ್ ಮೀಟ್ ನಲ್ಲಿ ವಿರೋಧಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆಂದು ಘೋಷಿಸಿದರು. ಪಕ್ಕದಲ್ಲೇ ಕೂತಿದ್ದ ಯತ್ನಾಳ್ ರಾಗಲಿ, ಸ್ವಾಮೀಜಿ ಅವರಾಗಲಿ ಅವರನ್ನು ತಡೆಯುವ ಕನಿಷ್ಠ ಪ್ರಯತ್ನವನ್ನೂ ಮಾಡದಿದ್ದದ್ದೂ ಸ್ವಾಮೀಜಿಯವರ ಅಸಹಾಯಕತೆ ಸ್ಪಷ್ಟಪಡಿಸಿತ್ತು.

panchamasali 21647610533

ಕೇವಲ ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾರದೋ ಕಿತ್ತುಕೊಂಡು 2% ಹೆಚ್ಚಳ ಮಾಡಿದ್ದಾರೆ. ಅದು ಈ 2 ಪ್ರತಿಶತವಾದರು ಹೆಚ್ಚಿಸಿದ್ದು ಕೇವಲ ಪಂಚಮಸಾಲಿಗರಿಗಾಗಿಯೇ? ಅದು ಇಲ್ಲ! ಇದರಲ್ಲಿ ಇಡೀ ಲಿಂಗಾಯತ ಸಮುದಾಯದ ಉಳಿದ 101 ಪಂಗಡಗಳನ್ನು, ಜೈನರನ್ನು (ದಿಗಂಬರ) ಹಾಗೂ ಕ್ರೈಸ್ತರನ್ನು ಸೇರಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯತ್ನಾಳ್ ಸೇರಿಕೊಂಡು, ಸ್ವಾಮೀಜಿಯವರನ್ನು ಬಳಸಿಕೊಂಡು ಇಡೀ ಪಂಚಮಸಾಲಿಗರಿಗೆ ಕಲರ್ ಕಲರ್ ಮಕ್ಮಲ್ ಟೋಪಿಗಳು ಹಾಕಿದ್ದಾರೆ. ಬಿಜೆಪಿ ಸರ್ಕಾರ ದುಡಿದುಣ್ಣುವ, ರೈತಾಪಿಗಳಾದ ಪಂಚಮಸಾಲಿಗರಿಗೆ ಹೀಗೆ ಮೋಸ ಮಾಡಬಾರದಿತ್ತು. ಸರ್ಕಾರಕ್ಕೆ ನಾವು ಕೇಳಿದ್ದೇನು? ಈಗ ನೀವು ಕೊಟ್ಟಿದ್ದೇನು? ಸ್ವಾಮೀಜಿಯವರೇ ಮತ್ತು ಯತ್ನಾಳ್ ಅವರೇ ನಮಗೇನು ಸಿಕ್ಕಿದೆ ಎಂದು ನಾವು ಸಂಭ್ರಮಾಚರಣೆ ಮಾಡಬೇಕು? ಸರ್ಕಾರದ ಆದೇಶದಿಂದ ನಮಗಾದ ಉಪಯೋಗವೇನೆಂದು ಸಮುದಾಯದ ಜನಸಾಮಾನ್ಯರು ಕೇಳಿದರೆ ಎಲ್ಲರೂ ನಿರುತ್ತರ ಆಗುತ್ತಾರೆ. ಆದರೀಗ ಈ ಮೋಸವನ್ನು ಕೇಳುವವರ್ಯಾರು? ಹೋರಾಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದೇವೆಂದು ಘೋಷಿಸಿ ಸಂಭ್ರಮಾಚರಣೆಯಲ್ಲಿರುವವರಂತು ಕೇಳುವುದಿಲ್ಲ! ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮುದಾಯದ ಜನಸಾಮಾನ್ಯರೇ ಸಂಭ್ರಮಾಚರಣೆ ಮಾಡುತ್ತಿರುವವರನ್ನು ಹಾಗೂ ಈ ಮೋಸದ ಸರ್ಕಾರವನ್ನು ಕೇಳಬೇಕು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ 7 ದಿನದಲ್ಲೇ ದೇಶದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯಕ್ಕೆ 10% ಮೀಸಲಾತಿ ನೀಡಿದೆ. ಅದು ಅವರು ಕೇಳದಿದ್ದರೂ, ಯಾವುದೇ ಹೋರಾಟ ಮಾಡದಿದ್ದರೂ ನೀಡಿದೆ. ಆದರೆ, ರೈತಾಪಿಗಳಾದ ಪಂಚಮಸಾಲಿಗರು ರಸ್ತೆಗಿಳಿದು ಎರಡು ವರ್ಷ ಹೋರಾಡಿದರೂ ಅವರಿಗೆ ಏನನ್ನೂ ನೀಡದೆ, ಎಲ್ಲವೂ ಪಡೆದಿದ್ದೇವೆಂದು ಅವರಾಗವರೇ ಒಪ್ಪಿಕೊಳ್ಳುವಂತೆ ಮಾಡಿ ಅವರನ್ನು ಬರಿಗೈಯಲ್ಲಿ ಮನೆಗೆ ಕಳುಹಿಸಿದ್ದಾರೆ. ಇದು ಬಿಜೆಪಿ ಸರ್ಕಾರ ಇಡೀ ಪಂಚಮಸಾಲಿ ಸಮುದಾಯಕ್ಕೆ ಮಾಡಿದ ಮೋಸವಲ್ಲದೆ ಮತ್ತೇನು? ಒಂದು ಸರ್ಕಾರ ಈ ರೀತಿಯಾಗಿ ಒಂದಿಡೀ ಸಮುದಾಯವನ್ನು ಹೀಗೆ ಮಾತು ಕೊಟ್ಟು ಮೋಸ ಮಾಡಿದ್ದು ಚರಿತ್ರೆಯಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ.

ಇದನ್ನು ಓದಿದ್ದೀರಾ?: ಮೀಸಲಾತಿ | ಬಿಜೆಪಿಯ ತಂತ್ರಗಾರಿಕೆಯ ವೈಫಲ್ಯಕ್ಕೆ ಕಾರಣಗಳೇನು?

ಕೊನೆಗೊಂದು ಮಾತು : ಮುಸ್ಲಿಂರ ಮೀಸಲಾತಿ ಕಿತ್ತು, ಅದನ್ನು ಒಕ್ಕಲಿಗ ಹಾಗೂ ಲಿಂಗಾಯತರಿಗೆ ಹಂಚಿದ್ದರ ಹಿಂದೆ ಸರ್ಕಾರದ ದುರುದ್ದೇಶ ಇದ್ದಂತಿದೆ. ಮುಸ್ಲಿಂರಿಗಾದ ಅನ್ಯಾಯದಿಂದ ಅವರು ರೊಚ್ಚಿಗೆದ್ದು ಹೇಗೂ ರಸ್ತೆಗೆ ಇಳಿಯುತ್ತಾರೆ, ಆಗ ಸಹಜವಾಗಿ ಪಂಚಮಸಾಲಿಗರು ಮತ್ತು ಒಕ್ಕಲಿಗರು ಮುಸ್ಲಿಮರ ವಿರುದ್ಧ ದ್ವೇಷಕಾರಿ ರಸ್ತೆಯಲ್ಲಿ ಹೊಡೆದಾಟಕ್ಕೆ ಇಳಿಯುತ್ತಾರೆ. ಆಗ ಮುಸ್ಲಿಮಯೇತರ ಅದರಲ್ಲೂ ವಿಶೇಷವಾಗಿ ಮೇಲ್ಜಾತಿಯವರ ಮತಗಳು ಧ್ರುವೀಕರಣವಾಗಿ ಚುನಾವಣೆಯಲ್ಲಿ ನಮಗೆ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರ ಇದ್ದಂತಿದೆ. ಇಲ್ಲದಿದ್ದರೆ ಯಾವುದೇ ವೈಜ್ಞಾನಿಕ ಅಧ್ಯಯನದ ವರದಿಯೂ ಇಲ್ಲದೆ ಒಂದು ಸಮುದಾಯದ ಮೀಸಲಾತಿ ಕಿತ್ತು ಅದನ್ನು ಬೇರೆಯವರಿಗೆ ಹಂಚಲು ಹೇಗೆ ಸಾಧ್ಯ?

ಹೌದು! ಈ ಸರ್ಕಾರ ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿಗೆ ಅವಕಾಶವೇ ಇಲ್ಲವೆಂದು ಸಮಜಾಯಿಷಿ ನೀಡಿ ಮುಸ್ಲಿಮರಿಗೆ 2(ಬಿ) ನಲ್ಲಿರುವ ಮೀಸಲಾತಿಯನ್ನು ಕಿತ್ತುಹಾಕಿದೆ‌. (ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಧರ್ಮದ ಆಧಾರದಲ್ಲಲ್ಲ. ಮುಸ್ಲಿಂ ಸಮುದಾಯ ಆರ್ಥಿಕವಾಗಿ, ಸಾಮಾಜಿಕ ಹಿಂದುಳಿದಿದೆ ಎಂದು ಅಂದಿನ ಮುಖ್ಯಮಂತ್ರಿ ಹೆಚ್ ಡಿ ದೇವೇಗೌಡರು ಅನೇಕ ವರದಿಗಳನ್ನ ಆಧರಿಸಿ 1994 ರಲ್ಲಿ ಪ್ರವರ್ಗ 2B ಅಡಿಯಲ್ಲಿ 4% ಮೀಸಲಾತಿ ನೀಡಿದರು) ಮುಖ್ಯಮಂತ್ರಿಗಳು ಆಡಿರುವ ಮಾತನ್ನೇ ನಂಬುವುದಾದರೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವೇ ಇಲ್ಲವೆಂದ ಮೇಲೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರಿಶ್ಚಿಯನ್ ಮತ್ತು ಜೈನ(ದಿಗಂಬರ) ಧರ್ಮೀಯರಿಗೆ ಖುದ್ದು ಬೊಮ್ಮಾಯಿ ನೇತೃತ್ವದ ಈ ಸರ್ಕಾರವೇ ಲಿಂಗಾಯತರ ಜೊತೆಯಲ್ಲಿ 2 (ಡಿ)ಯಲ್ಲಿ ಮೀಸಲಾತಿ ನೀಡಿದ್ದು ಹೇಗೆ? ಇದಕ್ಕೂ ಬೊಮ್ಮಾಯಿಯವರು ಹೇಗೆ ಸಮಜಾಯಿಷಿ ನೀಡುತ್ತಾರೋ?

49661542 294235811438250 5384525710729674752 n
ಸಿದ್ದಪ್ಪ ಮೂಲಗೆ
+ posts

ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಿದ್ದಪ್ಪ ಮೂಲಗೆ
ಸಿದ್ದಪ್ಪ ಮೂಲಗೆ
ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X