ಮೀಸಲಾತಿ | ಬಿಜೆಪಿಯ ತಂತ್ರಗಾರಿಕೆಯ ವೈಫಲ್ಯಕ್ಕೆ ಕಾರಣಗಳೇನು?

Date:

ಸದಾಶಿವ ಆಯೋಗದ ಶಿಫಾರಸ್ಸಾದ ದಲಿತರಲ್ಲಿನ ಒಳಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳುವುದಕ್ಕೂ ಬಿಜೆಪಿಗೊಂದು ತೊಡಕಿತ್ತು. ವಿಶೇಷವಾಗಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿತ್ತು. ಇಲ್ಲಿ ಬಿಜೆಪಿಗಿದ್ದ ತೊಡಕೆಂದರೆ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಲಂಬಾಣಿ ಹಾಗೂ ಬೋವಿ ಸಮುದಾಯಗಳು ಈ ಬೇಡಿಕೆಗೆ ವಿರುದ್ಧವಿದ್ದವು

ಒಂದೇ ಏಟಿಗೆ ಹಲವು ಹಕ್ಕಿಗಳನ್ನು ಹೊಡೆಯಲು ಹೋದ ಬಿಜೆಪಿಯು ತಾನೇ ಸೃಷ್ಟಿಸಿಕೊಂಡ ಚಕ್ರವ್ಯೂಹದೊಳಗೆ ಸಿಕ್ಕಿಬಿದ್ದಿದೆ. ಕರ್ನಾಟಕದಲ್ಲಿ ಮೀಸಲಾತಿ ಕುರಿತ ತೀರ್ಮಾನಗಳಿಂದ ಇದುವರೆಗೆ ಬಿಜೆಪಿಗೆ ಆಗಿರುವ ಸಮಸ್ಯೆಗಿಂತ ಇನ್ನೂ ಹೆಚ್ಚಿನ ಸಮಸ್ಯೆಗಳು ಸದ್ಯದಲ್ಲೇ ಆಗಲಿವೆ. ಮೀಸಲಾತಿ ಬಿಜೆಪಿಯ ತಂತ್ರಗಾರಿಕೆಯ ಪ್ರಮುಖ ಅಂಶವಾಗಿದೆ. ಮೀಸಲಾತಿಗೆ ಈ ಹಿಂದೆ ಬಹಿರಂಗ ವಿರೋಧ ಮಾಡುತ್ತಾ ಮೇಲ್ಜಾತಿಗಳನ್ನು ಎತ್ತಿಕಟ್ಟಲಾಗಿತ್ತು. ಈಗ ಬಹಿರಂಗ ವಿರೋಧ ಮಾಡದೇ, ಆಂತರಿಕ ಅಸಹನೆಯನ್ನು ಮುಂದುವರೆಸಿದ್ದಾರೆ. ಅದೇ ಸಂದರ್ಭದಲ್ಲಿ ಇದೇ ಮೀಸಲಾತಿಯನ್ನು ಬಳಸಿಕೊಂಡೇ ವಿವಿಧ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ತಂತ್ರಗಾರಿಕೆಯನ್ನು ಅದು ಹೆಣೆಯುತ್ತಿದೆ. ಮಹಾತ್ಮಾಗಾಂಧಿಯವರ ಹತ್ಯೆಯ ನಂತರದ ಮೂರ್ನಾಲ್ಕು ದಶಕಗಳ ಕಾಲ ಆರೆಸ್ಸೆಸ್‌ನ ಒಂದು ತಂತ್ರವೂ ಸರಿಯಾಗಿ ಫಲಿಸಿರಲಿಲ್ಲ. ಆದರೆ 1990ರ ನಂತರದ ತಂತ್ರಗಳಿಗೆ ಬಹುತೇಕ ಗೆಲುವುಗಳೇ ಸಿಗುತ್ತಾ ಬಂದಿದ್ದವು. ಅದರಲ್ಲೂ ಮೋದಿ ಅಮಿತ್‌ಶಾ ಕಾಲದ ಬಳಿಕ ಅನೈತಿಕ ಆಪರೇಷನ್‌ಗಳು ಮತ್ತು ಅವರ ಸೋಷಿಯಲ್‌ ಇಂಜಿನಿಯರಿಂಗ್‌ ತಂತ್ರಗಳು ಫಲ ತಂದುಕೊಟ್ಟಿದ್ದವು. ಆದರೆ, ಅಂತಹ ತಂತ್ರಗಾರಿಕೆಯು ಈಗ ಉಲ್ಟಾ ಹೊಡೆದಿರುವುದು ಆಶ್ಚರ್ಯದ ಸಂಗತಿಯೇನಲ್ಲ.

ಬಿಜೆಪಿಯ ಕೈಯ್ಯಲ್ಲಿ ಒಂದು ದಾಳವಾಗಿ ಸದಾಶಿವ ಆಯೋಗದ ಅಸ್ತ್ರ ಇದೆಯೆಂದೂ, ಅದನ್ನು ಅವರು ʼಸರಿಯಾದ ಸಮಯದಲ್ಲಿʼ ಪ್ರಯೋಗಿಸಲಿದ್ದಾರೆಂದು ಎಲ್ಲರಿಗೂ ಗೊತ್ತಿತ್ತು. ಅದು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನ ಜೊತೆಗಿದ್ದ ದಲಿತ ಸಮುದಾಯದ ದೊಡ್ಡ ವಿಭಾಗವನ್ನು ತನ್ನೆಡೆಗೆ ಸೆಳೆಯುವ ದಾಳವೂ ಆಗಿತ್ತು. ಆದರೆ ಬಿಜೆಪಿಗೆ ತಲೆ ನೋವಾಗಿದ್ದದ್ದು ಪ್ರಧಾನವಾಗಿ ಪಂಚಮಸಾಲಿ ಮೀಸಲಾತಿ ಬೇಡಿಕೆಯದ್ದು. ಲಿಂಗಾಯಿತರಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಪಂಚಮಸಾಲಿಗಳು ಹಾಲಿ ಇದ್ದ 3 ಬಿಯಿಂದ 2 ಎಗೆ ಸೇರಿಸಬೇಕೆಂದು ಸತತವಾಗಿ ಹೋರಾಟಕ್ಕಿಳಿದಿದ್ದರು.

ಸದಾಶಿವ ಆಯೋಗದ ಶಿಫಾರಸ್ಸಾದ ದಲಿತರಲ್ಲಿನ ಒಳಮೀಸಲಾತಿಯ ವಿಚಾರವನ್ನು ಕೈಗೆತ್ತಿಕೊಳ್ಳುವುದಕ್ಕೂ ಬಿಜೆಪಿಗೊಂದು ತೊಡಕಿತ್ತು. ವಿಶೇಷವಾಗಿ ಮಾದಿಗ ಸಮುದಾಯವು ಒಳಮೀಸಲಾತಿಗಾಗಿ ಹೋರಾಟ ಮಾಡುತ್ತಾ ಬಂದಿತ್ತು. ಇಲ್ಲಿ ಬಿಜೆಪಿಗಿದ್ದ ತೊಡಕೆಂದರೆ, ಆ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಲಂಬಾಣಿ ಹಾಗೂ ಬೋವಿ ಸಮುದಾಯಗಳು ಈ ಬೇಡಿಕೆಗೆ ವಿರುದ್ಧವಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ಬಿಜೆಪಿಯ ʼಚಾಣಕ್ಯʼರು ಇದಕ್ಕೆ ಬಹಳ ವಿಶಿಷ್ಟವಾದ ಸೂತ್ರವನ್ನು ಹೆಣೆದರು. ಮೀಸಲಾತಿ ಕೇಳುತ್ತಿರುವ ಎಲ್ಲಾ ಸಮುದಾಯಗಳನ್ನೂ ಒಂದೇ ಏಟಿಗೆ ಸಂತೃಪ್ತಿಗೊಳಿಸುವ ಮತ್ತು ಭಾರೀ ದೊಡ್ಡ ರಾಜಕೀಯ ಲಾಭವನ್ನು ಪಡೆಯುವ ಸೂತ್ರವದು. ಆದರೆ, ಅವರ ದುರಾದೃಷ್ಟಕ್ಕೆ ಆ ಸೂತ್ರದೊಳಗೆ ಇಂದು ಬಿಜೆಪಿ ಸಿಕ್ಕಿಕೊಂಡಾಗಿದೆ. ಅದರಿಂದ ಹೊರಬರುವುದು ಸುಲಭವಲ್ಲ;

ಏನಾಗಿತ್ತು ಆ ಉಪಾಯ?

ಕಾಂಗ್ರೆಸ್‌ – ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಜಸ್ಟೀಸ್‌ ನಾಗಮೋಹನದಾಸ್‌ ಅವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಇದ್ದ ಮೀಸಲಾತಿಯನ್ನು ಕ್ರಮವಾಗಿ 15%ನಿಂದ 17% ಹಾಗೂ 3%ನಿಂದ 7%ಗೆ ಏರಿಸುವ ಶಿಫಾರಸ್ಸು ಮಾಡಿದ್ದರು. ಹೀಗಾಗಿ ಪರಿಶಿಷ್ಟ ಜಾತಿಗಳಿಗೆ ಸಿಗುವ 2% ಹೆಚ್ಚಿನ ಮೀಸಲಾತಿಯ ಸಿಂಹಪಾಲನ್ನು ಬೋವಿ ಹಾಗೂ ಲಂಬಾಣಿಗಳಿಗೆ ನೀಡುವ ಮೂಲಕ ಅವರನ್ನೂ ಸಂತೈಸುವುದು; ಸದಾಶಿವ ಆಯೋಗದ ಶಿಫಾರಸ್ಸಿನಲ್ಲಿದ್ದ 6% ಮೀಸಲಾತಿಯನ್ನು ಮಾದಿಗ ಸಮುದಾಯಕ್ಕೂ ನೀಡುವುದು ಆ ಉಪಾಯದ ಮೊದಲ ಅಂಶ. ಎರಡನೆಯ ಅಂಶ, ಪಂಚಮಸಾಲಿಗಳನ್ನು 2ಎಗೆ ಸೇರಿಸುವುದು ಬಿಜೆಪಿಗೆ ಕಷ್ಟವಿತ್ತು. ಹಾಗಾಗಿ ಅದಕ್ಕೆಂದೇ 2ಸಿ ಅಥವಾ ಡಿ ಮಾತ್ರ ಸೃಷ್ಟಿಸಿದರೆ ಸಾಲದು, ಅವರಿಗೆ 2% ಹೆಚ್ಚುವರಿ ಮೀಸಲಾತಿ ಸಿಗುವಂತೆ ಮಾಡಲು, ಮುಸ್ಲಿಮರಿಂದ 4% ಮೀಸಲಾತಿ ಕಸಿದು ಅದರಲ್ಲಿ ಅರ್ಧ ಲಿಂಗಾಯಿತರಿಗೆ ಕೊಡುವುದು; ಇನ್ನರ್ಧ ಒಕ್ಕಲಿಗರಿಗೆ ಕೊಡುವುದು. ಒಂದೇ ಏಟಿಗೆ ಮಾದಿಗ ಸಮುದಾಯವನ್ನು, ಲಂಬಾಣಿ-ಬೋವಿ ಇತ್ಯಾದಿ ಸಮುದಾಯಗಳನ್ನು, ಲಿಂಗಾಯಿತರನ್ನು ಮತ್ತು ಒಕ್ಕಲಿಗರನ್ನೂ ತೃಪ್ತಿಪಡಿಸುವ ಭಾರೀ ಲೆಕ್ಕಾಚಾರವದಾಗಿತ್ತು. ಅಷ್ಟೇ ಅಲ್ಲದೇ ಮುಸ್ಲಿಮರಿಂದ 4% ಮೀಸಲಾತಿ ಕಿತ್ತುಕೊಳ್ಳುವುದರಿಂದ ಅವರೇನಾದರೂ ಬೀದಿಗಿಳಿದರೆ ಅದನ್ನು ಕೋಮುಧ್ರುವೀಕರಣಕ್ಕೆ ಬಳಸಿಕೊಳ್ಳುವ ಇರಾದೆಯೂ ಅವರಿಗಿತ್ತು.

ಹಾಗಾಗಿಯೇ ʼಜೇನು ಕಚ್ಚಿಸಿಕೊಳ್ಳುವ ಅಪಾಯವಿದ್ದರೂ ನಾನು ಗೂಡಿಗೆ ಕೈ ಹಾಕಿ ಜೇನು ಕಿತ್ತುಕೊಟ್ಟಿದ್ದೇನೆʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದು. ವಿವಿಧ ಸಮುದಾಯಗಳಿಗೆ ಜೇನುಣಿಸುವ ಆಲೋಚನೆ ಅವರಿಗೆ ಎಂದೂ ಇರಲಿಲ್ಲ, ಬದಲಿಗೆ ಬಿಜೆಪಿಯು ಮೀಸಲಾತಿಯ ಜೇನುಗೂಡಿಗೆ ಕೈ ಹಾಕಿ ಅದನ್ನು ಯಶಸ್ವಿಯಾಗಿ ನಿಭಾಯಿಸಿದರೆ, ಜೇನು ಸಿಗುವುದು ಅವರ ಪಕ್ಷಕ್ಕೆ. ಅದನ್ನೇ ಅವರು ಮಾಡಹೊರಟಿದ್ದು. ಆದರೆ ಈಗ ಎಲ್ಲಾ ಸಮುದಾಯಗಳೂ ತನಗೆ ಜೇನು ಸಿಕ್ಕಿಲ್ಲ ಎಂದು ಬಗೆದು ಬಿಜೆಪಿಯ ವಿರುದ್ಧ ಅಸಮಾಧಾನ ತೋರಲಾರಂಭಿಸಿದೆ.

ಮೊದಲು ಬಹಿರಂಗವಾಗಿ ತಿರುಗಿಬಿದ್ದಿದ್ದು ಲಂಬಾಣಿ ಸಮುದಾಯವಾಗಿದೆ. ಈಗಾಗಲೇ ಶಿಕಾರಿಪುರದಲ್ಲಿ ಯಡಿಯೂರಪ್ಪನವರ ಮನೆಯ ಮೇಲೆ ಕಲ್ಲು ತೂರಲಾಗಿದೆ. ಲಂಬಾಣಿ ಸಮುದಾಯದ ಪರವಾಗಿ ಪ್ರಶ್ನೆ ಎತ್ತುತ್ತಿರುವ ಮೀಸಲಾತಿ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನಂತ ನಾಯಕ್‌ ಮುಂದಿಡುತ್ತಿರುವ ತರ್ಕಗಳಿಗೆ ಬಿಜೆಪಿ ಉತ್ತರ ಕೊಡುವುದು ಸಾಧ್ಯವಿಲ್ಲ. ಏಕೆಂದರೆ ನೀವು ಮಾಡಿರುವ ಮೀಸಲಾತಿ ಪುನರ್‌ ಹಂಚಿಕೆಗೆ ಆಧಾರವೇನು ಎಂದು ಅವರು ಕೇಳುತ್ತಿದ್ದಾರೆ. ಸದಾಶಿವ ಆಯೋಗ ಅಂತಹ ಆಧಾರವನ್ನು ಸಮರ್ಥವಾಗಿ ಮುಂದಿಟ್ಟಿತ್ತು. ಅದು ಜಾತಿಗಣತಿ ಮಾಡಿತ್ತು, ವಿವಿಧ ಜಾತಿಗಳ ಆರ್ಥಿಕ, ಸಾಮಾಜಿಕ, ಔದ್ಯೋಗಿಕ ಪರಿಸ್ಥಿತಿಯ ಅಧ್ಯಯನ ಮಾಡಿತ್ತು (ಇದರ ಬಗ್ಗೆ ಲಂಬಾಣಿಗಳು ಸೇರಿದಂತೆ ಹಲವರಿಗೆ ಭಿನ್ನಾಭಿಪ್ರಾಯವಿತ್ತು). ಆದರೆ ಈಗ ಸರ್ಕಾರವು ಸದಾಶಿವ ಆಯೋಗದ ಶಿಫಾರಸ್ಸನ್ನು ತಾನು ತಿರಸ್ಕರಿಸಿದ್ದೇನೆ ಎಂದು ಹೇಳಿದೆ. ಹಾಗಿದ್ದ ಮೇಲೆ ಯಾವ ಆಧಾರವೂ ಇಲ್ಲದೇ ಮನಸ್ಸಿಗೆ ತೋಚಿದಂತೆ ಮೀಸಲಾತಿ ಹಂಚಲು (ಜೆಡಿಎಸ್‌ ಹೇಳಿರುವಂತೆ) ಅದೇನು ಜಾತ್ರೆಯಲ್ಲಿ ಸಿಗುವ ಬೆಂಡು ಬತ್ತಾಸೇ?

ಇನ್ನು ಮಾದಿಗ ಸಮುದಾಯ ಆಕ್ರೋಶಗೊಳ್ಳಲು ಹಲವಾರು ಕಾರಣಗಳಿವೆ. ಈ ಹಂಚಿಕೆಗೆ ವೈಜ್ಞಾನಿಕ ಆಧಾರಗಳಿಲ್ಲದಿರುವುದರಿಂದ, ಅದು ಕೋರ್ಟಿನಲ್ಲಿ ನಿಲ್ಲುವುದಿಲ್ಲ. ಎರಡನೆಯದಾಗಿ 15% ಮೀಸಲಾತಿಯು 17%ಗೆ ಏರಿಸಿರುವ ಕುರಿತು ಇನ್ನೂ ಕೇಂದ್ರಕ್ಕೆ ಪತ್ರವನ್ನೇ ಬರೆದಿಲ್ಲ. 15% 17%ಗೆ ಏರಿದ ತಕ್ಷಣ ಅದು ಜಾರಿಗೆ ಬರುವುದೇ ಇಲ್ಲ; ಏಕೆಂದರೆ ಆಗ ಕರ್ನಾಟಕದಲ್ಲಿನ ಒಟ್ಟಾರೆ ಮೀಸಲಾತಿಯು 50% ಮೀರುತ್ತದೆ. ಅದಕ್ಕೆ ಒಟ್ಟಾರೆ 50% ಮೀರಬಾರದೆಂಬ ಸುಪ್ರೀಂಕೋರ್ಟಿನ (ಇಂದ್ರಾ ಸಾಹ್ನಿ) ತೀರ್ಪು ಅಡ್ಡ ಬರುತ್ತದೆ. 50% ಮೀಸಲಾತಿಯ ಮಿತಿಯನ್ನು ಸಂಸತ್ತು ಸುಲಭವಾಗಿ ಕಿತ್ತು ಹಾಕುತ್ತದೆಂದು ನಂಬಿಕೊಂಡರೆ ಅದಕ್ಕಿಂತ ದೊಡ್ಡ ಸುಳ್ಳು ಮತ್ತೊಂದಿಲ್ಲ. ಏಕೆಂದರೆ, ಅದೇ 50%ನಲ್ಲಿರುವ ಬಲಾಢ್ಯ ಜಾತಿಗಳು (ಇದರಲ್ಲಿ ಬ್ರಾಹ್ಮಣರ ಜೊತೆಗೆ ಠಾಕೂರರು, ಜಾಟರು, ಪಟೇಲರಂತಹವರು ಬರುತ್ತಾರೆ) ರೊಚ್ಚಿಗೇಳುವ ಸಾಧ್ಯತೆ ಇದೆ. ಅಂದರೆ ಮಾದಿಗ ಮೀಸಲಾತಿಯು ಶಾಶ್ವತವಾಗಿ ನೆನೆಗುದಿಗೆ ಬೀಳಲು ಇದು ಕಾರಣವಾಗುತ್ತದೆ. ಅದನ್ನು ಪರಿಹರಿಸಿಕೊಳ್ಳಲು ಇರುವ ಒಂದು ದಾರಿಯೆಂದರೆ, ಈಗಾಗಲೇ ಮೀಸಲಾತಿ ಪಡೆದುಕೊಂಡಿರುವ ಕರ್ನಾಟಕದ ಯಾವುದಾದರೂ ಸಮುದಾಯಗಳಿಂದ ಒಟ್ಟು 6% (ಪರಿಶಿಷ್ಟ ಜಾತಿಗಳಿಗೆ 2%, ಪರಿಶಿಷ್ಟ ಪಂಗಡಗಳಿಗೆ 4%) ಕಿತ್ತುಕೊಡಬೇಕು. ಅದು ಮುಸ್ಲಿಮರಿಂದ 4% ಕಿತ್ತುಕೊಂಡಷ್ಟು ಸುಲಭವಲ್ಲ. ಈಗ ಮೀಸಲಾತಿ ಪಡೆದುಕೊಂಡಿರುವ ಯಾರೊಬ್ಬರಿಂದಲೂ ಅದನ್ನು ಕಿತ್ತುಕೊಳ್ಳುವುದು ಬಹಳ ಕಷ್ಟ. ಮುಸ್ಲಿಮರಿಂದ ಕಿತ್ತುಕೊಂಡಿದ್ದನ್ನೂ (ಅದೂ ಕೋರ್ಟಿನಲ್ಲಿ ನಿಲ್ಲುವುದಿಲ್ಲ) ಈಗಾಗಲೇ ಒಕ್ಕಲಿಗರು, ಲಿಂಗಾಯಿತರಿಗೆ ಕೊಟ್ಟಾಗಿದೆ.

ಮುಸ್ಲಿಮರಿಂದ ಕಿತ್ತುಕೊಂಡ 4% ಮೀಸಲಾತಿಯು ಸಮಾಜದಲ್ಲಿ ಸಂತೋಷ ಹುಟ್ಟಿಸಿಲ್ಲ. ಆಕ್ರೋಶ ಹುಟ್ಟದಿದ್ದರೂ, ಇದು ಅನ್ಯಾಯ ಎಂಬ ಭಾವನೆಯೇ ಹೆಚ್ಚು ಕಾಣುತ್ತಿದೆ. ಅದರಲ್ಲೂ ತಲಾ 2% ಮೀಸಲಾತಿ ಪಡೆದುಕೊಂಡ ಲಿಂಗಾಯಿತ ಮತ್ತು ಒಕ್ಕಲಿಗರಿಗಂತೂ ಇದು ಅವಮಾನವೆನ್ನಿಸಿದೆ. ಸಿಕ್ಕಿದ್ದು ಬರೀ 2% ಎಂಬುದು ಒಂದೆಡೆಯಾದರೆ, ತಮಗಿಂತ ಕೆಳಗಿನ ಸ್ಥಿತಿಯಲ್ಲಿರುವ ಸಮುದಾಯದಿಂದ ಕಿತ್ತುಕೊಂಡು ಕೊಟ್ಟರು ಎಂಬುದು ಒಂದು ರೀತಿಯಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಮೇಲಾಗಿ ಒಕ್ಕಲಿಗ ಸಮುದಾಯ ಕೇಳುತ್ತಿದ್ದದ್ದು 12%. ಪಂಚಮಸಾಲಿ ಹೋರಾಟದ ಮುಂಚೂಣಿಯಲ್ಲಿದ್ದ ಸ್ವಾಮೀಜಿಯನ್ನು ʼಬೇರೆ ಥರಾ ಮ್ಯಾನೇಜ್‌ʼ ಮಾಡಿ ಅದಕ್ಕೆ ಇತಿಶ್ರೀ ಹಾಡಲಾಗಿದೆ ಎಂಬುದು ಅವರ ಪತ್ರಿಕಾಗೋಷ್ಠಿಯಿಂದ ಸ್ಪಷ್ಟವಿತ್ತು. ಏಕೆಂದರೆ ಪಂಚಮಸಾಲಿಗಳಿಗೆಂದು ಈ ಸರ್ಕಾರ ಏನನ್ನೂ ಘೋಷಿಸಿರಲಿಲ್ಲ. 3 ಬಿಯಲ್ಲಿದ್ದ ಸಮಸ್ತರೆಲ್ಲರನ್ನೂ 2ಡಿ ಗೆ ತಂದು ಎಲ್ಲರಿಗೂ ಸೇರಿ 2% ಹೆಚ್ಚಳದಿಂದ ಏನೂ ಆಗಲಿಲ್ಲ. ಹೀಗಾಗಿ ಅವರಿಗೂ ಏನಾದರೂ ಸಿಕ್ಕಿತು ಎನಿಸುವಂತೆ ಆಗಿಲ್ಲ. ಆದರೂ ಹೋರಾಟ ತಾತ್ಕಾಲಿಕವಾಗಿ ನಿಲ್ಲುತ್ತಿದೆ ಎಂಬ ಅವರ ಸಮಜಾಯಿಷಿ ಯಾರಿಗೂ ಅಹುದೆನಿಸುವಂತಿರಲಿಲ್ಲ. ಹೀಗಾಗಿ ಪಂಚಮಸಾಲಿಗಳಿಗೆ ಮತ್ತು ಲಿಂಗಾಯಿತರಿಗೆ ಇದರಿಂದ ದೊಡ್ಡ ಮೋಸ ಆಗಿದೆ ಎಂಬ ಭಾವನೆ ಬೆಳೆದರೆ ಬಿಜೆಪಿಗೆ ಬುಡವೇ ಅಲ್ಲಾಡಿ ಹೋಗುತ್ತದೆ.

ಎಲ್ಲಕ್ಕಿಂತ ಆಶ್ಚರ್ಯಕರ ಸಂಗತಿಯೆಂದರೆ ʼಧರ್ಮೋ ರಕ್ಷತಿ ರಕ್ಷಿತಃʼ ಎಂಬ ಶೀರ್ಷಿಕೆಯಲ್ಲಿ ಓಡಾಡುತ್ತಿರುವ ವಾಟ್ಸಾಪ್‌ ಪೋಸ್ಟಿನಲ್ಲಿ ಬ್ರಾಹ್ಮಣರ ಅಸಮಾಧಾನ ಪ್ರಕಟವಾದ ರೀತಿ. ತಮಗೇ ಅಂತಲೇ ಇದ್ದ 10% (ಅದು ನ್ಯಾಯಯುತವಾಗಿತ್ತು ಎಂಬ ಸಮರ್ಥನೆಯ ಜೊತೆಗೆ) ಇಡಬ್ಲ್ಯುಎಸ್‌ ನಲ್ಲಿ ಈಗ ಸುಮಾರು 15% ಇರುವ ಮುಸ್ಲಿಮರ ಜೊತೆಗೆ ಸ್ಪರ್ಧಿಸಬೇಕು ಎಂಬ ʼಆತಂಕʼ ಅವರದ್ದು. ಅಂದರೆ ಯಾವೊಂದು ಸಮುದಾಯವೂ ಈ ಮೀಸಲಾತಿ ನಿರ್ಧಾರದಿಂದ ತೃಪ್ತಿಗೊಂಡಿಲ್ಲ; ಬದಲಿಗೆ ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಹಾಗೆ ನೋಡಿದರೆ ಆಯಾ ಸಮುದಾಯಗಳ ಪ್ರಜ್ಞಾವಂತರಲ್ಲಿ ಹಬೆಯಾಡುತ್ತಿರುವ ಈ ಅಸಮಾಧಾನವು ಇನ್ನೂ ಕೆಳಗೆ ಇಳಿದರೆ ಅದು ಕೇವಲ ಅಸಮಾಧಾನವಾಗಿ ಉಳಿಯುವುದಿಲ್ಲ.

ಬಿಜೆಪಿ ಎಡವಿದ್ದೆಲ್ಲಿ? ಯಾಕೆ?

ಚುನಾವಣೆಯ ಹೊಸ್ತಿಲಲ್ಲಿರುವ ಯಾವುದೇ ಪಕ್ಷ ಇಂತಹ ದೊಡ್ಡ ತಪ್ಪನ್ನು ಮಾಡುವುದಿಲ್ಲ. ತಂತ್ರಗಾರಿಕೆಯ ವಿಚಾರದಲ್ಲಿ, ಅದರಲ್ಲೂ ಸೋಷಿಯಲ್‌ ಇಂಜಿನಿಯರಿಂಗ್‌ನಲ್ಲಿ ಪಳಗಿರುವ ಬಿಜೆಪಿ ಹೀಗೇಕೆ ಮಾಡಿತು ಎಂದು ನೋಡಿದರೆ ಅದಕ್ಕೆ ಮುಖ್ಯವಾಗಿ ನಾಲ್ಕು ಕಾರಣಗಳು ಕಾಣುತ್ತವೆ.

ಒಂದು, ತನ್ನ ತಂತ್ರಗಾರಿಕೆಯ ಕುರಿತ ಅತೀವ ಆತ್ಮವಿಶ್ವಾಸ. ಈ ವಿಚಾರದಲ್ಲಿ ಇರುವ ಒಳಸುಳಿಗಳು ಬಿಜೆಪಿಯ ನಾಯಕರಿಗೆ ಗೊತ್ತಿಲ್ಲದೇ ಏನಿಲ್ಲ. ಆದರೆ, ಅದನ್ನು ತಾವು ನಿಭಾಯಿಸಿಬಿಡುತ್ತೇವೆಂಬ ಹುಸಿ ವಿಶ್ವಾಸವು ಅವರಿಗೆ ಕೈಕೊಟ್ಟಿದೆ.

ಎರಡು, ಮುಸ್ಲಿಮರಿಂದ ನಾಲ್ಕು ಪರ್ಸೆಂಟ್‌ ಕಿತ್ತುಕೊಂಡುಬಿಟ್ಟರೆ ಅದು ತಮಗೆ ಭಾರೀ ಅನುಕೂಲ ಮಾಡಿಕೊಡುತ್ತದೆ ಎಂಬ ಕ್ಷುದ್ರ ಆಲೋಚನೆ. ಕರ್ನಾಟಕದ ಜನರು, ಅದರಲ್ಲೂ ತಲಾ ಎರಡು ಪರ್ಸೆಂಟಿನ ಪುಡಿಗಾಸು ʼಪಡೆದುಕೊಂಡʼ ಒಕ್ಕಲಿಗರು ಮತ್ತು ಲಿಂಗಾಯಿತರು ಆ ರೀತಿಯ ಕ್ಷುದ್ರ ಸಮುದಾಯಗಳು ಅಲ್ಲ ಎಂಬುದು ಬಿಜೆಪಿಗೆ ಇನ್ನೂ ಅರ್ಥವಾಗಿಲ್ಲ.

ಮೂರು, ಲಂಬಾಣಿ ಹಾಗೂ ಬೋವಿ ಸಮುದಾಯಗಳೊಳಗೆ ತಾನು ಕಟ್ಟಿಕೊಂಡಿರುವ ನೆಟ್ವರ್ಕ್‌ ತನಗೆ ಕೆಲಸಕ್ಕೆ ಬರುತ್ತದೆಂದು ಬಿಜೆಪಿ ಬಗೆದಿತ್ತು. ಅದರ ಜೊತೆಗೆ 1.5%ಅನ್ನು ಹೆಚ್ಚಿಸುವ ಮೂಲಕ ತಾನು ಅವರಿಗೆ ಕೊಡಬೇಕಾದುದಕ್ಕಿಂತ ಹೆಚ್ಚು ಕೊಡುತ್ತಿದ್ದೇನೆ ಎಂಬ ಭಾವವೂ ಅವರಿಗಿದ್ದಿರಬಹುದು. ಆದರೆ, ಈ ವಿಚಾರದ ಸಂಪುಟ ಉಪಸಮಿತಿಯಲ್ಲಿದ್ದ ಲಂಬಾಣಿ ಸಮುದಾಯದ ಪ್ರಭು ಚೌಹಾಣ್‌ ಅವರಿಂದ ಉಪಸಮಿತಿಗೇ ಪತ್ರ ಬರೆಸಿ, ತಾನು ಸದಾಶಿವ ಆಯೋಗದ ವರದಿಗೆ ವಿರುದ್ಧ ಇದ್ದೇನೆ ಎಂದು ಹೇಳಿಸಬೇಕಾದ ಒತ್ತಡ ಏಕೆ ಬಂತು ಎಂದು ಬಿಜೆಪಿ ಅರ್ಥ ಮಾಡಿಕೊಳ್ಳಲಿಲ್ಲ. ಇದೇ ಕಾರಣದಿಂದಲೇ ಸಚಿವ ಮಾಧುಸ್ವಾಮಿ ಮತ್ತು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಪದೇ ಪದೇ ತಾವು ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದ್ದೇವೆ ಎಂದು ಹೇಳಬೇಕಾದ ಅನಿವಾರ್ಯತೆಗೆ ಸಿಕ್ಕಿಕೊಂಡರು. ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದ್ದೇವೆ ಎಂದು ಪದೇ ಪದೇ ಹೇಳಿದರೆ ಅದರಿಂದ ಮಾದಿಗ ಸಮುದಾಯದ (ಯಾವುದನ್ನು ಪಡೆದುಕೊಳ್ಳಬೇಕೆಂದು ಸತತ ಹದಿನೈದು ವರ್ಷ ಬಿಜೆಪಿ ಪ್ರಯತ್ನಿಸಿತ್ತೋ ಆ ಸಮುದಾಯದ) ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಅವರು ಎಣಿಸಿದ್ದಂತಿಲ್ಲ.

ಈ ಲೇಖನ ಓದಿದ್ದೀರಾ?: 2ಬಿ ಮೀಸಲಾತಿ ರದ್ದು | ಮುಸ್ಲಿಂ ಮಹಿಳೆಯರ ಶೈಕ್ಷಣಿಕ, ಔದ್ಯೋಗಿಕ ಪ್ರಗತಿಗೆ ಮಾರಕ

ನಾಲ್ಕು, ಸಮುದಾಯಗಳನ್ನು ಒಡೆದಾಳುವ ಇಂತಹ ತಂತ್ರಗಾರಿಕೆಗೆ ಒಂದು ಮಿತಿ ಇರುತ್ತದೆ. ಪರಸ್ಪರ ಕಿತ್ತಾಟದಲ್ಲಿರುವ ಎರಡು ಸಮುದಾಯಗಳ ಮಧ್ಯೆ ಬೆಸುಗೆ ಏರ್ಪಡಿಸಿ ಅದನ್ನು ಬಗೆಹರಿಸುವ ಬದಲು, ಆ ವೈರುಧ್ಯವನ್ನೇ ಬಳಸಿಕೊಂಡು ಎರಡೂ ಕಡೆ ಆಟ ಆಡಲು ಹೋದರೆ ಅದು ತಿರುಗೇಟು ನೀಡುತ್ತದೆ. ಇಂದು ಬಿಜೆಪಿಗೆ ಅದೇ ಆಗಿರುವುದು.

ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಬಿಜೆಪಿಯೊಳಗಿರುವ ವೈರುಧ್ಯಗಳನ್ನು ವಿಶ್ಲೇಷಿಸಬೇಕು. ಅದರ ಸಿದ್ಧಾಂತದಲ್ಲಿರುವ ವೈರುಧ್ಯ, ಭಾರತೀಯ ಸಮಾಜದೊಳಗೆ ಇರುವ ವೈರುಧ್ಯದ ಜೊತೆಗೆ, ಬಿಜೆಪಿ ಪಕ್ಷದ ಆಯಕಟ್ಟಿನ ಸ್ಥಾನದಲ್ಲಿರುವವರ ನಡುವಿನ ವೈರುಧ್ಯ ಎಲ್ಲವೂ ಸೇರಿ ಬಿಜೆಪಿಯು ಈ ಸ್ಥಿತಿಗೆ ಬಂದು ನಿಂತಿದೆ.

ಇದು ಎಷ್ಟರಮಟ್ಟಿಗೆ ಈ ಚುನಾವಣೆಯಲ್ಲಿ ಪರಿಣಾಮ ಬೀರುತ್ತದೆ ಎಂಬುದು ಎರಡು ಸಂಗತಿಗಳ ಮೇಲೆ ಅವಲಂಬಿಸಿದೆ. ಒಂದು, ಈ ಸಮುದಾಯಗಳ ಪ್ರಜ್ಞಾವಂತರು ಇಟ್ಟುಕೊಂಡಿರುವ ಅಸಮಾಧಾನ, ಸಮುದಾಯಗಳೊಳಗೆ ಎಷ್ಟರ ಮಟ್ಟಿಗೆ ಹೋಗುತ್ತದೆ ಎಂಬುದು. ಎರಡು, ವಿರೋಧ ಪಕ್ಷಗಳು ಇದನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತವೆ ಎಂಬುದು. ಅದೇನೇ ಇದ್ದರೂ, ಬಿಜೆಪಿಗೆ ಈ ನಡೆಗಳಿಂದ ಅನುಕೂಲವಂತೂ ಆಗುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಬಿಜೆಪಿಯ ವಿರೋಧಿಗಳು ಇದರಿಂದ ಖುಷಿ ಪಟ್ಟುಕೊಳ್ಳುವಂತಿಲ್ಲ. ಏಕೆಂದರೆ ವಿವಿಧ ಶೋಷಿತ ಸಮುದಾಯಗಳು ಪರಸ್ಪರ ಯುದ್ಧಕ್ಕೆ ನಿಲ್ಲುವುದು ತಕ್ಷಣದಲ್ಲಿ ಬಿಜೆಪಿಗೆ ಚುನಾವಣಾ ಸೋಲು ತರಬಹುದಾದರೂ, ದೀರ್ಘಕಾಲದಲ್ಲಿ ಅದು ಸಮಾಜಕ್ಕೆ ಒಳ್ಳೆಯದಲ್ಲ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Dr. Vasu’s article is thought provoking. He raises some relevent questions. Govt and the society specially the Organistion who spreading the movement has to think about this issues.

    shivaji ganeshan

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಜೋಡಿ ಕೊಲೆ | ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ?

ಬೆಂಗಳೂರಿನ ಸಾರಕ್ಕಿ ಪಾರ್ಕ್‌ನಲ್ಲಿ ನಡೆದಿದ್ದ ಜೋಡಿ ಕೊಲೆಗೆ ಸಂಬಂಧ ಕೆಲವು ಮಾಹಿತಿಗಳು...

ಮೋದಿ ವೈಫಲ್ಯ-6 | ಎಲ್ಲಿವೆ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳು?

ಸಂಸದ್ ಆದರ್ಶ ಗ್ರಾಮ ಯೋಜನೆಯಡಿ ಏನೆಲ್ಲಾ ಸೌಲಭ್ಯಗಳಿದ್ದವೂ ಆ ಯಾವುದೇ ಸೌಕರ್ಯಗಳೂ...

ಚಿಕ್ಕಬಳ್ಳಾಪುರ | ಏಪ್ರಿಲ್‌ 20ರಂದು ಪ್ರಧಾನಿ ಮೋದಿ ಆಗಮನ

ಏಪ್ರಿಲ್‌ 20ರ ಶನಿವಾರ 3 ಗಂಟೆಗೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಬಳಿ...