ಬೀದರ್ | ಖರ್ಗೆ ಕುರಿತು ಆರಗ ಜ್ಞಾನೇಂದ್ರ ಹೇಳಿಕೆ ಅಕ್ಷಮ್ಯ ಅಪರಾಧ: ಎಂಎಲ್‌ಸಿ ಅರಳಿ

Date:

Advertisements

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ವರ್ಣ(ಬಣ್ಣ)ದ ಆಧಾರದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವಮಾನಿಸಿರುವುದು ಅಕ್ಷಮ್ಯ ಅಪರಾಧ ಎಂದು ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಅರವಿಂದ್ ಕುಮಾರ್ ಅರಳಿ ಆಕ್ಷೇಪಿಸಿದ್ದಾರೆ.

“ಈ ಹಿಂದೆ ಹಿರಿಯ ಸಚಿವ ಸ್ಥಾನ ನಿಭಾಯಿಸಿದ ಆರಗ ಜ್ಞಾನೇಂದ್ರ ಅವರು ಈ ರೀತಿ ಮಾತನಾಡುತ್ತಾರೆ ಎಂದರೆ, ಅದು ಅವರ ತಿಳುವಳಿಕೆಯ ಕೊರತೆಯೋ ಅಥವಾ ಉತ್ತರ ಕರ್ನಾಟಕದ ಜನರ ಬಗ್ಗೆ ಅವರಿಗಿರುವ ಅಸಡ್ಡೆಯೋ ತಿಳಿಯುತ್ತಿಲ್ಲ. ತಾವು ಮಲೆನಾಡಿನ ಜನ ತುಂಬ ಶ್ರೇಷ್ಠರೂ, ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದವರು ದಡ್ಡರೂ ಎನ್ನುವ ಮನಸ್ಥಿತಿ ಅವರಿಗೆ ಇರಬಹುದು. ಇದು ಮಾನವೀಯತೆಗೆ ಕಳಂಕಪ್ರಾಯವಾಗಿದೆ” ಎಂದು ಕಿಡಿಕಾರಿದ್ದಾರೆ.

“ಉತ್ತರ ಕರ್ನಾಟಕದವರಿಗೆ ಕಾಡು, ಗಿಡ-ಮರ ಎಂದರೆ ಗೊತ್ತಿಲ್ಲ ಎನ್ನುವುದು ಸರಿಯಲ್ಲ. ರಾಜ್ಯದಲ್ಲಿ ಅತಿ ದೊಡ್ಡಅರಣ್ಯ ಪ್ರದೇಶಗಳು, ವನ್ಯಜೀವಿ ಪ್ರದೇಶಗಳು ಉತ್ತರ ಕರ್ನಾಟಕ ಭಾಗದಲ್ಲಿವೆ. ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿ ಪಶ್ಷಿಮ ಘಟ್ಟ ಹರಡಿಕೊಂಡಿದೆ. ಇಡೀ ದೇಶದಲ್ಲಿ ಅಪರೂಪವಾದ ಔಷಧೀಯ ಸಸ್ಯಗಳ ಸುರಕ್ಷಿತ ಅರಣ್ಯ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಹಾಗೂ ಬೀದರ್‌ನ ಹುಮ್ನಾಬಾದ್‌ನಲ್ಲಿವೆ” ಎಂದು ಅವರು ಹೇಳಿದ್ದಾರೆ.

Advertisements

“ಮೈಸೂರು ನಂತರದ ಅತಿ ದೊಡ್ಡ ಶ್ರೀಗಂಧದ ಅರಣ್ಯ ಪ್ರವೇಶವಿರುವುದು ಬೀದರ್‌ ಜಿಲ್ಲೆಯಲ್ಲಿ. ಇದರ ರಕ್ಷಣೆಗಾಗಿ ಜಪಾನ್ ಬ್ಯಾಂಕ್‌ನವರು 80ರ ದಶಕದಲ್ಲಿ ಭಾರತ ಸರ್ಕಾರದ ಜೊತೆ ಜಂಟಿ ಸರ್ವೇಕ್ಷಣೆ ನಡೆಸಿ ಧನ ಸಹಾಯ ನೀಡಿದ್ದರು. ಇಲ್ಲಿಯವರೆಗೂ ಅದು ಸುರಕ್ಷಿತವಾಗಿ ಉಳಿದುಕೊಂಡಿದೆ. ಚಿರತೆ, ಕಾಡು ಎಮ್ಮೆ, ಕೃಷ್ಣಮೃಗ ಹಾಗೂ ಅತಿ ಅಪರೂಪದ ಕಪ್ಪು ಜೇರಡೋಣ ಬ್ಯಾಬಲಲ್ ಹಾಗೂ ದೆಮೊಸೆಲ್ ಕ್ರೀನ್ ಮುಂತಾದ ಪಕ್ಷಿಗಳ ಪ್ರಬೇಧಗಳು ಬೀದರ್ ಜಿಲ್ಲೆಯಲ್ಲಿ ಸಿಗುತ್ತವೆ” ಎಂದು ತಿಳಿಸಿದ್ದಾರೆ.

“ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಜಿಯವರ ಹಾಗೂ ಈಶ್ವರ ಖಂಡ್ರೆ ಮೂಲತಃ ಬೀದರ್ ಜಿಲ್ಲೆಯವರಾಗಿದ್ದಾರೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಆತನ ಕೆಲಸ ಮತ್ತು ಗುಣಗಳಿಂದ ನಿರ್ಧಾರಿಸಲಾಗುತ್ತದೆಯೇ ಹೊರತು ಅವರ ಬಣ್ಣದಿಂದಲ್ಲ. ಯಾವ ಊರಿನವರು ಎನ್ನುವುದರಿಂದಲ್ಲ. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ರಾಜ್ಯದ ಅರಣ್ಯ ಹಾಗೂ ವನ್ಯ ಸಂಪತ್ತನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದು ಅರಣ್ಯಗಳ ನಡುವೆ ಜೀವಿಸುವ ಮಲೆನಾಡಿನ ನಾಯಕರಿಗೆ ಅರ್ಥವಾಗಬೇಕಿದೆ” ಎಂದು ಹೇಳಿದ್ದಾರೆ.

“ತಮ್ಮ 50 ವರ್ಷದ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಎಷ್ಟು ಜನಪರ ಕೆಲಸ ಮಾಡಿದ್ದಾರೆ. ಅದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ ಎನ್ನುವುದು ಈ ಪ್ರದೇಶದ, ರಾಜ್ಯದ, ದೇಶದ ಜನರಿಗೆ ಗೊತ್ತಿದೆ. ಅದನ್ನು ತಿಳಿದುಕೊಳ್ಳದೆ ಮಾತನಾಡುವ ತಪ್ಪನ್ನು ಯಾರೂ ಮಾಡಬಾರದು. ಅದನ್ನು ಜನಸಾಮಾನ್ಯರು ಎಂದಿಗೂ ನಂಬುವುದಿಲ್ಲ” ಎಂದಿದ್ದಾರೆ.

“ಮಲೆನಾಡಿನ ಮೂಲದವರು ಮಾತ್ರ ಅರಣ್ಯ ಉಳಿಸ ಬಲ್ಲರೇ? ಕಡಿಮೆ ಮಳೆ ಬೀಳುವ ಪ್ರದೇಶದವರು ಅದೇ ಕೆಲಸ ಮಾಡಿದರೆ ಅದಕ್ಕೆ ಮಾನ್ಯತೆ ಇಲ್ಲವೇ? ಒಂದು ವೇಳೆ ಬರಗಾಲದ ಪ್ರದೇಶದವರು ಅರಣ್ಯ ಉಳಿಸುವ ಕೆಲಸ ಮಾಡಿದರೆ, ಅದಕ್ಕೆ ವಿರುದ್ಧವಾಗಿ ಮಲೆನಾಡು ಮೂಲದ ಮಾಜಿ ಸಚಿವರಾದ ಆರಗ ಜ್ಞಾನೇಂದ್ರ ಅವರಂತಹ ನಾಯಕರು ಅರಣ್ಯ ನಾಶ ಮಾಡಿದರೆ ಈ ದೇಶದ ಜನ, ಕಾನೂನು, ನ್ಯಾಯಾಲಯಗಳು ಸುಮ್ಮನೆ ಕಣ್ಣು ಮುಚ್ಚಿಕೊಂಡು ಇರಬೇಕೆ” ಎಂದು ಪ್ರಶ್ನಿಸಿದ್ದಾರೆ.

“‘ಅವರು ಕಪ್ಪು ಬಣ್ಣದವರು, ಅವರಿಗೆ ತಲೆ ಕೂದಲಿನಿಂದಾಗಿ ಅಲ್ಪ ಸ್ವಲ್ಪ ಕಾಣುವಂತಿದ್ದಾರೆ’ ಅಂತ ಮಾತಾಡುವುದು ಅವರ ಹೀನ ಪ್ರವೃತ್ತಿಯ ಲಕ್ಷಣ. ಇದರ ಹಿಂದೆ ‘ಕಪ್ಪು ಬಣ್ಣದವರು ಎಂದರೆ ದಲಿತ/ ಆದಿವಾಸಿ ಜಾತಿಯವರು, ಬಿಳಿ ಬಣ್ಣದವರು ಎಂದರೆ ಮೇಲು ಜಾತಿಯವರು’ ಎನ್ನುವ ಕೀಳು ಮನೋಭಾವ ಎದ್ದು ಕಾಣುತ್ತಿದ್ದ. ಇದು ಬಿಜೆಪಿಯ ಮಾಜಿ ಸಚಿವರಾದ ಅರಗ ಜ್ಞಾನೇಂದ್ರ ಅವರ ಜಾತಿ ದುರಹಂಕಾರದ ಮಾತು” ಎಂದು ಕಿಡಿಕಾರಿದ್ದಾರೆ.

“ಆರಗ ಜ್ಞಾನೇಂದ್ರ ಅವರೂ ಸೇರಿದಂತೆ ಅನೇಕರು ಪೂಜಿಸುವ ಉಡುಪಿಯ ಕೃಷ್ಣನ ಬಣ್ಣ ಕಪ್ಪಲ್ಲವೇ? ಅವರ ಊರಾದ ತೀರ್ಥಹಳ್ಳಿಯ ರಾಮೇಶ್ವರ ಮಂದಿರದ ಶಿವಲಿಂಗ ಕಪ್ಪು ಬಣ್ಣದ್ದು ಅಲ್ಲವೇ? ಭಾರತದ ಹವಾಮಾನದ ಕಾರಣದಿಂದಾಗಿ ಇಲ್ಲಿ ಸಹಜವಾಗಿಯೇ ಬಹು ಸಂಖ್ಯಾತ ಜನರ ಬಣ್ಣ ಕಪ್ಪು, ಮಾಜಿ ಸಚಿವರ ಈ ರೀತಿಯ ಕ್ಷುಲ್ಲಕ ಮಾತುಗಳಿಂದ ಈ ದೇಶದ ಅಸಂಖ್ಯಾತ ಜನರಿಗೆ ಅವಮಾನ ಮಾಡಿದ್ದಾರೆ” ಅಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಎಲ್ಲಕ್ಕಿಂತ ಮುಖ್ಯವಾಗಿ ಕಸ್ತೂರಿರಂಗನ್ ವರದಿ ಇರುವುದು ಇಡೀ ವಿಶ್ವದಲ್ಲಿಯೇ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಅರಣ್ಯ ಉಳಿಸಲಿಕ್ಕಾಗಿ, ಅದು ಈ ದೇಶದ, ಸರ್ವ ಸಮುದಾಯದ ಸಂಪತ್ತೇ ಹೊರತು ಯಾವುದೇ ಒಂದು ಜಿಲ್ಲೆಯ, ಪ್ರದೇಶದವರ ಖಾಸಗಿ ಆಸ್ತಿ ಅಲ್ಲ, ಇದನ್ನು ಉಳಿಸುವುದು ಈ ದೇಶದ ಎಲ್ಲ ನಾಗರಿಕರ ಮೂಲಭೂತ ಕರ್ತವ್ಯ. ಇದು ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ. ಈ ವರದಿಯ ಬಗ್ಗೆ ವಿರೋಧ ಮಾಡುತ್ತಿರುವ ಆರಗ ಜ್ಞಾನೇಂದ್ರ ಅವರು ಪರಿಸರ ನಾಶದ ಮಾತು ಆಡಿದ್ದಾರೆ. ಅಂದರೆ ಅವರು ಸಂವಿಧಾನ ವಿರೋಧಿ ಮಾತುಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಣಭೇದ ಮಾಡುವ ಮೂಲಕ ಜನರ ಮನಸ್ಥಿತಿಗೆ ಅಶಾಂತಿಗೆ ಕಾರಣವಾಗಿರುವ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಬೇಕು ಮತ್ತು ಜನರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X