ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ(ಕೋಮುಲ್) ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಕೆಯಾಗಿದ್ದ ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಅವರ ಆಸ್ತಿ ಮೇಲೆ ಇಡಿ ದಾಳಿ ನಡೆಸಿದ್ದು, ಆಸಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಇಡಿ ಬೆಂಗಳೂರು ವಲಯ ಈ ಆಸ್ತಿ ಜಪ್ತಿ ಮಾಡಿದೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದು, ಕೆ ವೈ ನಂಜೇಗೌಡ ಮತ್ತು ಇತರರಿಗೆ ಸೇರಿದ 1.32 ಕೋಟಿ ರೂ. ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿದೆ.
ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ನೇಮಕಾತಿ ಹಗರಣ 2023ರ ಕುರಿತು ಇಡಿ ತನಿಖೆಯನ್ನು ನಡೆಸುತ್ತಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಮನಿ ಲಾಡ್ರಿಂಗ್ ಪ್ರಕರಣದಡಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
3ನೇ ಬಾರಿಗೆ ಅಧ್ಯಕ್ಷ ಪಟ್ಟ: ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್) ಅಧ್ಯಕ್ಷರಾಗಿ 3ನೇ ಬಾರಿಗೆ ಕೆ ವೈ ನಂಜೇಗೌಡ ಆಯ್ಕೆಯಾಗಿದ್ದರು. ಕೋಮುಲ್ ನೇಮಕಾತಿ ಹಗರಣದ ಕುರಿತು ರಾಜ್ಯದಲ್ಲಿ ಭಾರೀ ಚರ್ಚೆ ನಡೆದಿತ್ತು.
2024ರ ಜನವರಿಯಲ್ಲಿ ಈ ಹಗರಣದ ತನಿಖೆ ಕೈಗೊಂಡಿದ್ದ ಇ.ಡಿ, ಶಾಸಕ ಕೆ ವೈ ನಂಜೇಗೌಡ ಮನೆಯಲ್ಲಿ ಶೋಧ ಕಾರ್ಯ ನಡೆಸಿತ್ತು. ಈ ದಾಳಿಯ ಬಳಿಕ ಮಾತನಾಡಿದ್ದ ಶಾಸಕರು, “ನನ್ನಂಥ ಸಾಮಾನ್ಯದವನ ಮನೆಗೆ ಇಡಿ ಬಂದಿರುವುದು ನೋವಿನ ಸಂಗತಿಯಾಗಿದೆ. ನಮ್ಮ ಕುಟುಂಬದವರು ಎಲ್ಲ ಮಾಹಿತಿ ಕೊಟ್ಟಿದ್ದೇವೆ” ಎಂದು ಹೇಳಿದ್ದರು.
“ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಂದ ಹೊರಬರುವ ವಿಶ್ವಾಸವಿದೆ. ಅಧಿಕಾರಿಗಳು ಮೂರು ವಿಷಯದ ಕುರಿತು ಪ್ರಸ್ತಾಪ ಮಾಡಿದ್ದರು. ಈ ಬಗ್ಗೆ ನಾವು ಸಮರ್ಪಕ ಉತ್ತರ ಕೊಟ್ಟಿದ್ದೇವೆ. ಮುಂದೆಯೂ ವಿಚಾರಣೆಗೆ ಹಾಜರಾಗುತ್ತೇನೆ” ಎಂದು ತಿಳಿಸಿದ್ದರು.
ಇ.ಡಿ ಪ್ರಕಾರ ಕೋಮುಲ್ ನೇಮಕಾತಿಗಾಗಿ 2023ರ ಡಿಸೆಂಬರ್‌ನಲ್ಲಿ 320 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು. ಆಯ್ಕೆಯಾದ 75 ಅಭ್ಯರ್ಥಿಗಳ ಪಟ್ಟಿಯನ್ನು ಕೋಮುಲ್‌ಗೆ ಕಳಿಸಲಾಯಿತು, ಅನುಮೋದನೆ ಸಿಕ್ಕಿತು. ಆದರೆ ಅಭ್ಯರ್ಥಿಗಳ ಫಲಿತಾಂಶಗಳನ್ನು ಪ್ರಕಟಿಸದೇ ಅವರನ್ನು ತರಬೇತಿಗೆ ಕಳಿಸಲಾಗಿದೆ ಎನ್ನಲಾಗಿದೆ.
ಜಾರಿ ನಿರ್ದೇಶನಾಲಯ, ಕೋಮುಲ್ ನೇಮಕಾತಿ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ರಾಜ್ಯಪಾಲರು ಮತ್ತು ಲೋಕಾಯುಕ್ತಕ್ಕೆ ಪತ್ರವನ್ನು ಬರೆದಿತ್ತು. ಮಂಗಳೂರು ವಿಶ್ವವಿದ್ಯಾಲಯ ಈ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ನಡೆಸಿತ್ತು.
ಕೆ ವೈ ನಂಜೇಗೌಡ ಮತ್ತು ಅವರ ಸಹಚರರ ವಿರುದ್ಧ ಆರೋಪಗಳನ್ನು ಮಾಡಲಾಗಿತ್ತು. ಉದ್ಯೋಗ ನೀಡಲು ಹಣ ಪಡೆಯಲಾಗಿದೆ ಎಂಬುದು ಗಂಭೀರ ಆರೋಪವಾಗಿತ್ತು. ಆದ್ದರಿಂದ ಇ.ಡಿ ಶಾಸಕರ ನಿವಾಸದ ಮೇಲೆ ದಾಳಿಯನ್ನು ಮಾಡಿತ್ತು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ದಲಿತರ ಭೂಮಿ, ವಸತಿ ಹಕ್ಕಿಗಾಗಿ ನಾಳೆ ಧರಣಿ
“ನೇಮಕಗೊಂಡ 75 ಅಭ್ಯರ್ಥಿಗಳ ಹೇಳಿಕೆಯನ್ನು ಇಡಿ ದಾಖಲು ಮಾಡಿಕೊಂಡಿತ್ತು. ಅಭ್ಯರ್ಥಿಗಳು ನೇಮಕಾತಿ ವೇಳೆ ಹಣ ಕೊಟ್ಟಿದ್ದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ಈ ಕುರಿತು ತನಿಖೆ ಮಾಡಬೇಕು” ಎಂದು ಲೋಕಾಯುಕ್ತರಿಗೆ ಇಡಿ ತಿಳಿಸಿತ್ತು.
“ಕೋಮುಲ್‌ನಲ್ಲಿ 81 ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಗೆ ಶೇ.85 ಮತ್ತು ಸಂದರ್ಶನಕ್ಕೆ ಶೇ.15ರಷ್ಟು ಅಂಕ ನಿಗದಿ ಮಾಡಲಾಗಿತ್ತು. ಆದರೆ ಒಎಂಆರ್ ಶೀಟ್‌ಗಳನ್ನು ತಿರುಚಿ ಕೆಲವು ಅಭ್ಯರ್ಥಿಗಳಿಗೆ ಮಾತ್ರ ಅನುಕೂಲ ಮಾಡಿಕೊಟ್ಟು ಅವರಿಂದ ₹30 ಲಕ್ಷದವರೆಗೆ ಹಣ ಪಡೆಯಲಾಗಿದೆ” ಎಂದು ಆರೋಪಿಸಲಾಗಿತ್ತು.