ಕಳೆದ ಮಾರ್ಚ್‌ನಲ್ಲಿ ಸಂಭವಿಸಿದ ಅಗ್ನಿ ಅನಾಹುತ ಸಂದರ್ಭ ನವದೆಹಲಿಯ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ನೋಟಿನ ಕಂತೆಗಳು ಪತ್ತೆಯಾದ ಘಟನೆ ಬಳಿಕ ವಿವಾದದ ಕೇಂದ್ರ ಬಿಂದುವಾಗಿರುವ ನ್ಯಾಯಮೂರ್ತಿ ಯಶವಂತ್ ವರ್ಮಾ ವಿಶೇಷ ತನಿಖಾ ತಂಡದ ವರದಿ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ತನಿಖಾ ತಂಡ ನೀಡಿದ್ದ ವರದಿಯನ್ನು ಅಮಾನ್ಯ ಮಾಡುವಂತೆ ಕೋರಿ ನ್ಯಾಯಮೂರ್ತಿ ವರ್ಮಾ ಅರ್ಜಿ ಸಲ್ಲಿಸಿದ್ದಾರೆ. ಅಧಿಕೃತ ನಿವಾಸದಲ್ಲಿ ಪತ್ತೆಯಾದ ನಗದಿನ ವಿಚಾರದಲ್ಲಿ ನ್ಯಾಯಮೂರ್ತಿ ವರ್ಮಾ ರಹಸ್ಯ ಅಥವಾ ಸಕ್ರಿಯ ನಿಯಂತ್ರಣ ಹೊಂದಿದ್ದಕ್ಕೆ ಪ್ರಬಲವಾದ ಪುರಾವೆ ಇದೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿತ್ತು.
ಇದನ್ನು ಓದಿದ್ದೀರಾ? ಹಣ ಪತ್ತೆ ಹಗರಣ: ನ್ಯಾಯಮೂರ್ತಿ ವರ್ಮಾ ದೈನಂದಿನ ವಿಚಾರಣೆ ಮಾಡುವಂತಿಲ್ಲ, ಆದೇಶ- ತೀರ್ಪು ನೀಡುವಂತಿಲ್ಲ
ನ್ಯಾಯಮೂರ್ತಿ ವರ್ಮಾ ವಿರುದ್ಧದ ವಾಗ್ದಂಡನೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಸಂಜೀವ್ ಖನ್ನಾ ಮಾಡಿದ್ದ ಶಿಫಾರಸ್ಸು ರದ್ದು ಪಡಿಸುವಂತೆಯೂ ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಸಂವಿಧಾನಾತ್ಮಕ ಹುದ್ದೆಯ ಹಾಗೂ ವೈಕ್ತಿಯ ಹಕ್ಕುಗಳಿಗೆ ವಿರುದ್ಧವಾಗಿ ತೀರಾ ಒರಟಾಗಿ ಸಿದ್ಧಪಡಿಸಿದ ಆಧಾರ ರಹಿತ ವರದಿ ಇದಾಗಿದೆ ಎಂದು ನ್ಯಾಯಮೂರ್ತಿ ಪ್ರತಿಪಾದಿಸಿದ್ದಾರೆ.
ನ್ಯಾಯಮೂರ್ತಿ ವರ್ಮಾ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಯನ್ನು ಸರ್ಕಾರ ಮುಂದಿನ ಮುಂಗಾರು ಅಧಿವೇಶನದಲ್ಲಿ ಆರಂಭಿಸಲಿದ್ದು, ಅಧಿವೇಶನ ಆರಂಭಕ್ಕೆ ಮುನ್ನ ಈ ಅರ್ಜಿ ಸಲ್ಲಿಕೆಯಾಗಿದೆ.
ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಮೂವರು ನ್ಯಾಯಮೂರ್ತಿಗಳ ತಂಡ ಸಂಪೂರ್ಣ ಹಾಗೂ ನ್ಯಾಯಸಮ್ಮತ ವಿಚಾರಣೆ ನಡೆಸದೇ ಪ್ರತಿಕೂಲ ವರದಿ ನೀಡಿದೆ ಎನ್ನುವುದು ನ್ಯಾಯಮೂರ್ತಿ ವರ್ಮಾ ಅವರ ವಾದ ಎಂದು ಘಟನಾವಳಿಗಳ ಬಗ್ಗೆ ಮಾಹಿತಿ ಇರುವ ಮೂಲಗಳು ಹೇಳಿವೆ.