ಹನ್ನೆರಡನೇ ಶತಮಾನದಲ್ಲಿ ಶರಣರು ಬರೆದ ವಚನ ಸಾಹಿತ್ಯ ಭಾರತೀಯ ತತ್ವಶಾಸ್ತ್ರ ಪರಂಪರೆಯ ಬಹುದೊಡ್ಡ ಭಾಗವಾಗಿವೆ. ವೈಚಾರಿಕ ಅರಿವು, ನೈತಿಕ ಹೊಣೆಗಾರಿಕೆ ವಚನಗಳ ತಾತ್ವಿಕತೆಯಾಗಿದೆ ಎಂದು ಸಿಯುಕೆ ಶಿಕ್ಷಣಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಯೂರ ಪೂಜಾರಿ ಹೇಳಿದರು.
ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಶಿಕ್ಷಣಶಾಸ್ತ್ರ ವಿಭಾಗದಿಂದ ಗುರುವಾರ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಸಮಕಾಲೀನ ಶೈಕ್ಷಣಿಕ ಸವಾಲು ಮತ್ತು ಸಾಧ್ಯತೆ, ಕುರಿತ ಸಂವಾದದಲ್ಲಿ ಮಾತನಾಡಿದ ಅವರು ಮಾತನಾಡಿದರು.
ʼಉನ್ನತ ಶಿಕ್ಷಣದಲ್ಲಿ ವಚನ ಸಾಹಿತ್ಯ ಮತ್ತು ವಚನಕಾರರ ಅಧ್ಯಯನ ಈ ಕಾಲದ ಅಗತ್ಯ. ವಚನಗಳು, ಬಸವಣ್ಣ, ಅಲ್ಲಮ ಉನ್ನತ ಶಿಕ್ಷಣದಲ್ಲಿ ಸಂಶೋಧನೆ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಮರ್ಶೆಯ ಸ್ವರೂಪ ಪಡೆಯುವುದು ಮುಖ್ಯ. ಹಾಗೆಯೇ ಮೌಲ್ಯಗಳನ್ನು ಬೆಳೆಸುವ , ಚಾರಿತ್ರಿಕ ಪ್ರಜ್ಞೆ ರೂಪಿಸುವ ನಿಟ್ಟಿನಲ್ಲಿ ಶಿಕ್ಷಣದ ಬೆಳವಣಿಗೆ ನಡೆಯಬೇಕುʼ ಎಂದರು.
ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕಾಸ ಕುಮಾರ್ ಮಾತನಾಡಿ, ʼಬಸವಣ್ಣ ಮತ್ತು ಅವರ ಸಮಕಾಲೀನ ವಚನಕಾರರ ಚಾರಿತ್ರಿಕ ಸಂದರ್ಭ ಅನಂತವಾದದ್ದು. ಶರಣರು ಕಟ್ಟಿಕೊಟ್ಟ ತಾತ್ವಿಕ ಚಿಂತನೆ ಅತ್ಯಂತ ವೈಚಾರಿಕ, ಬೌದ್ಧಿಕ ನಿಲುವಿನಿಂದ ಕೂಡಿದೆ. ಉತ್ತರ ಭಾರತದ ಜನರಿಗೆ ಶರಣರ ತತ್ವ ಸಿದ್ಧಾಂತಗಳ ಪರಿಚಯವಿಲ್ಲ. ಹಿಂದಿ, ಬೆಂಗಾಲಿ, ಗುಜರಾತಿ ಸೇರಿ ಭಾರತೀಯ ಬೇರೆ ಬೇರೆ ಭಾಷೆಯಲ್ಲಿ ಕನ್ನಡದ ವಚನಗಳ ತರ್ಜುಮೆ ಅತ್ಯಗತ್ಯ. ಭಾರತದ ಹಲವು ವಿಶ್ವವಿದ್ಯಾಲಯಗಳಲ್ಲಿ ವಚನಗಳ ಅಧ್ಯಯನ ನಡೆಯುವ ಅಗತ್ಯವಿದೆ. ಕನ್ನಡೇತರ ಸಾಹಿತ್ಯದ ಓದುಗರಿಗೆ, ಬರಹಗಾರರಿಗೆ ವಚನ ಸಾಹಿತ್ಯ ತಲುಪಬೇಕಾಗಿದೆʼ ಎಂದು ನುಡಿದರು.

ಸಿಯುಕೆ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಮಲ್ಲೇಶ್ ಉಮ್ಮಲ್ಲಾ ಮಾತನಾಡಿ, ʼಶರಣರ ಆರ್ಥಿಕ ಹಾಗೂ ರಾಜಕೀಯ ಚಿಂತನೆ ಅಕಾಡೆಮಿಕ್ ಚರ್ಚೆಯ ಭಾಗವಾಗಬೇಕು. ಇಷ್ಟೂಂದು ವಿಶಿಷ್ಟ ಮತ್ತು ವೈವಿಧ್ಯಮಯ ಬದುಕಿನ ಚಿಂತನೆ ಕಟ್ಟಿಕೊಟ್ಟ ಸಾಹಿತ್ಯ ಭಾರತೀಯ ಸಂದರ್ಭದಲ್ಲಿ ಸಿಗದು. ದೇಶದ ಎಲ್ಲ ವಿಶ್ವವಿದ್ಯಾಲಯದ ಆವರಣಗಳಲ್ಲಿ ವಚನ ಸಾಹಿತ್ಯದ ಚರ್ಚೆಯಾಗಬೇಕುʼ ಎಂದು ತಿಳಿಸಿದರು.
ಸಿಯುಕೆ ಹಳೆಯ ವಿದ್ಯಾರ್ಥಿ ಹಾಗೂ ಬಸವಕಲ್ಯಾಣದ ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಂಗತಿಗಳ ಬಗೆಗೆ ಹೆಚ್ಚು ಗಂಭೀರವಾದ ಚಿಂತನೆ ಹೊಂದಿದೆ ವಚನಗಳು ಜಗತ್ತಿನ ಎಲ್ಲ ಅಕಾಡೆಮಿಕ್ ವಲಯಗಳಲ್ಲಿ ಅನುಸಂಧಾನಕ್ಕೆ ಒಳಗಾಗಬೇಕು. ಎ.ಕೆ.ರಾಮಾನುಜನ್, ಓಎಲ್ ನಾಗಭೂಷಣ ಸ್ವಾಮಿ ಮೊದಲಾದ ವಿದ್ವಾಂಸರು ಹಾಗೂ ಬಸವ ಸಮಿತಿಯ ಸಿಯುಕೆ ವತಿಯಿಂದ ವಚನಗಳು ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಶೈಕ್ಷಣಿಕ ವಲಯದಲ್ಲಿ ಸಂಶೋಧನಾತ್ಮಕ ಭಾಗವಾಗಿ, ಸಾಮಾಜಿಕ, ಸಾಂಸ್ಕೃತಿಕ ನೆಲೆಯಲ್ಲಿ ವಚನಗಳನ್ನು ಗ್ರಹಿಸಲಾಗುತ್ತಿದೆ. ವಚನ ಸಾಹಿತ್ಯದ ಬಹುಶಿಸ್ತೀಯ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಬೇಕುʼ ಎಂದರು.
ಇದನ್ನೂ ಓದಿ : ಬೀದರ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಬಸ್ ಸೌಲಭ್ಯ : ಜು.19 ರಂದು ಚಾಲನೆ
ಕೇರಳ ಕೇಂದ್ರೀಯ ವಿವಿಯ ಡಾ. ಶಿವಕುಮಾರ, ಡಾ. ಸನೂಪ್ ಎಂ. ಎಸ್, ಬಿಹಾರದ ಡಾ. ಓಂಕಾರ, ಒಡಿಸ್ಸಾ ವಿವಿಯ ಡಾ ಸುಶಾಂತ್ ನಾಯಕ, ದೆಹಲಿ ವಿವಿಯ ಡಾ. ಅಖಿಲೇಶ್ ಮಿಶ್ರಾ, ಜೋತ್ಸ್ನಾ, ಡಾ. ಸಂತೋಷ , ಡಾ. ಶಿವಂ, ಪ್ರಸಾದ್ ಸ್ವಾಮಿ, ರಾಜು ಶಿಂಧೆ, ಪವನ ಪಾಟೀಲ, ಗಂಗಾಧರ ಮೊದಲಾದವರು ಇದ್ದರು. ಡಾ. ಬಸವರಾಜ ಖಂಡಾಳೆ ಸ್ವಾಗತಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.